ಮಹಿಳೆಯರಿಗೆ ಬದುಕು ಕಟ್ಟಿಕೊಟ್ಟ `ಶ್ಯಾವಿಗೆ’ ಉದ್ಯಮ

Advertisement

ಶಿವಕುಮಾರ ಹಳ್ಯಾಳ
ಹುಬ್ಬಳ್ಳಿ: ಧಾರವಾಡ ಜಿಲ್ಲೆ ಅಣ್ಣಿಗೇರಿಯಲ್ಲಿ ೨೦೧೦-೧೧ ರಲ್ಲಿ ಬರಗಾಲ ಬಂದು ಜನರಿಗೆ ಕೆಲಸವಿಲ್ಲದೇ ತುತ್ತು ಅನ್ನಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಅಂದಿನ ಆ ಸ್ಥಿತಿಯನ್ನು ಕಂಡ ಅಣ್ಣಿಗೇರಿ ಪಟ್ಟಣದ ರಾಜೇಶ್ವರಿ ದೇಶಮುಖ ಅವರು, ನಮ್ಮ ಊರಿನ ಜರಿಗಾಗಿ ಏನನ್ನಾದರೂ ಮಾಡಬೇಕು ಎಂದು ಪಣ ತೊಟ್ಟು ಶ್ಯಾವಿಗೆ ತಯಾರಿಕೆ ಘಟಕ ಆರಂಭಿಸಿ ನೂರಾರು ಮಹಿಳೆಯರಿಗೆ ಬದುಕು ಕಟ್ಟಿಕೊಟ್ಟು ಆಸರೆಯಾಗಿದ್ದಾರೆ.
ಕೇವಲ ಶ್ಯಾವಿಗೆ ಅಷ್ಟೇ ಅಲ್ಲ ರೊಟ್ಟಿ ಸಿದ್ಧಪಡಿಸುವ ಮೂಲಕ ಮಹಿಳೆಯರಿಗೆ ಉದ್ಯೋಗ ಕೊಡಬೇಕು, ಊಟಕ್ಕೆ ಅನುಕೂಲ ಮಾಡಿಕೊಡಬೇಕೆಂದು ನಿರ್ಧರಿಸಿ ಸಿದ್ಧಿ ಹೋಂ ಫುಡ್ ಪ್ರಾಡಕ್ಟ್ ಘಟಕ ಸ್ಥಾಪನೆ ಮಾಡಿದರು.
ಘಟಕದಲ್ಲಿ ಪ್ರಾರಂಭದಲ್ಲಿ ೩೦೦ ರಿಂದ ೪೦೦ ಕೆ.ಜಿ. ಶ್ಯಾವಿಗೆ ತಯಾರಿಕೆ ಮಾಡಲಾಗುತ್ತಿತ್ತು. ಈಗ ಪ್ರತಿ ವರ್ಷಕ್ಕೆ ೩,೦೦೦ ದಿಂದ ೪,೦೦೦ ಕ್ವಿಂಟಲ್ ಶ್ಯಾವಿಗೆ ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದಾರೆ. ಧಾರವಾಡ, ಗದಗ, ಬಾಗಲಕೋಟೆ, ಕೊಪ್ಪಳ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಶ್ಯಾವಿಗೆ ಮಾರಾಟ ಮಾಡಲಾಗುತ್ತಿದೆ. ಶ್ಯಾವಿಗೆ ಮಾರಾಟ ಮಾಡಲು ಒಂದು ನಿಯಮ ಅಳವಡಿಸಿಕೊಳ್ಳಲಾಗಿದೆ. ಒಂದೊAದು ಗ್ರಾಮಗಳಲ್ಲಿ ಒಂದು ಬಡ ಕುಟುಂಬ ಆಯ್ಕೆ ಮಾಡಿಕೊಂಡು ಅವರ ಮೂಲಕ ಶ್ಯಾವಿಗೆ ಮಾರಾಟ ಮಾಡಲಾಗುತ್ತಿದೆ.
ಮೊದಲು ನಾಲ್ಕು ಜನರಿಂದ ಆರಂಭವಾದ ಘಟಕದಲ್ಲಿ ಇದೀಗ ೪೫ ಜನ ಮಹಿಳೆಯರು ಉದ್ಯೋಗ ಮಾಡುತ್ತಿದ್ದಾರೆ. ಅಲ್ಲದೇ ಘಟಕದಲ್ಲಿ ಸಣ್ಣ ಶ್ಯಾವಿಗೆ ಯಂತ್ರಗಳಿದ್ದವು. ಇದೀಗ ನಮ್ಮ ಘಟಕದಲ್ಲಿ ೧೦ ಎಚ್‌ಪಿ ಸಾಮರ್ಥ್ಯದ ಎರಡು ಶ್ಯಾವಿಗೆ ಯಂತ್ರಗಳು, ಒಂದು ರೊಟ್ಟಿ ತಯಾರಿಸುವ ಯಂತ್ರವಿದೆ.


