ಮನಸ್ಸು ಒಂದಾಗಿರುವಾಗ ಸಮ ಬದುಕು ಕಷ್ಟವೇನಲ್ಲ

Advertisement

ಕರ್ನಾಟಕದ ಏಕೀಕರಣ ಈಗ ನೆಲೆಯೂರಿ ಬೇರುಗಳನ್ನು ಬಿಟ್ಟಿರುವುದರಿಂದ ಮುಂದಿನ ದಿನಗಳಲ್ಲಿ ಸರ್ವಾಂಗೀಣ ಬೆಳವಣಿಗೆ ಕಷ್ಟದ ಕೆಲಸವೇನಲ್ಲ. ಪ್ರಾದೇಶಿಕ ಅಸಮಾನತೆ ದೂರವಾಗುವ ದಿನಗಳು ದೂರವಿಲ್ಲ.

ಇಂದು ರಾಜ್ಯೋತ್ಸವ. ಕರ್ನಾಟಕ ಹೆಸರು ಬಂದೇ ೫೦ ವರ್ಷ ಕಳೆದಿದೆ. ಎಲ್ಲ ಕನ್ನಡ ಮನಸ್ಸುಗಳು ಒಂದುಗೂಡಿವೆ. ಕನ್ನಡಿಗರು ಉದಾರವಾದಿಗಳು, ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡು ಅದರಂತೆ ನಡೆಯುತ್ತಾರೆ ಎಂಬುದು ಇಡೀ ದೇಶಕ್ಕೆ ತಿಳಿದಿದೆ. ದೇಶದ ಉತ್ತಮ ಆರ್ಥಿಕತೆಯನ್ನು ಕಂಡ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಐಟಿ-ಬಿಟಿ ತಂತ್ರಜ್ಞಾನ ಇಡೀ ರಾಜ್ಯದ ದಿಕ್ಕನ್ನೇ ಬದಲಿಸಿದೆ. ದೇಶದ ಒಟ್ಟು ಜಿಡಿಪಿಯಲ್ಲಿ ರಾಜ್ಯದ ಕೊಡುಗೆ ಶೇ.೮.೮. ಐಟಿ ರಫ್ತಿನಲ್ಲಿ ಕರ್ನಾಟಕದ್ದೇ ಶೇ. ೪೦ ಪಾಲು ಎಂಬುದು ಹೆಮ್ಮೆಯ ಸಂಗತಿ. ಕನ್ನಡ ಮಕ್ಕಳು ಈಗ ಜಗತ್ತಿನ ಎಲ್ಲ ದೇಶಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿ ಹೆಸರು ಗಳಿಸಿದ್ದಾರೆ. ನಮ್ಮಲ್ಲಿ ಇಸ್ರೋ, ಎಚ್‌ಎಎಲ್, ಭಾರತೀಯ ವಿಜ್ಞಾನ ಮಂದಿರಗಳು ಜಾಗತಿಕ ಮಟ್ಟದಲ್ಲಿ ಹೆಸರು ಗಳಿಸಿದೆ. ಇದೇ ಉತ್ಸಾಹ ಮುಂದಿನ ದಿನಗಳಲ್ಲಿ ಮುಂದುವರೆಯಬೇಕು ಎಂದರೆ ಎಲ್ಲ ಜಿಲ್ಲೆಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಬೆಳವಣಿಗೆ ಆಗಬೇಕು. ಹಿಂದೆ ರಸ್ತೆ ಮತ್ತಿತರ ಸಾರಿಗೆ ವ್ಯವಸ್ಥೆ ಉತ್ತಮವಾಗಿರಲಿಲ್ಲ. ಈಗ ಬಸ್, ರೈಲು. ವಿಮಾನ ಸಂಪರ್ಕ ಉತ್ತಮಗೊಂಡಿದೆ. ಬೆಂಗಳೂರು ನಗರಕ್ಕೆ ಬೆಳಗಾವಿ, ಬೀದರ್‌ಗೆ ದೂರವೇನಲ್ಲ. ಜನಸಾಮಾನ್ಯರ ಸಂಚಾರ ಉತ್ತಮಗೊಂಡಿದೆ. ಭಾಷೆಯಲ್ಲಿ ಪ್ರಾದೇಶಿಕ ವ್ಯತ್ಯಾಸಗಳಿದ್ದರೂ ದಿನನಿತ್ಯ ವ್ಯವಹಾರಗಳಿಗೆ ಇದು ಅಡ್ಡಿಯಾಗಿಲ್ಲ. ಯುವ ಜನಾಂಗ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕೆಲಸಮಾಡಲು ಹಿಂಜರಿಯುತ್ತಿಲ್ಲ. ಕರ್ನಾಟಕ ಏಕೀಕರಣಗೊಂಡಾಗ ಉತ್ತರದವರು ಅದನ್ನು ಬಯಸಿದ್ದರು. ದಕ್ಷಿಣದವರಲ್ಲಿ ಮಾನಸಿಕ ಹಿಂಜರಿತ ಇದ್ದದ್ದು ನಿಜ. ಆದರೆ ಈಗ ಅದು ನಿವಾರಣೆಯಾಗಿದೆ. ರಾಜಕೀಯ ಅಧಿಕಾರ ಸಮಾನವಾಗಿ ಹಂಚಿಕೆಯಾಗಿದೆ. ಬೆಂಗಳೂರಿನಲ್ಲಿ ಬೆಳಗಾವಿ ಮತ್ತು ಕಲಬುರ್ಗಿಯ ಪ್ರಭಾವವನ್ನು ಕಾಣಬಹುದು. ರಾಜಕೀಯ ಅಧಿಕಾರ ವಿಕೇಂದ್ರೀಕರಣವಾದಂತೆ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆ ಬರುವುದು ಅಗತ್ಯ. ಡಾ, ನಂಜುಂಡಪ್ಪ ಸಮಿತಿ ೨೦೦೦ ರಲ್ಲಿ ನೀಡಿದ ವರದಿಯಂತೆ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಹಿಂದೆ ಉತ್ತರ ಕರ್ನಾಟಕದಲ್ಲಿ ೫೯ ತಾಲೂಕು ಹಿಂದುಳಿದಿದ್ದವು. ಅದರಲ್ಲಿ ೨೬ ತಾಲೂಕು ಅತಿ ಹಿಂದುಳಿದವು. ಈಗ ಆ ಪರಿಸ್ಥಿತಿ ಇಲ್ಲ. ಬರಗಾಲ ಬರುತ್ತಿದ್ದರೂ ಅದನ್ನು ಎದುರಿಸುವ ಶಕ್ತಿ ಬಂದಿದೆ. ಕಲ್ಯಾಣ ಕರ್ನಾಟಕಕ್ಕೆ ೩೭೧ ಜೆ ಸ್ಥಾನಮಾನ ಸಿಕ್ಕ ಮೇಲೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಹೆಚ್ಚಿನ ಅವಕಾಶ ಲಭಿಸುತ್ತಿವೆ. ಉತ್ತರ ಕರ್ನಾಟಕದಲ್ಲಿ ಶೇ ೪೭ ರಷ್ಟು ಬಡವರು ಇದ್ದಾರೆ. ಬಡತನ ನಿವಾರಣೆಗೆ ಇನ್ನೂ ಗಮನಹರಿಸಬೇಕಿದೆ.