ಮಾತು-ನಟನೆ ಸಮ್ಮಿಳಿತದ ವಿರಳ ಕಲಾವಿದ

ಸಂಯುಕ್ತ ಕರ್ನಾಟಕ ಯುಗಾದಿ ವಿಶೇಷಾಂಕವನ್ನು ಬಿಡುಗಡೆಗೊಳಿಸಿದ ನಟ ರಮೇಶ್ ಅರವಿಂದ್ ಅವರಿಗೆ ಲೋಕ ಶಿಕ್ಷಣ ಟ್ರಸ್ಟ್ ಬಳಗದಿಂದ ಆತ್ಮೀಯ ಸನ್ಮಾನ.
Advertisement

ಮಾತು ಮತ್ತು ನಟನೆ ಎರಡೂ ಇರುವ ಅಪರೂಪದ ಕಲಾವಿದ ರಮೇಶ್ ಅರವಿಂದ್ ಎಂದು ಹೆಸರಾಂತ ಶಿಕ್ಷಣ ತಜ್ಞ ಹಾಗೂ ಲೋಕ ಶಿಕ್ಷಣ ಟ್ರಸ್ಟ್ ಧರ್ಮದರ್ಶಿ ಡಾ. ಗುರುರಾಜ ಕರಜಗಿ ಅಭಿಪ್ರಾಯಪಟ್ಟರು.
ಸಿನಿಮಾಗಳಲ್ಲಿ ಕೆಲವರು ಮಾತು ಚೆನ್ನಾಗಿದ್ದರೆ, ಕೆಲವರ ನಟನೆ ಉತ್ತಮವಾಗಿರುತ್ತದೆ. ಮಾತು ಹಾಗೂ ನಟನೆ ಎರಡೂ ಇರುವವರು ಬಹಳ ಅಪರೂಪ. ಅಂತಹ ಅಪರೂಪದ ವರ್ಗಕ್ಕೆ ಸೇರುವವರು ರಮೇಶ್ ಎಂದು ಬಣ್ಣಿಸಿದರು.
ಸಮಾಜದಲ್ಲಿ ಎರಡು ತರಹ ಜನರಿರುತ್ತಾರೆ. ಒಬ್ಬರು ಬಂದರೆಂದರೆ ಮಾತನಾಡಿಸಬೇಕು ಅನಿಸುತ್ತದೆ, ನಗು ಚಿಮ್ಮುತ್ತದೆ. ಇನ್ನು ಕೆಲವರನ್ನು ನೋಡಿದರೆ ನಗುವುದನ್ನೂ ನಿಲ್ಲಿಸಬೇಕೆನಿಸುತ್ತದೆ. ಕೆಲವರಿಗೆ ಮಾತ್ರ ತಮ್ಮ ಮಾತು, ವ್ಯಕ್ತಿತ್ವ, ಚಲನಶೀಲತೆ ಹಾಗೂ ಮತ್ತೊಬ್ಬರ ಬಗೆಗಿನ ಸವಿಮಾತುಗಳು ಹೇಳುವುದರಿಂದ ಎಲ್ಲರಿಗೂ ಪ್ರಿಯರಾಗುತ್ತಾರೆ. ಅವರಿಗೆ ಯಾವುದೇ ಪ್ರಚಾರದ ಅಗತ್ಯವಿರುವುದಿಲ್ಲ. ಸಕ್ಕರೆ ಇದ್ದರೆ ಪ್ರಚಾರ ಅನಗತ್ಯ, ಡಿಡಿಟಿ ಅಂತ ಬರೆದರೂ ಇರುವೆಗಳು ಹುಡುಕಿಕೊಂಡು ಬರುತ್ತವೆ. ಆದರೆ ಡಿಡಿಟಿಗೆ ಸಕ್ಕರೆ ಅಂತ ನಾಮಫಲಕ ಹಾಕಿದರೂ ಯಾರೊಬ್ಬರು ಬರುವುದಿಲ್ಲ. ಮನುಷ್ಯ ಸಕ್ಕರೆಯಂತಿರಬೇಕು. ಹಾಗೆ ಸಕ್ಕರೆಯಂತಾದವರು ರಮೇಶ್ ಅರವಿಂದ್ ಎಂದು ಗುರುರಾಜ ಕರಜಗಿ ವಿಸ್ತೃತವಾಗಿ ವಿಶ್ಲೇಷಿಸಿದರು.