ಇವರು ಸಿದ್ಧಪಡಿಸುವ ರೊಟ್ಟಿಗಳಿಗೂ ಸಾಕಷ್ಟು ಬೇಡಿಕೆ ಇದೆ. ಈ ಹಿಂದೆ ನಡೆದ ಎರಡು ಸಾಹಿತ್ಯ ಸಮ್ಮೇಳನಗಳಿಗೂ ರೊಟ್ಟಿ ಸಿದ್ಧಪಡಿಸಿ ಕೊಟ್ಟಿದ್ದಾರೆ. ಒಂದೊAದು ಸಾಹಿತ್ಯ ಸಮ್ಮೇಳನಕ್ಕೆ ೫ ಲಕ್ಷ ರೊಟ್ಟಿ ಸಿದ್ಧಪಡಿಸಿ ಕೊಟ್ಟಿರುವ ಹೆಗ್ಗಳಿಕೆಗೆ ಸಿದ್ಧಿ ಹೋಂ ಫುಡ್ ಪ್ರಾಡಕ್ಟ್ ಪಾತ್ರವಾಗಿದೆ. ಇವರು ಸಿದ್ಧಪಡಿಸಿರುವ ರೊಟ್ಟಿಗಳು ಕರ್ನಾಟಕದ ವಿವಿಧ ಭಾಗಗಳಿಗೆ ರಫ್ತಾಗುತ್ತವೆ. ಹೀಗೆ ಸಿದ್ಧಪಡಿಸುವ ರೊಟ್ಟಿ ಹಾಗೂ ಶ್ಯಾವಿಗೆ ಲಾಭಕ್ಕಾಗಿ ಅಲ್ಲ. ಮಹಿಳೆಯರಿಗೆ ಉದ್ಯೋಗ, ಜನರಿಗೆ ಶುದ್ಧ ಆಹಾರ ನೀಡಬೇಕೆಂಬುದು ಎನ್ನುತ್ತಾರೆ ರಾಜೇಶ್ವರಿ ದೇಶಮುಖ.

ತುತ್ತು ಅನ್ನಕ್ಕಾಗಿಯೇ ಆರಂಭವಾದ ಉದ್ಯಮವಿದು. ಊರಿನ ಜನ ಕೆಲಸ ಅರಸಿಕೊಂಡು ನಗರಗಳತ್ತ ಮುಖ ಮಾಡಬಾರದು. ಅವರಿಗೆ ಸ್ಥಳೀಯವಾಗಿಯೇ ಉದ್ಯೋಗ ನೀಡಬೇಕು ಎಂದು ನಿರ್ಧರಿಸಿ ಉದ್ಯಮ ಆರಂಭಿಸಿದ್ದೇನೆ. ನನ್ನ ತಾಯಿ ಕಲಾವತಿ ಸಿಕ್ಕೆದೇಸಾಯಿ, ಪತಿ ಶರಣಬಸಪ್ಪ ದೇಶಮುಖ ಹಾಗೂ ಎಂಬಿಎ ವಿದ್ಯಾಭ್ಯಾಸ ಪೂರೈಸಿರುವ ಮಗಳು ಅರ್ಪಿತಾ ಉದ್ಯಮಕ್ಕೆ ಸಹಕಾರ ನೀಡಿದ್ದಾರೆ. ಇದರೊಂದಿಗೆ ನನ್ನ ಬಳಿ ಕೆಲಸಕ್ಕೆ ಬರುವ ಮಹಿಳೆಯರು ಸಾಕಷ್ಟು ಶ್ರಮ ಪಟ್ಟು ಉದ್ಯಮ ಮುಂದೆ ಸಾಗಲು ಕೈ ಜೋಡಿಸಿದ್ದಾರೆ.
:ರಾಜೇಶ್ವರಿ ದೇಶಮುಖ, ಸಿದ್ಧಿ ಹೋಂ ಫುಡ್ ಪ್ರಾಡಕ್ಟ್ ಸಂಸ್ಥಾಪಕಿ.