ಮಹಿಳೆಯರ ಏಳ್ಗೆಗಾಗಿ ಒನಕೆ ಓಬವ್ವ ನಿಗಮ ರಚನೆ –ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Advertisement

ಚಿತ್ರದುರ್ಗ: ಒನಕೆ ಓಬವ್ವನವರ ಹೆಸರಿನಲ್ಲಿ ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮವನ್ನು ಮುಂದಿನ ಆಯವ್ಯಯದಲ್ಲಿ ರೂಪಿಸಿ, ಓಬ್ಬನದ ಹೆಸರಿನ ನಿಗಮವನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ವೀರವನಿತೆ ಓಬವ್ವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಓಬವ್ವನವರ ಹೆಸರಿನಲ್ಲಿ ಮಹಿಳಾ ಕಾಲೇಜನ್ನು ಸ್ಥಾಪಿಸಲಾಗುವುದು. ಒನಕೆ ಓಬವ್ವ ಟ್ರಸ್ಟ್ ಹೆಸರಿನಲ್ಲಿ ಸಮುದಾಯಕ್ಕೆ 80 ಎಕರೆ ಜಮೀನನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು. ಒನಕೆ ಓಬವ್ವನ ಜೀವನ ಸಾಧನೆಗಳ ಸಂಶೋಧನೆಗಾಗಿ ವಿಶ್ವವಿದ್ಯಾಲಯಲದಲ್ಲಿ ಅಧ್ಯಯನ ಪೀಠ ರಚಿಸಲಾಗುವುದು. ಸಮುದಾಯಕ್ಕೆ ಉದ್ಯೋಗ, ಭೂ ಒಡೆತನ ಸಮಸ್ಯೆಗಳಿಗೆ ಸೂಕ್ತ ಸಮಯದಲ್ಲಿ ನ್ಯಾಯ ಒದಗಿಸಲಾಗುವುದು ಎಂದರು.
ಶಿಕ್ಷಣ ಮತ್ತು ಉದ್ಯೋಗಕ್ಕೆ ಪ್ರಾಶಸ್ತ್ಯ
ಕರ್ನಾಟಕದ ಬೆಳವಣಿಗೆಯಲ್ಲಿ ಎಲ್ಲ ಸಮುದಾಯದ ಕೊಡುಗೆ ಇದೆ. ಸಮುದಾಯಗಳ ಶಿಕ್ಷಣ ಮತ್ತು ಉದ್ಯೋಗಕ್ಕೆ ಸರ್ಕಾರ ಒತ್ತು ನೀಡುತ್ತದೆ. ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವಂತೆ 100 ಅಂಬೇಡ್ಕರ್ ಹಾಸ್ಟೆಲ್‌ಗಳು, 50 ಕನಕದಾಸ ಹಾಸ್ಟೆಲ್, ಉದ್ಯೋಗ ಸೃಷ್ಟಿಯಲ್ಲಿ ರಾಜ್ಯದ 224 ಕ್ಷೇತ್ರದಲ್ಲಿ 100 ಯುವಕರಿಗೆ ಸ್ವಯಂಉದ್ಯೋಗ ಯೋಜನೆ ಜಾರಿ ಮಾಡಲಾಗುತ್ತಿದೆ. ದುರ್ಬಲ ವರ್ಗಗಳ ಶಿಕ್ಷಣ, ಉದ್ಯೋಗ ಹಾಗೂ ಸಬಲೀಕರಣ ಮಾಡುವುದು ಸರ್ಕಾರದ ಧ್ಯೇಯವಾಗಿದೆ ಎಂದರು.
ಒನಕೆ ಓಬವ್ವ ಜೀವನಾದರ್ಶಗಳು ಯುವಪೀಳಿಗೆಗೆ ತಿಳಿಯಬೇಕು
ಒನಕೆ ಓಬವ್ವ ಕತೆಯನ್ನು ಕೇಳಿಸಿಕೊಂಡು ಬೆಳೆದಿದ್ದೇವೆ. ಯಾವುದೇ ಅಧಿಕಾರವಿಲ್ಲದೇ ಸಾಧನೆ ಮಾಡುವುದು ಅಪರೂಪದ ಗುಣ. ತನ್ನ ಸರ್ವಸ್ವವನ್ನು ದೇಶಕ್ಕಾಗಿ ಅರ್ಪಿಸಿದ ಒನಕೆ ಓಬವ್ವನ ತ್ಯಾಗದ ಚರಿತ್ರೆಯನ್ನು ಸುವರ್ಣಾಕ್ಷರದಲ್ಲಿ ಬರೆದಿಡುವಂಥದ್ದು. ಪತ್ನಿಧರ್ಮವನ್ನು ಅನುಸರಿಸಿದ ಓಬವ್ವ ಕೋಟೆಯನ್ನು ಸುತ್ತುವರಿದ ಶತ್ರುಗಳನ್ನು ಸಂಹರಿಸಿ, ಹಿಮ್ಮೆಟ್ಟಿಸಿದ ದಿಟ್ಟ ಮಹಿಳೆ. ಅಬಲೆ ಎಂದು ಗುರುತಿಸಲಾಗುತ್ತಿದ್ದ ಮಹಿಳೆಯರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಅವರೂ ಸಬಲರು ಎಂದು ನಿರೂಪಿಸಿದರು. ಕರ್ತವ್ಯ ನಿಷ್ಠೆ, ದೇಶಪ್ರೇಮ, ತ್ಯಾಗ ಮನೋಭಾವಗಳು ತಮ್ಮ ಕುಲಸಮುದಾಯದಿಂದ ಬಂದಿದೆ. ಒನಕೆ ಓಬವ್ವನ ತ್ಯಾಗ, ಆದರ್ಶಗಳು ಇಂದಿನ ಯುವಪೀಳಿಗೆಗೆ ತಿಳಿಸಬೇಕೆಂಬ ಉದ್ದೇಶದಿಂದ ಒನಕೆ ಓಬವ್ವನ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲಾಗುತ್ತಿದೆ ಎಂದರು.