ನವದೆಹಲಿ: ಲೋಕಸಭೆ, ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಬಿಲ್ ಅಂಗೀಕಾರವಾದ ಹಿನ್ನಲೆ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ಮಹಿಳಾ ಮೋರ್ಚಾದಿಂದ ಪ್ರಧಾನಿ ಮೋದಿಗೆ ಸನ್ಮಾನ ಮಾಡಲಾಯಿತು. ರಾಜ್ಯಸಭೆಯಲ್ಲೂ ಮಹಿಳಾ ಮೀಸಲಾತಿ ಬಿಲ್ ಅಂಗೀಕಾರ ಹಿನ್ನಲೆ ಟ್ವೀಟ್ ಮೂಲಕ ದೇಶದ 140 ಕೋಟಿ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಧನ್ಯವಾದ ತಿಳಿಸಿದ್ದಾರೆ. ‘ಮಹಿಳಾ ಮೀಸಲಾತಿ ಬಿಲ್ ಅಂಗೀಕಾರಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದ. ಉಭಯ ಸದನಗಳ ಸದಸ್ಯರಿಗೂ ಅಭಿನಂದನೆ ತಿಳಿಸಿದ್ದಾರೆ.
ಸುಮಾರು 11 ಗಂಟೆಗಳ ಚರ್ಚೆಯ ನಂತರ ಮಹಿಳಾ ಮೀಸಲಾತಿ ಮಸೂದೆಯು ರಾಜ್ಯಸಭೆಯಲ್ಲಿ ಸರ್ವಾನುಮತದಿಂದ ಅಂಗೀಕಾರಗೊಂಡಿದೆ. ಈ ಮಸೂದೆಯನ್ನು ಲೋಕಸಭೆ ಬುಧವಾರ ಅಂಗೀಕರಿಸಿತ್ತು. ರಾಷ್ಟ್ರಪತಿ ಅಂಕಿತವಾದ ಬಳಿಕ ಇನ್ನು ಮುಂದೆ ಇದು ಕಾನೂನಾಗಿ ಜಾರಿಗೆ ಬರಲಿದೆ. ಲೋಕಸಭೆಯಲ್ಲಿ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ಕಾನೂನಾಗಿ ಜಾರಿಯಾಗಲಿದೆ. ನೂತನ ಸಂಸತ್ ಭವನದಲ್ಲಿ ಅಂಗೀಕಾರಗೊಂಡ ಮೊದಲ ಮಸೂದೆ ಇದಾಗಿದೆ.