ರಮೇಶ್ ಅವರ ಉಲ್ಟಾಪಲ್ಟಾ ನೋಡಿದವರಿಗೆ ಅಮೃತವರ್ಷಿಣಿ ರಮೇಶ್ ಅವರೇನಾ ಅಂತ ಅನಿಸುತ್ತದೆ. ಎಲ್ಲವನ್ನೂ ಅರಗಿಸಿಕೊಂಡಾಗ ಮಾತ್ರ ಅಂತಹ ತಾದಾತ್ಮ್ಯ ನಟನೆ ಸಾಧ್ಯ. ಒಳ್ಳೆಯ ನಟನಾದವನು ಪರಕಾಯ ಪ್ರವೇಶ ಮಾಡಿದಾಗ ಕಲಾವಿದನಾಗಿ ರೂಪಗೊಳ್ಳುತ್ತಾನೆ. ಇದಕ್ಕೆ ಸಂಜೀವ್‌ಕುಮಾರ್ ಕುರಿತು ರಾಜ್‌ಕಪೂರ್ ಆಡಿದ `ಯು ಆರ್ ಎ ಜೋಕರ್ ಇನ್ ಎ ಪ್ಯಾಕ್’ ಎಂಬ ಮಾತೇ ಸಾಕ್ಷಿ ಎಂದರು.
ದೂರದರ್ಶನದಲ್ಲಿ ಪರಿಚಯ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ದಿನದಿಂದ ಇಂದಿನವರೆಗೆ ರಮೇಶ್ ಅರವಿಂದ್ ಅವರು ದೇಹ-ಮನಸ್ಸಿನಲ್ಲಿ ವ್ಯತ್ಯಾಸವೇನೂ ಇಲ್ಲ. ಓದಿದ್ದು ಯಾವತ್ತೂ ವ್ಯರ್ಥವಾಗದೆಂಬ ಮಾತಿನಂತೆ ಇಂಜಿನಿಯರಿಂಗ್ ಕಲಿತು ಪ್ರತಿಭಾವಂತ ವಿದ್ಯಾರ್ಥಿ ಅನಿಸಿಕೊಂಡಿದ್ದ ರಮೇಶ್ ಅವರ ನಟನೆಯಲ್ಲಿ ಇಂಜಿನಿಯರಿಂಗ್ ವಿಜ್ಞಾನದ ಪಾತ್ರವಿರುವುದನ್ನು ಕಾಣಬಹುದು. ಇಂಜಿನಿಯರಿಂಗ್‌ನ ಲಾಜಿಕಲ್ ಸೀಕ್ವೆನ್ಸ್ ನಟನೆಯಲ್ಲಿ ನೆರವಾಗಿದೆ. ನಿರೂಪಣೆಯಲ್ಲಿ ಅದು ಸಾಕಾರಗೊಂಡಿದೆ. ಓದು, ಪರಿಶ್ರಮ, ಬದ್ಧತೆ ಅವರನ್ನು ಎತ್ತರಕ್ಕೆ ಬೆಳೆಸಿದೆ ಎಂದು ಡಾ.ಗುರುರಾಜ ಕರಜಗಿ ವಿವರಿಸಿದರು.
ಹೆಮ್ಮೆಯ ಹಿರಿಯಣ್ಣ: ಸಂಯುಕ್ತ ಕರ್ನಾಟಕ ಎಲ್ಲಾ ಪತ್ರಿಕೆಗಳಿಗೆ ಹಿರಿಯಣ್ಣ. ಭಾರತದಲ್ಲಿ ಟ್ರಸ್ಟ್ ಅಧೀನದಲ್ಲಿ ನಡೆಯುತ್ತಿರುವ ಮೂರು ಪತ್ರಿಕೆಗಳಲ್ಲಿ ಒಂದೆಂಬ ಹೆಗ್ಗಳಿಕೆ ಸಂಯುಕ್ತ ಕರ್ನಾಟಕದ್ದು. ನೂರರ ಹತ್ತಿರ ಸಾಗುತ್ತಿದೆ. ಒಂದು ಶತಮಾನದ ವಿದ್ಯಮಾನಗಳಿಗೆ ಸಾಕ್ಷೀಭೂತವಾಗಿದೆ. ಇಂತಹ ಸಂಸ್ಥೆ ಯುಗಾದಿ ವಿಶೇಷ ಸಂಚಿಕೆ ಹೊರತರುತ್ತಿರುವುದು
ಹೆಮ್ಮೆಯ ವಿಷಯ ಎಂದೂ ಡಾ. ಗುರುರಾಜ ಕರಜಗಿ ಬಣ್ಣಿಸಿದರು.

