ಮಹಿಳಾ ಸುರಕ್ಷತೆ ಹಾಗೂ ರೌಡಿಗಳ ಮಟ್ಟ ಹಾಕಲು ಕ್ರಮ

Advertisement

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಕಮಿಷನರೇಟ್‌ಗೆ ರಾಜ್ಯದ ಮೊದಲ ಮಹಿಳಾ ಪೊಲೀಸ್ ಆಯುಕ್ತರಾಗಿ ಐಪಿಎಸ್ ಅಧಿಕಾರಿ ರೇಣುಕಾ ಸುಕುಮಾರ ಗುರುವಾರ ಅಧಿಕಾರ ಸ್ವೀಕರಿಸಿದರು.
ಕೆ. ಸಂತೋಷ ಬಾಬು ಅವರಿಂದ ತೆರವಾದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಸ್ಥಾನಕ್ಕೆ ಈ ಹಿಂದೆ ಹುಬ್ಬಳ್ಳಿ ಧಾರವಾಡ ಕಮಿಷನರೇಟ್‌ನಲ್ಲಿ ಡಿಸಿಪಿಯಾಗಿ ಕಾರ್ಯ ನಿರ್ವಹಿಸಿದ್ದ ರೇಣುಕಾ ಸುಕುಮಾರ ಅವರನ್ನು ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದ ಬೆನ್ನಲ್ಲೇ ರೇಣುಕಾ ಸುಕುಮಾರ ಅಧಿಕಾರ ವಹಿಸಿಕೊಂಡರು.
ಅಧಿಕಾರ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಇಲ್ಲಿಯೇ ಡಿಸಿಪಿಯಾಗಿ ನಾನು ಕಾರ್ಯ ನಿರ್ವಹಿಸಿದ್ದೇನೆ. ಇದೀಗ ಅವಳಿ ನಗರದ ಆಯಕ್ತರಾಗಿ ಅಧಿಕಾರ ಸ್ವೀಕರಿಸಿರುವುದಕ್ಕೆ ಖುಷಿಯಾಗುತ್ತಿದೆ. ಮಹಿಳಾ ಸುರಕ್ಷತೆ ಹಾಗೂ ರೌಡಿಗಳನ್ನು ಮಟ್ಟ ಹಾಕಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಸರ್ಕಾರ ಹಾಗೂ ಪೊಲೀಸ್ ಇಲಾಖೆ ನನಗೆ ದೊಡ್ಡ ಜವಾಬ್ದಾರಿ ನೀಡಿದೆ. ಅದನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತೇನೆ. ಎಸ್.ಪಿ. ಕೆಡರ್‌ನವರಿಗೆ ಸರ್ಕಾರ ಆಯುಕ್ತರ ಜವಾಬ್ದಾರಿ ನೀಡಿದೆ. ಈ ವಿಷಯದಲ್ಲಿ ಸರ್ಕಾರ ನಿಯಮಗಳನ್ನು ಮೀರಿಲ್ಲ. ನನಗೆ ಆಯುಕ್ತರಾಗಿ ಸೇವೆ ಸಲ್ಲಿಸಲು ಸರ್ಕಾರ ಆದೇಶಿಸಿದೆ. ಈ ಹಿನ್ನಲೆಯಲ್ಲಿ ನಾನು ಬಂದು ಅಧಿಕಾರ ಸ್ವೀಕರಿಸಿದ್ದೇನೆ ಎಂದರು.