ಬೆಂಗಳೂರು: ಜನರೇ ಸೇರಿ ಬ್ರ್ಯಾಂಡ್ ಬೆಂಗಳೂರು ಕಟ್ಟಬೇಕು, ಸರ್ಕಾರಿ ಆಸ್ತಿಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಅಲ್ಲಿನ ಸ್ಥಳೀಯ ನಾಗರಿಕರಿಗೆ ವಹಿಸಬೇಕಿದೆ ಎಂದು ಉಪಮುಖ್ಯ ಮಂತ್ರಿ ಡಿ. ಕೆ. ಶಿವಕುಮಾರ ಹೇಳಿದ್ದಾರೆ.
ಬೆಂಗಳೂರಿನ ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ಇಂದು ಹಮ್ಮಿಕೊಂಡಿದ್ದ ಬ್ರ್ಯಾಂಡ್ ಬೆಂಗಳೂರು ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು ಜನರ ಧ್ವನಿಯೇ ಸರ್ಕಾರದ ಧ್ವನಿಯಾಗಬೇಕು ಎಂಬ ನಿಟ್ಟಿನಲ್ಲಿ ಬೆಂಗಳೂರಿನ ಅಭಿವೃದ್ಧಿಗಾಗಿ ಬ್ರ್ಯಾಂಡ್ ಬೆಂಗಳೂರು ಅಭಿಯಾನದಡಿ ಸಾರ್ವಜನಿಕರಿಂದ ಸಲಹೆ ಕೇಳಲಾಗಿತ್ತು. ಪುಟಾಣಿ ಮಕ್ಕಳಿಂದ ಹಿಡಿದು ಹಿರಿಯರವರೆಗೂ 70ಸಾವಿರಕ್ಕೂ ಹೆಚ್ಚು ಜನರು ತಮ್ಮ ಸಲಹೆ ನೀಡಿದ್ದಾರೆ. ಈ ಎಲ್ಲಾ ಸಲಹೆಗಳನ್ನು ಕ್ರೋಢೀಕರಿಸಲಾಗುತ್ತಿದೆ.
ಬೆಂಗಳೂರು ಅಭಿವೃದ್ಧಿ ಸಚಿವ ಸ್ಥಾನವನ್ನು ನಾನು ಒಂದು ಪ್ಯಾಷನ್ ಆಗಿ ತೆಗೆದುಕೊಂಡಿದ್ದೇನೆ. ಬೆಂಗಳೂರು ಪೂರ್ವ ಯೋಜಿತ ನಗರವಲ್ಲ. ಸದ್ಯ ನಮ್ಮ ಕಣ್ಮುಂದೆ ಕಾಣುತ್ತಿರುವ ಅತಿ ದೊಡ್ಡ ಸಮಸ್ಯೆಗಳೆಂದರೆ ಕಸ ವಿಲೇವಾರಿ ಮತ್ತು ಟ್ರಾಫಿಕ್ ಸಮಸ್ಯೆ. ಈಗಾಗಲೇ ಹೈದರಾಬಾದ್‌ಗೆ ಭೇಟಿ ನೀಡಿ ಅಲ್ಲಿನ ಕಸ ವಿಲೇವಾರಿ ವ್ಯವಸ್ಥೆಯನ್ನು ವೀಕ್ಷಿಸಿದ್ದೇನೆ. ಇನ್ನೂ ಒಂದೆರಡು ರಾಜ್ಯಗಳಿಗೆ ಭೇಟಿ ನೀಡುತ್ತೇನೆ. ನಗರದ ಟ್ರಾಫಿಕ್ ಜಂಕ್ಷನ್‌ಗಳಿಗೆ ಭೇಟಿ ನೀಡಿ ಸುಗಮ ಸಂಚಾರಕ್ಕಾಗಿ ಏನೇನು ಮಾಡಬಹುದು ಎಂಬ ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಿದ್ದೇನೆ.
ಬೆಂಗಳೂರಿನ ಜನತೆಯ ಆಸ್ತಿ ರಕ್ಷಣೆಗಾಗಿ ಒಂದಷ್ಟು ಸುಧಾರಣೆಗಳನ್ನು ತರಲು ಮುಂದಾಗಿದ್ದೇವೆ. ಮನೆ ನಿರ್ಮಾಣದ ಅನುಮತಿ ಪತ್ರವನ್ನು ಮನೆ ಬಾಗಿಲಿಗೇ ತಲುಪಿಸುವ ಹೊಸ ವ್ಯವಸ್ಥೆ ಸದ್ಯದಲ್ಲೇ ಜಾರಿಗೆ ಬರಲಿದೆ. ಜನರೇ ಸೇರಿ ಬ್ರ್ಯಾಂಡ್ ಬೆಂಗಳೂರು ಕಟ್ಟಬೇಕು ಹಾಗಾಗಿ ವಾರ್ಡ್‌ನಲ್ಲಿರುವ ಪಾರ್ಕ್, ಕ್ರೀಡಾಂಗಣ, ಸೇರಿದಂತೆ ವಾರ್ಡಿನ ಸರ್ಕಾರಿ ಆಸ್ತಿಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಅಲ್ಲಿನ ಸ್ಥಳೀಯ ನಾಗರಿಕರಿಗೆ ವಹಿಸಬೇಕಿದೆ. ರಸ್ತೆ ಗುಂಡಿಗಳ ಬಗ್ಗೆ ಜನರೇ ಮಾಹಿತಿ ನೀಡುವ ವ್ಯವಸ್ಥೆಯನ್ನು ಜಾರಿಗೆ ತಂದಿದ್ದೇವೆ ಎಂದು ತಿಳಿಸಿದರು.