ಮಹಿಳೆ, ಯುವಜನರಿಗೆ ಮಣೆ

Advertisement

ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ೨೦೨೪-೨೫ನೇ ಸಾಲಿನ ಹಣಕಾಸು ವರ್ಷದ ಮಧ್ಯಂತರ ಬಜೆಟ್ ಅನ್ನು ಗುರುವಾರ ಮಂಡಿಸಿದರು.
ನಿರ್ಮಲಾ ಅವರು ಆರನೇ ಬಾರಿಯ ಬಜೆಟ್ ಅನ್ನು ೫೯ ನಿಮಿಷ ೧೫ ಸೆಕೆಂಡ್‌ಗಳಲ್ಲಿ ಮಂಡಿಸಿದರು. ದೇಶದ ಬಡವರು ಸರ್ಕಾರದ ಯೋಜನೆಗಳ ನೇರ ಲಾಭ ಪಡೆದಿದ್ದಾರೆ. ಇದು ಚುನಾವಣೆಯ ಬಜೆಟ್ ಅಲ್ಲ, ಜನಪರ ಬಜೆಟ್ ಆಗಿದೆ ಎಂದು ಹೇಳಿದರು.
ಪ್ರಧಾನಿ ಮೋದಿ ಅವರ ಆಡಳಿತದಲ್ಲಿ ದೇಶದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ. ಮುಂದಿನ ಐದು ವರ್ಷದಲ್ಲಿ ದೇಶವು ಅಭಿವೃದ್ಧಿ ಪಥದಲ್ಲಿ ಸಾಗಲಿದೆ. ಬಡವರು, ಮಹಿಳೆಯರು, ಯುವಕರು ಮತ್ತು ರೈತರ ಸ್ಥಿತಿಗತಿಗಳನ್ನು ಸುಧಾರಿಸುವತ್ತ ನಮ್ಮ ಸರ್ಕಾರ ಗಮನಹರಿಸಿದೆ ಎಂದರು.
ಮೂರು ಪ್ರಮುಖ ಯೋಜನೆಗಳು
ಪ್ರಧಾನ ಮಂತ್ರಿ ಜನ್ ಧನ್ ಯೋಜನೆ, ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಮತ್ತು ಪಿಎಂ ಕಿಸಾನ್ ಸಮ್ಮಾನ್ ಯೋಜನೆಯನ್ನು ಪ್ರಸ್ತಾಪಿಸಿದ ನಿರ್ಮಲಾ ಸೀತಾರಾಮನ್ ಅವರು, ಮುಂದಿನ ಐದು ವರ್ಷಗಳಲ್ಲಿ ಹೆಚ್ಚುವರಿಯಾಗಿ ೨ ಕೋಟಿ ಮನೆಗಳನ್ನು ಬಡವರಿಗಾಗಿ ನಿರ್ಮಾಣ ಮಾಡಲಾಗುವುದು. ಕೋವಿಡ್ ಸಾಂಕ್ರಾಮಿಕ ಸವಾಲುಗಳ ನಡುವೆಯೂ ಪ್ರಧಾನಮಂತ್ರಿ ಆವಾಸ್ ಯೋಜನೆ ಗ್ರಾಮೀಣ ಅನುಷ್ಠಾನವು ಮುಂದುವರಿದಿದೆ ಎಂದರು. ನಾವು ೩ ಕೋಟಿ ಮನೆಗಳ ಗುರಿಯನ್ನು ಸಾಧಿಸುವ ಸಮೀಪದಲ್ಲಿ ಇದ್ದೇವೆ. ಮುಂದಿನ ೫ ವರ್ಷಗಳಲ್ಲಿ ಹೆಚ್ಚುವರಿಯಾಗಿ ೨ ಕೋಟಿ ಮನೆಗಳನ್ನು ಪೂರೈಸಲು ಕ್ರಮ ತೆಗೆದುಕೊಳ್ಳಲಾಗುವುದು. ದೇಶದ ಜನಸಂಖ್ಯೆ ಏರಿಕೆಯಿಂದಾಗಿ ಕುಟುಂಬಗಳು ಸಹ ದೊಡ್ಡದಾಗಿದ್ದು, ಹೆಚ್ಚುವರಿ ಮನೆಗಳ ಅವಶ್ಯಕತೆ ಇದೆ ಎಂದು ತಿಳಿಸಿದರು. ಅಲ್ಲದೆ, ಬಾಡಿಗೆ ಮನೆಗಳು, ಕೊಳಗೇರಿಗಳಲ್ಲಿ ವಾಸಿಸುವ ಜನರಿಗೆ ಹೊಸ ಮನೆಯನ್ನು ಖರೀದಿಸಲು ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ ನೆರವು ನೀಡಲಾಗುತ್ತದೆ ಎಂದು ತಿಳಿಸಿದರು.
೯-೧೪ ವರ್ಷದ ಬಾಲಕಿಯರಿಗೆ ಲಸಿಕೆ
ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ನಿಟ್ಟಿನಲ್ಲಿ ೯ ರಿಂದ ೧೪ ವರ್ಷದ ಬಾಲಕಿಯರಿಗೆ ಲಸಿಕೆ ನೀಡಲು ಬಟೆಟ್‌ನಲ್ಲಿ ಅನುದಾನ ಮೀಸಲಿಡಲಾಗಿದೆ. ಇತ್ತೀಚಿನ ವರದಿಯ ಪ್ರಕಾರ, ಭಾರತದಲ್ಲಿ ಪ್ರತಿ ವರ್ಷ ೮೦ ಸಾವಿರ ಮಹಿಳೆಯರು ಗರ್ಭಕಂಠ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದು, ೩೫ ಸಾವಿರ ಮಹಿಳೆಯರು ಮೃತರಾಗುತ್ತಿದ್ದಾರೆ ಎನ್ನಲಾಗಿದೆ.
ಯುವಜನತೆಗೆ ಕೌಶಲ ತರಬೇತಿ
ಸ್ಕಿಲ್ ಇಂಡಿಯಾ ಮಿಷನ್ ಅಡಿ ೧.೪ಕೋಟಿ ಯುವ ಜನತೆಗೆ ತರಬೇತಿ ನೀಡಲಾಗಿದೆ. ೫೪ ಲಕ್ಷ ಯುವಕರಿಗೆ ಕೌಶಲ ಮತ್ತು ಮರು ಕೌಶಲವನ್ನು ನೀಡಲಾಗುತ್ತಿದೆ. ೩೦೦೦ ಹೊಸ ಐಟಿಐಗಳನ್ನು ಸ್ಥಾಪಿಸಲಾಗಿದೆ. ಉನ್ನತ ಕಲಿಕೆಗಾಗಿ ೭ ಐಐಟಿಗಳು, ೧೬ಐಐಐಟಿಗಳು, ೭ಐಐಎಂಗಳು, ೧೫ ಎಐಐಎಂಎಸ್ ಮತ್ತು ೩೯೦ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ. ಆಸ್ಪತ್ರೆಗಳನ್ನು ಉನ್ನತೀಕರಿಸಿ ಹೆಚ್ಚು ವೈದ್ಯಕೀಯ ಕಾಲೇಜುಗಳ ಅಭಿವೃದ್ಧಿಗೆ ಒತ್ತು ಕೊಡಲಾಗುವುದು ಎಂದು ತಿಳಿಸಿದರು.