ಕಲೆಯ ಔನ್ನತ್ಯವನ್ನು ಕಾಣಲಿ
ಶಬ್ದಗಳ ಸುನಾದವನ್ನು ಪಾತ್ರಗಳ ಆಶಯಕ್ಕೆ ತಕ್ಕಂತೆ ಪಾತ್ರಗಳ ಗುಣವಿಶೇಷಗಳನ್ನು ಮೌನದ ಮೂಲಕ ತಲುಪಿಸುವ ಕೆಲವೇ ಕೆಲವು ನಟರಲ್ಲಿ ರಮೇಶ್ ಅರವಿಂದ್ ಒಬ್ಬರು ಎಂದು ಲೋಕ ಶಿಕ್ಷಣ ಟ್ರಸ್ಟ್‌ನ ಪ್ರಕಟಣೆಗಳ ಸಮೂಹ ಸಂಪಾದಕ ಹುಣಸವಾಡಿ ರಾಜನ್ ಬಣ್ಣಿಸಿದರು.
ಪತ್ರಿಕೋದ್ಯಮದ ಅಂತಿಮ ಶಬ್ದವೇ ಬರವಣಿಗೆ. ಆದರೆ, ಪ್ರದರ್ಶನ ಕಲೆಗಳಲ್ಲಿ ಅದು ತದ್ವಿರುದ್ಧ. ಶಬ್ದಗಳಿಲ್ಲದೆ ಧ್ಯಾನದ ಮೂಲಕ ಭಾವವನ್ನು ಜೀರ್ಣಿಸಿಕೊಂಡು ಅಕ್ಷರ ಜ್ಞಾನವೇ ಇಲ್ಲದೆ ಅಸಂಖ್ಯ ವ್ಯಕ್ತಿಗಳಿಗೆ ವಿಚಾರಗಳ ಮೂಲಕ ಪಾತ್ರಗಳನ್ನು ನಿವೇದನೆ ಮಾಡಿಕೊಳ್ಳುವಂತೆ ಎಸ್.ವಿ.ರಂಗರಾವ್ ಮಾಡಿದಂತಹ ಘಟೋತ್ಗಜ ಪಾತ್ರ ಅದ್ಭುತ. ಅಂತಹ ಚೈತನ್ಯ ಸಹಜಾಭಿನಯ ತಾರೆ ರಮೇಶ್ ಅವರಲ್ಲಿದೆ ಎಂದರು.
ಯುಗಾದಿಯ ಹೊಸ್ತಿಲಲ್ಲಿ ಮಹಾಚೈತ್ರದ ಆಗಮನದ ಹೊತ್ತಲ್ಲಿ ನಮ್ಮೆಲ್ಲರ ಅಭಿಲಾಷೆಯಂತೆ ಅರವಿಂದದ ಅನುರಾಗದಲ್ಲಿ ಕಲೆಯ ಔನ್ನತ್ಯವನ್ನು ಕಾಣಲಿ. ಅದನ್ನು ನೋಡುವಂತಹ ಸುಯೋಗ ನಮ್ಮೆಲ್ಲರದಾಗಲಿ ಎಂದರು.
ಕಲೆ ಮತ್ತು ಕಲಾವಿದನಿಗೆ ಭಾಷೆಯ ಹಂಗಿಲ್ಲ, ದೇಶವಿಲ್ಲ, ಧರ್ಮವಿಲ್ಲ. ಯಾವ ಹಂಗೂ ಇಲ್ಲದೆ ಈ ಲೋಕವೇ ಗುಂಗಿನಲ್ಲಿರುವಂತೆ ಮಾಡಲಿ ಎಂದೂ ಹುಣಸವಾಡಿ ರಾಜನ್ ಹಾರೈಸಿದರು.

