ಮಹಾರಾಷ್ಟ್ರಕ್ಕೆ ಒಂದಿಂಚು ಭೂಮಿ ಬಿಟ್ಟುಕೊಡಲ್ಲ: ಖಂಡ್ರೆ

ಈಶ್ವರ್ ಖಂಡ್ರೆ
Advertisement

ದಾವಣಗೆರೆ: ಮಹಾಜನ್ ವರದಿಯೇ ಗಡಿ ವಿವಾದಕ್ಕೆ ತೆರೆ ಎಳೆದಿದ್ದರೂ ಮಹಾರಾಷ್ಟ್ರ ಸರ್ಕಾರ ಸವೋಚ್ಛ ನ್ಯಾಯಾಲಯದ ದಾರಿ ತಪ್ಪಿಸುತ್ತಿರುವ ಕೆಲಸ ಮಾಡುತ್ತಿದ್ದು, ಕೂಡಲೇ ನ್ಯಾಯಾಲಯವು ಅರ್ಜಿ ವಜಾಗೊಳಿಸಿ, ಈ ವಿಚಾರದಲ್ಲಿ ಮಹಾರಾಷ್ಟ್ರ ಸಲ್ಲಿಸಿರುವ ಅರ್ಜಿಯಿಂದ ಸಮಯ ವ್ಯರ್ಥವಾಗುತ್ತಿದ್ದು, ಅರ್ಜಿ ವಿಚಾರಣೆಗೆ ಆಗಿರುವ ಖರ್ಚಿನ ಮೊತ್ತದ ಹತ್ತು ಪಟ್ಟು ದಂಡವನ್ನು ವಸೂಲಿ ಮಾಡಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಗ್ರಹಿಸಿದ್ದಾರೆ.ದಾವಣಗೆರೆಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾಜನ್ ವರದಿ ಪ್ರಕಾರ ರಾಜ್ಯದ ಒಂದು ಇಂಚು ಭೂಮಿಯೂ ಮಹಾರಾಷ್ಟ್ರಕ್ಕೆ ಹೋಗುವ ಪ್ರಶ್ನೆಯೇ ಇಲ್ಲ. ಆದರೆ, ಮಹಾರಾಷ್ಟ್ರ ಸರ್ಕಾರ ಜಾಗಕ್ಕಾಗಿ ರಾಜಕಾರಣ ಮಾಡಲು ವಿವಾದ ಎಬ್ಬಿಸುತ್ತಿದೆ. ಇವರಿಗೆ ಮಾನ ಮರ್ಯಾದೆ ಇಲ್ಲವಾ ಎಂದು ಕಿಡಿಕಾರಿದರು.ಈ ಅರ್ಜಿಯು ಕಾನೂನುಬದ್ಧವಾಗಿಲ್ಲ. ಹೀಗಾಗಿ, ರಾಜ್ಯ ಸರಕಾರವು ಕಾನೂನು ತಜ್ಞರ ಮೂಲಕ ಸುಪ್ರೀಂ ಕೋರ್ಟ್‌ಗೆ ಮನದಟ್ಟು ಮಾಡಿಕೊಡಬೇಕು. ಬಾಲ್ಕಿ, ಔರಾದ್, ನಿಪ್ಪಾಣಿ, ಸೊಲ್ಲಾಪುರ ಮತ್ತು ಕೊಲ್ಲಾಪುರ ಸೇರಿದಂತೆ ನಾನಾ ಪ್ರದೇಶಗಳು ಕರ್ನಾಟಕದ ಭಾಗವಾಗಿವೆ. ಅವುಗಳನ್ನು ಮಹಾರಷ್ಟ್ರ ಸರ್ಕಾರ ಕರ್ನಾಟಕಕ್ಕೆ ಬಿಟ್ಟುಕೊಡಬೇಕು ಎಂದು ಒತ್ತಾಯಿಸಿದರು.ಬರುವ ವಿಧಾನಸಭೆ ಚುನಾವಣೆಯಲ್ಲಿ ಈಗ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿರುವವರಿಗೆ ವರಿಷ್ಠರು ಶೇ.೯೯ರಷ್ಟು ಟಿಕೆಟ್ ನೀಡಲಿದ್ದಾರೆ. ಇನ್ನುಳಿದ ಶೇ.೧ರಷ್ಟು ಟಿಕೆಟ್ ಅನ್ನು ಕಾರಣಾಂತರದಿಂದ ಅರ್ಜಿ ಸಲ್ಲಿಸದವರಿಗೆ ನೀಡಲಿದ್ದಾರೆ ಎಂದರು.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಕ್ಷದ ಕೆಲಸ ಮಾಡದವರು ಪಕ್ಷ ಬಿಟ್ಟು ಹೋಗಿ ಎಂಬುದಾಗಿ ಒಳ್ಳೆಯ ಸಂದೇಶ ನೀಡಿದ್ದಾರೆ. ಅದರಂತೆ ಎಲ್ಲರೂ ಕೆಲಸ ಮಾಡಬೇಕು ಎಂದು ಹೇಳಿದರು.