ಮನದ ಶುದ್ಧಿಗೆ ಅನ್ನ ಶುದ್ಧಿಯ ಅಗತ್ಯ

Advertisement

ನಾವು ಭುಂಜಿಸಿದ ಅನ್ನದಿಂದಲೇ ಮನವು ಶುದ್ಧವೂ ಅಶುದ್ಧವೂ ಏಕೆ ಆಗುವುದೆಂದರೆ, ನಾವು ಸೇವಿಸಿದ ಅನ್ನದ ಅತ್ಯಂತ ಸೂಕ್ಷ್ಮಭಾಗವೇ ಕೊನೆಗೆ ಮನದ ಅವಯವವಾಗಿ ಪರಿಣಮಿಸುತ್ತದೆ.
ಕಾರಣ ಅಶುದ್ಧ ಅನ್ನದಿಂದ ಅಶುದ್ಧ ಮನಸ್ಸು ಮತ್ತು ಶುದ್ಧ ಅನ್ನದಿಂದ ಶುದ್ಧ ಮನಸ್ಸು ನಿರ್ಮಾಣಗೊಳ್ಳುವುದು. ಅಂತೆಯೇ ಉಪನಿಷತ್ತು ‘ಅನ್ನಮಯಂ ಹಿ ಸೌಮ್ಯ ಮನಃ’ (ಹೇ ಸೌಮ್ಯನೇ! ಮನಸ್ಸು ಅನ್ನಮಯವಾಗಿದೆ) ಎಂದು ಪ್ರತಿಪಾದಿಸಿದೆ. ಕಾರಣವಿಲ್ಲದೆ ಒಂದೊಂದು ಸಮಯದಲ್ಲಿ ಮನಸ್ಸು ವ್ಯಗ್ರವಾಗುತ್ತದೆ. ಚಿಂತಾಕ್ರಾಂತವಾಗುತ್ತದೆ. ಸಿಟ್ಟು ತುಂಬಿಕೊಳ್ಳುತ್ತದೆ. ಇದೆಲ್ಲಕ್ಕೆ ಕಾರಣ ಹಾಗಾಗುವ ಕೆಲ ದಿನಗಳ ಹಿಂದೆ ಸೇವಿಸಿದ ಅನ್ನವೇ. ಹೀಗೆ ನಾವು ಸೇವಿಸಿದ ಅನ್ನದ ಅತ್ಯಂತ ಸೂಕ್ಷ್ಮಭಾಗವೇ ಮನವಾಗುವುದರಿಂದ ಭಗವದ್ಗೀತೆಯಲ್ಲಿ ತಾಮಸ, ರಾಜಸ, ಮತ್ತು ಸಾತ್ವಿಕವೆಂಬುದಾಗಿ ಅನ್ನದಲ್ಲಿ ಮೂರು ಪ್ರಕಾರಗಳನ್ನು ತಿಳಿಸುವುದಲ್ಲದೇ “ಯುಕ್ತಾಹಾರ ವಿಹಾರಸ್ಯ’ ಎಂದು ಶಾಸ್ತ್ರ ಸಮ್ಮತ ಆಹಾರವನ್ನು ಶಾಸ್ತ್ರ ಸಮ್ಮತ ಪ್ರಮಾಣದಲ್ಲಿ ಸೇವಿಸುವವನಿಗೆ ಮಾತ್ರ ಯೋಗದ ಸಿದ್ಧಿ ಲಭಿಸುವುದೆಂದು ಉಪದೇಶಿಸುವ ಮೂಲಕ ಯೋಗಸಾಧನೆಯಲ್ಲಿ ಅನ್ನದ ಮಹತ್ವವನ್ನು ಪ್ರತಿಪಾದಿಸಲಾಗಿದೆ. ಅಂತೆಯೇ ವೀರಶೈವ ಸಮಾಜದಲ್ಲಿಯೂ ಕೂಡ ಶಿವಯೋಗ ಸಾಧಕರಾದ ಸ್ವಾಮಿಗಳು ಮಡಿಯಿಂದ ತಯಾರಿಸಲ್ಪಟ್ಟ ಹಾಗು ಲಿಂಗಧಾರಿಗಳೇ ಮಾಡಿದ ಅಡಿಗೆಯನ್ನು ಮಾತ್ರ ಸೇವಿಸಬೇಕು ಎಂಬ ಕಟ್ಟಳೆಯನ್ನು ಉಪದೇಶಿಸುವ ಮೂಲಕ ಬದುಕಿಗೆ ಸಾತ್ವಿಕ ಅನ್ನಸೇವನೆಯು ಅವಶ್ಯವೆಂಬುದನ್ನು ಪ್ರತಿಪಾದಿಸಲಾಗಿದೆ.
ಒಳ್ಳೆಯ ಭಾವನೆಯಿಂದ ಮಾಡಿದ ಅಡುಗೆಯನ್ನು ಭುಂಜಿಸಿದರೆ ಒಳ್ಳೆಯ ಮನಸ್ಸು ನಿರ್ಮಾಣವಾಗುತ್ತದೆ. ತಾಯಿ ಉಣಿಸುವ ಅನ್ನದಿಂದ ಮಗು ದಷ್ಟಪುಷ್ಟವಾಗಿ ಬೆಳೆಯುತ್ತದೆ. ದಾದಿ ಉಣಿಸಿದ ಮಗು ಹೇಗಿರುತ್ತದೆ ಎಂದು ಹೇಳಬೇಕಿಲ್ಲ. ಅಡುಗೆ ಮಾಡಿದವರ ಊಟಕ್ಕೆ ನೀಡುವವರ ಮನೋಭೂಮಿಕೆಯಂತೆ ಉಂಡವರ ಮನಸ್ಸು ಪರಿವರ್ತನೆಗೊಳ್ಳುತ್ತದೆ ಎಂಬ ಸೂಕ್ಷ್ಮತೆಗಳನ್ನು ನಾವು ಅರಿಯಬೇಕು. ನಾವು ಸೇವಿಸುವ ಅನ್ನದ ಸೂಕ್ಷ್ಮಭಾಗವು ಮನಸ್ಸಾಗಿ ರೂಪುಗೊಳ್ಳುವುದರಿಂದ ಮನಸ್ಸನ್ನು ನಿರ್ಮಲಗೊಳಿಸಬೇಕಾದರೆ ಅದನ್ನು ಅನ್ನದಿಂದಲೇ ಪ್ರಾರಂಭಿಸಬೇಕು. ಮನವು ಪವಿತ್ರವಾಗಬೇಕಾದರೆ ನಾವು ಸೇವಿಸುವ ಅನ್ನವು ಪವಿತ್ರವಾಗಿರಬೇಕು. ಅದನ್ನು ಶುದ್ಧಗೊಳಿಸಬೇಕು.