ಮಹನೀಯರ ಕೊಡುಗೆ ಸಂ.ಕ. ಹಿರಿಮೆ
ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಜನರಿಗೆ ಮಾಹಿತಿ ತಲುಪಿಸಲು ಜನ್ಮತಳೆದ `ಸಂಯುಕ್ತ ಕರ್ನಾಟಕ’ ಇಷ್ಟು ವರ್ಷಗಳ ಕಾಲ ಪತ್ರಿಕೆಯನ್ನು ಅನೇಕ ಕಷ್ಟಕೋಟಲೆಗಳ ಮಧ್ಯೆ ನಡೆಸಿಕೊಂಡು ಬಂದಿದೆ. ಯಾವುದೇ ತೊಂದರೆಯಿಲ್ಲದೆ ಪತ್ರಿಕೆ ಮುನ್ನಡೆಯುವಲ್ಲಿ ಅನೇಕ ಮಹನೀಯರ ಕೊಡುಗೆ ಇದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಹಾಗೂ ಲೋಕ ಶಿಕ್ಷಣ ಟ್ರಸ್ಟ್‌ನ ಧರ್ಮದರ್ಶಿ ಅಶೋಕ್ ಹಾರನಹಳ್ಳಿ ಸ್ಮರಿಸಿದರು.

ಯುಗಾದಿ ನಮ್ಮ ಬದುಕಿನಲ್ಲಿ ಮಹತ್ವದ ದಿನ. ಜೀವನದಲ್ಲಿ ಬರುವ ಕಷ್ಟಗಳನ್ನು ನಿಭಾಯಿಸಬೇಕು, ಸುಖವನ್ನೂ ಅನುಭವಿಸಬಹುದು. ಕಷ್ಟ-ಸುಖ ಎರಡನ್ನೂ ಸಮಾನಮನಸ್ಸಿನಿಂದ ಅನುಭಾವಿಸಬೇಕೆಂಬ ಸಂದೇಶ ಈ ಹಬ್ಬದ ವಿಶೇಷ. ಈ ಸಂದರ್ಭದಲ್ಲಿ ನಾವು ಎರಡನೇ ವಿಶೇಷ ಸಂಚಿಕೆಯನ್ನು ಹೊರತಂದಿದ್ದೇವೆ. ಈ ಸಂವತ್ಸರ ನೆಮ್ಮದಿಯನ್ನು ಕೊಡಲಿ ಎಂದು ಹಾರೈಸಿದರು.
ವಕೀಲನಾದವನು ಅನಿವಾರ್ಯವಾಗಿ ಎಲ್ಲಾ ವಿಷಯಗಳ ಬಗ್ಗೆ ತಿಳಿದುಕೊಳ್ಳುವ ಸಂದರ್ಭಗಳು ಬರುತ್ತವೆ. ಆದರೆ, ಚಿತ್ರನಟಗಳಲ್ಲಿ ಅಂತಹ ತಿಳಿವಳಿಕೆ ಅಪರೂಪ. ರಮೇಶ್ ಬರವಣಿಗೆ ಮತ್ತು ನಟನೆ ಎರಡೂ ಸಮ್ಮಿಳಿತಗೊಂಡಿರುವ ಕಲಾವಿದರು ಎಂದು ಅಶೋಕ್ ಹಾರನಹಳ್ಳಿ ಬಣ್ಣಿಸಿದರು.

