ಮಾಡಿದೆನ್ನದಿರಾ…. ಲಿಂಗಕ್ಕೆ

Advertisement

ಮಹಾನುಭಾವಿ ಬಸವಣ್ಣನವರ ವಚನದ ಸಾಲಿದು. ಪೂರ್ಣವಚನ ಹೀಗಿದೆ.
ಮಾಡಿದೆನೆಂಬುದು ಮನದಲ್ಲಿ ಹೊಳೆದರೆ
ಏಡಿಸಿ ಕಾಡಿತ್ತು ಶಿವನ ಡಂಗುರ
ಮಾಡದೆನೆನ್ನದಿರಾ ಲಿಂಗಕ್ಕೆ
ನೀಡಿದೆನೆನ್ನದಿರಾ ಜಂಗಮಕ್ಕೆ
ಮಾಡಿದೆನೆಂಬುದು ಮನದಲ್ಲಿ ಹೊಳೆದರೆ
ಬೇಡಿತ್ತನೀವ ಕೂಡಲ ಸಂಗಮದೇವ
ಕರ್ತವ್ಯ ಕರ್ಮ ನಿರ್ವಹಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ತಮ್ಮ ತಮ್ಮ ಕೆಲಸಗಳನ್ನು ತಾವೇ ಮಾಡಬೇಕಾಗಿದೆ ಯಾವುದೇ ಕೆಲಸವನ್ನು ಮಾಡುವದು ಅವರವರ ಹೊಣೆಗಾರಿಕೆ. ಇಳೆ ನಿಮ್ಮದಾನ ಬೆಳೆ ನಿಮ್ಮದಾನ ಸುಳಿದು ಸೂಸುವ ಗಾಳಿ ನಿಮ್ಮ ದಾನ ಜೇಡರ ದಾಸಿಮಯ್ಯನವರ ಸೂಳ್ನುಡಿ. ದೇವರೇ ನಿರ್ಮಿಸಿ ಕೊಟ್ಟಿರುವದನ್ನು ಹುಲುಮಾನವನಾಗಿ ನಾನು ಮಾಡಿದೆ. ನಾನು ಕೊಟ್ಟೆ ಎಂದು ಹೇಳುವದು ಎಂಥ ಬಾಲಿಶತನ? ಶಿವನು ಕೊಟ್ಟಿದ್ದನ್ನು ಸ್ಮರಣೆ ಮಾಡಿ ನಿನ್ನದೇ ಇದೆಲ್ಲವೂ ಎನ್ನಬೇಕು. ಶಿವನಿತ್ತ ಎಲ್ಲ ವಸ್ತುಗಳನ್ನು ಮಾನವನು ಅನುಭವಿಸಿ ಆತನ ಸ್ಮರಣೆ ಹಾಗೂ ಆತನ ಪೂಜೆ ಮಾಡುವದು ಅವರವರ ಕರ್ತವ್ಯವಾಗಿರುತ್ತದೆ. ಕರ್ತವ್ಯವನ್ನು ನಿರ್ವಹಿಸಿ ನಾನು ಮಾಡಿದೆನೆಂದು ಎಂದು ಹೇಳಬಾರದು.
ವಿಶ್ವಸೃಷ್ಟಿಯೇ ಭಗವಂತನದು. ಅದರಲ್ಲಿ ಅನೇಕ ಜೀವರಾಶಿಗಳಿವೆ. ಅವುಗಳಿಗೆಲ್ಲ ಅನ್ನ ನೀಡುವ ಕೆಲಸ ದೇವನದು. ಏನೋ ಮಾಡಿ ಒಂದಿಷ್ಟು ದುಡ್ಡು ಗಳಿಸಿ, ನಾಲ್ಕು ಜನರಿಗೆ ದಾನ ಮಾಡಿದರೆ.. ಮಾಡಿದೆ ಎಂಬ ಅಹಂಕಾರ ಹೊಳೆಯುತ್ತದೆ. ಇಂಥ ಅಹಂಕಾರ ಬಂದರೆ ಅದು ಸಾರ್ಥಕತೆಯಲ್ಲ. ಏನೇ ಮಾಡಿದರೂ ಕೂಡ ಅದು ಭಗವಂತ ನಿನ್ನ ಒಲುಮೆ ಮತ್ತು ಬಲಮೆಯಿಂದಲೇ ಎಂಬ ಭಾವ ತಳೆದು ವಿನಮ್ರನಾಗಿರಬೇಕು. ಲಿಂಗದ ಮುಖ, ಜಂಗಮ, ಆತನಿಗೆ ನೀಡಿದರೆ ತೃಪ್ತಿಪಡಿಸಿದರೆ ಅದನ್ನು ನಾನು ಮಾಡಿದೆನೆಂದು ಉಚ್ಚರಿಸಬಾರದು. ನಾನು ಮಾಡಿದೆ. ನೀಡಿದೆನೆಂದೇನಾದರೆ ಶಿವನಡಂಗುರ ಏಡಿಸಿ ಕಾಡುತ್ತದೆ. ಅಂದರೆ ಅದರಿಂದ ಅಹಂಕಾರ ಬಂದು ತನ್ನತನವನ್ನು ಮರೆಮಾಚುತ್ತದೆ. ಇಲ್ಲಿ ಏಡಿಸಿ ಕಾಡುವದೆಂದರೆ ಮೂದಲಿಸಿ ಹೀಯಾಳಿಸುವದು ಎಂದು ಅರ್ಥೈಸಿದ್ದಾರೆ. ನಿಷ್ಕಾಮ ಭಾವದಿಂದ ಕಾರ್ಯಗೈದರೆ ಪರಮಾತ್ಮನು ಸಹಜವಾಗಿಯೇ ಪ್ರಸನ್ನನಾಗುತ್ತಾನೆ. ನಿರಪೇಕ್ಷೆ ಭಾವದಿಂದ ಕರ್ತವ್ಯ ಮಾಡುವುದು ಸದ್ಭಕ್ತರ ಮಣಿಹವಾಗಿರದೇ ಅದನ್ನರಿತು ಮಾಡಬೇಕು.