ಬಾಗಲಕೋಟೆ(ಕಲಾದಗಿ): ಸೋಮವಾರ ಸಂಜೆಯಿಂದ ಸುರಿದ ಆರಿದ್ರಾ ಮಳೆಗೆ ಕಳೆದ ತಿಂಗಳ ಮಳೆಗಳಿಗೆ ಅಷ್ಟಿಷ್ಟು ತುಂಬಿದ್ದ ಸಮೀಪದ ತುಳಸಿಗೇರಿಯ ಬೃಹತ್ ಕೆರೆ ತುಂಬಿ ಕೋಡಿ ಹರಿದಿದ್ದು ಇದರಿಂದ ಇಲ್ಲಿನ ಪ್ರಸಿದ್ಧ ಹನುಮಂತದೇವರ ದೇವಸ್ಥಾನ ಜಲದಿಗ್ಭಂದನಕ್ಕೆ ಒಳಗಾಗಿದ್ದಾನೆ.
ಸಂಜೆಯಿಂದ ಇಡೀ ರಾತ್ರಿಯೆಲ್ಲಾ ನೀರಬೂದಿಹಾಳ, ಶೆಲ್ಲಿಕೇರಿ, ಕೆರಕಲಮಟ್ಟ ಪ್ರದೇಶಗಳಲ್ಲಿ ಹಾಗೂ ತುಳಸಿಗೇರಿಯಲ್ಲಿ ಅಬ್ಬರಿಸಿದ ಮಳೆಯಿಂದ ಹರಿದು ಬಂದ ನೀರು ಕೆರೆಯನ್ನು ಸೇರಿಕೊಂಡಿದ್ದು, ಇದರಿಂದ ಮಂಗಳವಾರದ ಮುಂಜಾನೆ ಹೊತ್ತಿಗೆಲ್ಲಾ ಕೆರೆಪೂರ್ಣ ತುಂಬಿ ಕೋಡಿ ಬೀಳುವುದರ ಮೂಲಕ ಜನರ ಭಾರಿ ಸಂತಸಕ್ಕೆ ಕಾರಣವಾಯಿತಲ್ಲದೆ, ಕೋಡಿ ಹರಿದ ನೀರು ಹಾದುಹೋಗುವ ದಾರಿಯಲ್ಲಿರುವ ಹನುಮಂತದೇವರ ದೇವಸ್ಥಾನದ ಮುಂಭಾಗವನ್ನೆಲ್ಲಾ ಆವರಿಸಿಕೊಂಡು ಅಬ್ಬರಿಸುತ್ತಾ ಮುಂದೆ ಹರಿಯುತ್ತಿದೆ.
ಇದರಿಂದಾಗಿ ಹನುಮಂತದೇವರ ದೇವಸ್ಥಾನದ ಆಸುಪಾಸಿನ ಪ್ರದೇಶ, ದೇವಸ್ಥಾನಕ್ಕೆ ತೆರಳುವ ಮುಂಭಾಗದ ಮುಖ್ಯ ರಸ್ತೆ, ದೇವಸ್ಥಾನದ ಪಕ್ಕದ ಸ್ಥಳ, ಮುಂಭಾಗದ ಪ್ರದೇಶ, ಅಂಗಡಿಗಳು ಜಲಾವೃಗೊಂಡಿವೆ. ಅದರಲ್ಲೂ ಯಾತ್ರಿನಿವಾಸ, ಶೌಚಾಲಯಗಳಂತು ಅಕರಶಃ ಹೆಚ್ಚಿನ ಪ್ರಮಾಣದ ನೀರಿನಿಂದ ಆವೃತಗೊಂಡಿವೆಯಾದರು ದೇವರ ದರ್ಶನಕ್ಕೆ ಯಾವುದೇ ತೊಂದರೆಯಾಗಿಲ್ಲಾ.
ದಾರಿಯಲ್ಲಿ ಹರಿಯುತ್ತಿರುವ ನೀರಿನಲ್ಲಿಯೇ ಎಚ್ಚರಿಕೆಯ ಹೆಜ್ಜೆಗಳನ್ನಿಡುತ್ತಾ ಸಾಗುವ ಭಕ್ತರು ಹೊಸ ಅನುಭವದೊಂದಿಗೆ ದೇವರ ದರ್ಶನ ಪಡೆಯುತ್ತಿದ್ದಾರೆ.