ವಿವೇಕ-ವಿವೇಚನೆಯ ಅರ್ಥದ ಅರಿವೇ ಯುಗಾದಿ
ವಿವೇಕ ಮತ್ತು ವಿವೇಚನೆಯ ಅರಿವು; ನಾವು ಬದುಕನ್ನು ಹೇಗೆ ರೂಪಿಸಿಕೊಳ್ಳುತ್ತೇವೆ ತಿದ್ದುಕೊಳ್ಳುತ್ತೇವೆ ಎಂಬುದೇ ಯುಗಾದಿಯ ವಿಶೇಷತೆ ಎಂದು ಲೋಕ ಶಿಕ್ಷಣ ಟ್ರಸ್ಟ್ ಅಧ್ಯಕ್ಷರು ಹಾಗೂ ಮೇಲ್ಮನೆ ಸದಸ್ಯರಾದ ಯು.ಬಿ.ವೆಂಕಟೇಶ್ ಅಭಿಪ್ರಾಯಪಟ್ಟಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇದೊಂದು ವಿಶೇಷ ದಿನ. ಯುಗಯುಗಾದಿ ಕಳೆದರೆ ಯುಗಾದಿ ಮರಳಿ ಬರುತ್ತಿದೆ. ಈ ಶುಭಸಂದರ್ಭದ ಸಂಚಿಕೆಯನ್ನು ರಮೇಶ್ ಅರವಿಂದ್ ಅವರು ಲೋಕಾರ್ಪಣೆಗೊಳಿಸಿರುವುದು ಮತ್ತೂ ವಿಶೇಷ ಎಂದು ಹೆಮ್ಮೆಯಿಂದ ನುಡಿದರು.

ಕನ್ನಡದವರು ಭಾರತದ ಪ್ರತಿಭಾವಂತರ ಕಲಾವಿದರಾಗಿ ರೂಪುಗೊಳ್ಳುವುದು ಬಹಳ ಕಷ್ಟ. ಕೆಲವೇ ಜನರಿಗದು ಸಾಧ್ಯವಾಗಿದೆ. ರಮೇಶ್ ಅಂತಹವರಲ್ಲಿ ಪ್ರಮುಖರು. ಕಮಲಹಾಸನ್‌ರ ಜತೆ, ಬಾಲಚಂದರ್ ನಿರ್ದೇಶನದಲ್ಲಿ ನಟಿಸಿ ಅಂತಹದನ್ನು ಸಾಧಿಸಿ ತೋರಿಸಿದ್ದಾರೆ ಎಂದು ಯು.ಬಿ.ವೆಂಕಟೇಶ್ ಶ್ಲಾಘಿಸಿದರು.
ಸಂಯುಕ್ತ ಕರ್ನಾಟಕದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಜನರಿಗೆ ಸುದ್ದಿ ಮುಟ್ಟಿಸಿದರೆ, ಆನಂತರ ಕರ್ನಾಟಕದ ಏಕೀಕರಣ, ಕನ್ನಡ ಭಾಷೆಯ ಬೆಳವಣಿಗೆ ಹಾಗೂ ಇಡೀ ರಾಜ್ಯದ ಅಸ್ತಿತ್ವವನ್ನು ಉಳಿಸಿಕೊಳ್ಳಲು `ಸಂಯುಕ್ತ ಕರ್ನಾಟಕ’ ಬಹಳ ಕೊಡುಗೆ ನೀಡಿದೆ, ಹೋರಾಟ ಮಾಡಿದೆ. ನಿಟ್ಟೂರು ಶ್ರೀನಿವಾಸರಾವ್, ಹಾರನಹಳ್ಳಿ ರಾಮಸ್ವಾಮಿ ಸೇರಿದಂತೆ ಹಲವು ಮಹನೀಯರ ಸೇವೆಯಿಂದ ಇದು ಸಾಧ್ಯವಾಗಿದೆ. ಏನೂ ಸ್ವಾರ್ಥವಿಲ್ಲದೆ ಹೊರ ತರುತ್ತಿರುವ ಪತ್ರಿಕೆಯೆಂಬ ಹೆಗ್ಗಳಿಕೆ ನಮ್ಮದು ಎಂದರು.
ಆಧುನಿಕ ತಂತ್ರಜ್ಞಾನಗಳ ಪೈಪೋಟಿ, ಓದುಗರ ಸಂಖ್ಯೆ ಕಡಿಮೆಯಾಗಿರುವ ನಡುವೆಯೂ ಪತ್ರಿಕೆಯನ್ನು ಹೊರತರಲಾಗುತ್ತಿದೆ ಎಂದು ಯು.ಬಿ.ವೆಂಕಟೇಶ್ ಅವರು ವಸ್ತುಸ್ಥಿತಿಯನ್ನು ವಿವರಿಸಿದರು.