ಕಲಬುರ್ಗಿಯ ಆದಾಯವನ್ನು ಬೆಂಗಳೂರಿಗೆ ಹೋಲಿಸಿದರೆ ೫ ಪಟ್ಟು ಕಡಿಮೆ. ದಕ್ಷಿಣ ಕನ್ನಡಕ್ಕೆ ಹೋಲಿಸಿದರೆ ಮೂರೂವರೆ ಪಟ್ಟು ಅಂತರ ಇದೆ. ಆರೋಗ್ಯ ಕ್ಷೇತ್ರದಲ್ಲಿ ಇನ್ನೂ ಪ್ರಗತಿ ಸಾಧಿಸಬೇಕಿದೆ. ನೈರ್ಮಲ್ಯ ಇನ್ನೂ ಉತ್ತರ ಕರ್ನಾಟಕದಲ್ಲಿ ಸಮಾಧಾನಕರ ಮಟ್ಟ ತಲುಪಿಲ್ಲ. ಯಾದಗಿರಿ, ಕಲಬುರ್ಗಿ, ವಿಜಯಪುರ ಜಿಲ್ಲೆಗಳಲ್ಲಿ ಒಳಚರಂಡಿ ವ್ಯವಸ್ಥೆ ಉತ್ತಮ ಹಂತ ತಲುಪಿಲ್ಲ. ಮಹಿಳೆಯರ ಆರೋಗ್ಯ ನೋಡಿದರೆ ರಾಯಚೂರು ಜಿಲ್ಲೆಯಲ್ಲಿ ಶೇ.೬೦.೪ ಮಹಿಳೆಯರಲ್ಲಿ ರಕ್ತಹೀನತೆ ಕಂಡು ಬಂದಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸೂಚ್ಯಂಕ ನೋಡಿದರೆ ರಾಯಚೂರು, ಕಲಬುರ್ಗಿ, ಯಾದಗಿರಿ ಜಿಲ್ಲೆ ಇನ್ನೂ ಕೆಳಹಂತದಲ್ಲಿವೆ.
ಸರ್ವರಿಗೂ ಸಮಬಾಳು ಸಮಪಾಲು ತರುವುದು ದೂರದ ಮಾತೇನಲ್ಲ. ಈಗ ರಾಜ್ಯದಲ್ಲಿ ಹೊಸ ಪೀಳಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವ ಹಂತಕ್ಕೆ ಬಂದಿದೆ. ಅವರಿಗೆ ಇಡೀ ಜಗತ್ತು ಕಾರ್ಯಕ್ಷೇತ್ರವಾಗಿ ಕಂಡು ಬರುತ್ತಿರುವುದರಿಂದ ಅವರು ಜಾಗತಿಕ ಮಟ್ಟದ ಸಮಸ್ಯೆಗಳನ್ನು ಎದುರಿಸಲು ಸಿದ್ಧವಾಗಿದ್ದಾರೆ. ಏಕೀಕರಣ ಇಡೀ ರಾಜ್ಯವನ್ನು ಮಾನಸಿಕವಾಗಿ ಹೊಸ ಸವಾಲುಗಳನ್ನು ಎದುರಿಸಲು ಸಿದ್ಧಪಡಿಸಿದೆ. ಮುಂದಿನ ದಿನಗಳಲ್ಲಿ ಯುವ ಪೀಳಿಗೆ ತನ್ನ ಎಲ್ಲ ಶಕ್ತಿ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಬೌದ್ಧಿಕವಾಗಿ ಸಿದ್ಧಗೊಂಡಿದೆ. ಇಡೀ ರಾಜ್ಯದ ಪ್ರಬುದ್ಧತೆ ಮುಂದಿನ ದಿನಗಳಲ್ಲಿ ಹೊಸ ಬದುಕನ್ನು ಸೃಷ್ಟಿಸಲು ಕಾರಣವಾಗಲಿದೆ. ಆದರೆ ಪ್ರಾದೇಶಿಕ ಅಸಮತೋಲನ ಇನ್ನೂ ಢಾಳಾಗಿ ಎದ್ದು ಕಾಣುತ್ತಿರುವ ಹಿನ್ನೆಲೆಯಲ್ಲಿ ಏಕೀಕರಣದ ಉದ್ದೇಶಕ್ಕೆ ಹಿನ್ನಡೆ ಆಗಬಾರದು. ಇದು ಭ್ರಮನಿರಸನ ಮತ್ತು ಅತೃಪ್ತಿಗೆ ಕಾರಣವಾಗದಿರಲಿ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಈ ನಿಟ್ಟಿನಲ್ಲಿ ಸೂಕ್ತ ಕರಮ ಕೈಗೊಳ್ಳಬೇಕು.