ಮಹಿಳಾ ಮೀಸಲು ಮಸೂದೆ: ಕೇಂದ್ರದ್ದು ಕಪಟ ನಾಟಕ

Advertisement

ಮಂಗಳೂರು: ಕೇಂದ್ರದಲ್ಲಿ ಮಹಿಳಾ ಮೀಸಲು ಮಸೂದೆಗೆ ಅಂಗೀಕಾರ ಮಾಡಿರುವುದು ಕೇಂದ್ರ ಸರಕಾರದ ಕಪಟ ನಾಟಕ, ಮಹಿಳೆಯರ ಬಗೆಗಿನ ಮೊಸಳೆ ಕಣ್ಣೀರು ಎಂದು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಲಿ ಟೀಕಿಸಿದ್ದಾರೆ.
ದ. ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರಕ್ಕೆ ಮಹಿಳೆಯರ ಬಗ್ಗೆ ನೈಜ ಕಾಳಜಿಯಿದ್ದರೆ, ಮಹಿಳೆಯರಿಗೆ ಮೀಸಲಾತಿ ನೀಡುವ ಮಸೂದೆ ಮಂಡಿಸಲು ಹತ್ತು ವರ್ಷಗಳ ಕಾಲ ಕಾಯಬೇಕಾಗಿರಲಿಲ್ಲ. ಒಬಿಸಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಲಾಗಿಲ್ಲ. ಸಂಘ ಪರಿವಾರಕ್ಕೆ ಸೇರಿದವರು ಮನುವಾದ, ಗೋಳ್ವಾಲ್ಕರ್ ಸಿದ್ಧಾಂತದಲ್ಲಿ ನಂಬಿಕೆ ಇರುವವರು. ಶೂದ್ರರಿಗೆ, ಮಹಿಳೆಯರಿಗೆ ಓಟಿನ ಹಕ್ಕು ನೀಡಲು ಬೆಂಬಲಿಸಿದವರಲ್ಲ ಎಂದರು.
ದೇಶದ ಸಾಮಾಜಿಕ ಸ್ಥಿತಿಯಲ್ಲಿ ಮಹಿಳೆಯರ ಸ್ಥಾನ ಮಾನಕ್ಕೆ ಧಕ್ಕೆಯಾಗುವ ಘಟನೆಗಳು ನಡೆಯುತ್ತಿವೆ. ಲಿಂಗ ತಾರತಮ್ಯ ಹೆಚ್ಚಾಗಿದೆ. ದೇಶದ ಬಹುತ್ವಕ್ಕೆ ಹಾನಿಯಾಗುವ ಸಾಕಷ್ಟು ಘಟನೆಗಳು ವ್ಯಾಪಕವಾಗಿವೆ. ಸುಮಾರು ೪೨ ಭಾಷೆಗಳು ಕಣ್ಮರೆಯಾಗುವ ಸ್ಥಿತಿಯಲ್ಲಿ ದೆ. ದೇಶದಲ್ಲಿ ಹೆಚ್ಚುತ್ತಿರುವ ಅಸಮಾನತೆಯಿಂದ ಮಹಿಳೆಯರು, ರೈತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರ ಸ್ಥಿತಿ ಶೋಚನೀಯವಾಗಿದೆ. ಕಳೆದ ೯ ವರ್ಷದಲ್ಲಿ ದೇಶದ ಬಡತನ ಮತ್ತು ಆರ್ಥಿಕ ಅಸಮಾನತೆ ವಿಶ್ವದ ಹಲವು ರಾಷ್ಟ್ರಗಳ ಸಾಲಿಗೆ ಹೋಲಿಸಿದರೆ ಅತ್ಯಂತ ಕೆಳ ಮಟ್ಟಕ್ಕೆ ಕುಸಿದಿದೆ. ಕೇಂದ್ರ ಸರಕಾರದ ಈ ಬಾರಿಯ ಬಜೆಟ್ ರೈತರ, ಬಡವರ ಪರವಾಗಿರಲಿಲ್ಲ. ಈ ಎಲ್ಲ ಕಾರಣಕ್ಕೆ ೨೦೨೪ರ ಚುನಾವಣೆಯ ಫಲಿತಾಂಶ ಮಹಿಳೆಯರ ಮತ್ತು ಹಿಂದುಳಿದ ಜನಸಮುದಾಯದ ಜನಾಭಿಪ್ರಾಯದ ಮೇಲೆ ನಿರ್ಣಾಯಕವಾಗಲಿದೆ ಎಂದರು.
ಚಿಕ್ಕಬಳ್ಳಾಪುರದಿಂದ ಸ್ಪರ್ಧೆ..
ಮುಂದಿನ ಲೋಕಸಭೆ ಚುನಾವಣೆಯಲ್ಲಿ ತಾನು ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸಲಿದ್ದೇನೆ ಎಂದು ವೀರಪ್ಪ ಮೊಯ್ಲಿ ಸ್ಪಷ್ಟಪಡಿಸಿದರು. ಆದರೆ ತನ್ನ ಪುತ್ರ ಹರ್ಷ ಮೊಯ್ಲಿ ಈ ಬಾರಿ ಸ್ಪರ್ಧಿಸಲ್ಲ ಎಂದು ಹೇಳಿದ ಅವರು, ಮೂರು ಡಿಸಿಎಂ ವಿಚಾರ ಪಕ್ಷದ ಅಭಿಪ್ರಾಯ ಅಲ್ಲ. ಮಂತ್ರಿಗಳು ಅಭಿಪ್ರಾಯ ಹೇಳಿದ್ದಾರಷ್ಟೆ. ಆ ವಿಚಾರದ ಚರ್ಚೆ ಹೈಕಮಾಂಡ್ ಮಟ್ಟದಲ್ಲೂ ಆಗಿತ್ತು. ಆದರೆ ಆ ಚರ್ಚೆ ಸದ್ಯಕ್ಕೆ ಇಲ್ಲ ಎಂದರು.
ಹೋದರೆಂದೇ ಲೆಕ್ಕ..
ಜೆಡಿಎಸ್ ಪಕ್ಷದ ಜತೆ ಯಾರೆಲ್ಲಾ ಹೊಂದಾಣಿಕೆ ಮಾಡುತ್ತಾರೋ ಅವರು ಹೋದರೆಂದೇ ಲೆಕ್ಕ. ನಮಗೆ ಅದರ ಅನುಭವ ಆಗಿದೆ. ಈಗ ಬಿಜೆಪಿ ಜತೆ ಮೈತ್ರಿ ಮಾಡಿದ್ದಾರೆ. ದಾರಿದ್ರ್ಯ ಒಳಗೆ ಪ್ರವೇಶ ಆಗಿದೆ ಎಂದು ಲೇವಡಿ ಮಾಡಿದರು.
ಬಿಜೆಪಿಯಿಂದ ಸಂವಿಧಾನ ವಿರೋಧಿ ಕೆಲಸ ನಡೆಯುತ್ತಿದೆ.ಸಂವಿಧಾನದಲ್ಲಿ ಇರುವ ಜಾತ್ಯತೀತ ಪದವನ್ನು ಅಳಿಸಿ ಪ್ರತಿಯನ್ನು ಹಂಚುತ್ತಾರೆ. ಅವರಿಗೆ ತಾಕತ್ತಿದ್ದರೆ ಸಂವಿಧಾನದಕ್ಕೆ ತಿದ್ದುಪಡಿ ಮಾಡಿ ಜಾತ್ಯತೀತ ಪದವನ್ನು ತೆಗೆದುಹಾಕಲಿ ಎಂದು ಸವಾಲೆಸೆದರು.