ಮನುಷ್ಯ ಎಷ್ಟೇ ಸ್ವತಂತ್ರನಿದ್ದರೂ ಭಗವಂತನನ್ನು ಅವಲಂಬಿಸಲೇಬೇಕು. ಮನುಷ್ಯ ಭಗವಂತನ ಆಧೀನ.
ಸತ್ಯಧರ್ಮತೀರ್ಥರು ಹೇಳುತ್ತಾರೆ. ಉತ್ತಮರು ಪರಮಾತ್ಮನ ಗುಣಗಳನ್ನು ಕೊಂಡಾಡುತ್ತಾರೆ. ಆ ಭಗವಂತನ ಗುಣಗಳು ಹೇಗಿವೆ ಎಂದರೆ, ರಮಾ ಬ್ರಹ್ಮಾದಿ ದೇವತೆಗಳೆಲ್ಲ ಆ ಭಗವಂತನ ಗುಣಗಳನ್ನು ವರ್ಣನೆ ಮಾಡುತ್ತಲೇ ಇರುತ್ತಾರೆ.
ಅಲ್ಪಸ್ವಲ್ಪ ತಿಳಿದ ನಮಗೆಯೇ ವೈರಾಗ್ಯ ಬರುವುದಾದರೆ, ರಮಾ ಬ್ರಹ್ಮಾದಿ ದೇವತೆಗಳಿಗೆ ಭಗವಂತನ ಉಪದೇಶ ನಿರಂತವಾಗಿ ದೊರೆಯುತ್ತಿರುತ್ತದೆ. ಅಲ್ಲದೆ ತಾವೂ ಕೂಡ ಉಪದೇಶವನ್ನು ಬೇರೆಯವರಿಗೆ ಮಾಡುತ್ತಿರುತ್ತಾರೆ. ಅಂತಹ ಮಹಾನುಭಾವರಿಗೆ ಅದೆಷ್ಟು ವೈರಾಗ್ಯ ಬಂದಿರಲಿಕ್ಕಿಲ್ಲ.
ಆದರೆ ಅವರಿಗೂ ಕೂಡ ಭಗವಂತನ ವಿಷಯಕ ಗುಣಗಾನ ಮಾಡುವುದರ ಬಗೆಗೆ ವೈರಾಗ್ಯ ಬಂದಿರುವುದಿಲ್ಲ. ಎಂದಿರುವಾಗ ಅತ್ಯಲ್ಪ ತಿಳಿದ ನನಗೆ ಹೇಗೆ ವೈರಾಗ್ಯ ಬರುತ್ತದೆ. ಹೇಗೆ ತೃಪ್ತಿಯಾದೀತು ಎಂಬುದನ್ನು ಹೇಳುತ್ತಾರೆ. ಅಥವಾ ಆ ಭಗವಂತನ ಗುಣಗಳು ಹೇಗಿವೆ ಎಂದರೆ, ಉತ್ತಮಃ : ನಮ್ಮೆಲ್ಲರ ದುಃಖಕ್ಕೆ ಕಾರಣವಾದ ಈ ತಮವನ್ನು ಅಂದರೆ ಸಂಸಾರಕ್ಕೆ ಕಾರಣವಾದ ಭಗವಂತನ ಕುರಿತಾದ ಅಜ್ಞಾನ, ಆ ಅಜ್ಞಾನ ಇರುವವರೆಗೆ ಸಂಸಾರ ತಪ್ಪುವುದಿಲ್ಲ. ಇಂತಹ ಅಜ್ಞಾನವನ್ನು ಕಿತ್ತು ಎಸೆಯುವ ಸಾಮರ್ಥ್ಯ ಆ ಭಗವಂತನ ಗುಣಾನುಗಾನಕ್ಕೆ ಇದೆ. ಹೀಗಿರುವಾಗ ಇಂತಹ ಭಗವಂತನ ಗುಣಾನುಗಾನ ಸ್ವತಃ ಮಾಡದೆ? ಅಥವಾ ನೀವು ಮಾಡುವಾಗ ಕೇಳದೆ ಹೇಗೆ ಇರುವುದಕ್ಕೆ ಸಾಧ್ಯ?.
ಈ ಭಗವಂತನ ಗುಣಾನುಗಾನಕ್ಕೆ ನನಗೆ ದೊಡ್ಡ ಲಾಭವಿದೆ. ಒಬ್ಬ ರೋಗಿ ವೈದ್ಯನ ಹತ್ತಿರ ಪರೀಕ್ಷೆ ಮಾಡಿಸಿಕೊಳ್ಳಲು ಹೋದಾಗ, ಸ್ವಲ್ಪ ಹೊತ್ತು ಹೋಗಿ ಎದ್ದು ಬರಲಿಕ್ಕೆ ಸಾಧ್ಯವೇ? ಇದರಿಂದ ಅವನಿಗೆ ಲಾಭವಿಲ್ಲ. ಅಲ್ಲಿ ಸಂಪೂರ್ಣ ಪರೀಕ್ಷೆ ಆಗಬೇಕು. ಇನ್ನೊಬ್ಬರಿಗೆ ಲಾಭ ಮಾಡಿಸುವವನಾದರೆ ಅವನಿಗೆ ಚಿಂತೆ ಇಲ್ಲ. ತನ್ನ ರೋಗಕ್ಕಾಗಿ ವೈದ್ಯರ ಹತ್ತಿರ ಹೊಗಿದ್ದರೆ ತನಗೆ ಹಣಬೇಕು. ಎಂದು ದಾನ ಕೊಡುವವರ ಹತ್ತಿರ ಹೋದಾಗ ಎಷ್ಟೊತ್ತಾದರೂ ಕಾಯುತ್ತಾನೆ. ಹಾಗೆ ಸಣ್ಣ ಪುಟ್ಟ ರೋಗಗಳನ್ನು ಕಳೆದುಕೊಳ್ಳಲು ವೈದ್ಯರನ್ನು ಕಾಯುವ ತಾಳ್ಮೆ ಇರಬೇಕು. ಹೀಗಿರುವಾಗ ಸಂಸಾರ ಎಂಬ ದೊಡ್ಡ ರೋಗಕ್ಕೆ ತುತ್ತಾದ ನಾವು ಸಂಸಾರವೆಂಬ ಅಜ್ಞಾನವನ್ನೇ ಕಿತ್ತೆಸೆಯುವ ಉತ್ತಮನಾದ ಭಗವಂತನ ಹತ್ತಿರ ಹೋಗಲೇಬೇಕು.