ಮಾಲಿನ್ಯ ನಿಯಂತ್ರಣ ಎಂಬ ಮಲಿನಾವಸ್ಥೆ

ಜನಾಶಯ
Advertisement

ಪಿಓಪಿ ಗಣೇಶ ಮೂರ್ತಿ ನಿರ್ಮಿಸಿದವರಿಗೆ ಮತ್ತು ಬಳಸಿದವರಿಗೆ ದಂಡ ಮತ್ತು ಶಿಕ್ಷೆ. ಹತ್ತಾರು ವರ್ಷಗಳಿಂದ ಗಣೇಶ ಹಬ್ಬ ಸಮೀಪಿಸುತ್ತಿದ್ದಂತೆಯೇ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹೆಸರಿನಲ್ಲಿ ಇಂತಹ ಪ್ರಕಟಣೆ ಹೊರಬೀಳುತ್ತದೆ.
ಮಣ್ಣಲ್ಲಿ ಮಣ್ಣಾಗದ, ನೀರಿನಲ್ಲಿ ಕರಗದ, ಬೆಂಕಿ ಹಚ್ಚಿದರೆ ಮಾಲಿನ್ಯ ಪ್ರದೂಷಣೆ ಮಾಡುವಂತಹ ಕಮರು ವಾಸನೆ ಹೊರಸೂಸುವ ಪಿಓಪಿ ನಿಷೇಧಿಸುವುದು ಸ್ತುತ್ಯಾರ್ಹವೇ.
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಜಿಲ್ಲೆಗಳ ಜಿಲ್ಲಾಡಳಿತಗಳ ಮೂಲಕ ದೇಶದ ಎಲ್ಲೆಡೆ ಈ ನಿಷೇಧವನ್ನು ಹೇರಿದೆ. ಇದಕ್ಕೆ ಪಟಾಕ್ಷಿಯನ್ನು ಕೂಡ ಸೇರಿಸಿದೆ. ಪಿಓಪಿ ಗಣೇಶ ಮತ್ತು ಪಟಾಕ್ಷಿ ಎರಡೂ ಮಾಲಿನ್ಯಕಾರಕವೇ.
ಇದಕ್ಕೆ ಪರ ವಿರೋಧ ವ್ಯಕ್ತವಾಗಿದ್ದರೂ ಮಣ್ಣು ಕೂಡ ತುಟ್ಟಿಯಾಗಿರುವ, ಅಲಭ್ಯ ಇರುವ ಮತ್ತು ಕಲಾವಿದರ ಕೈ ಸೋತಿರುವ ನೆಪ ಒಡ್ಡಿ ಧಾರ್ಮಿಕ ಲೇಪನವನ್ನೂ ಬಳಿಯಲಾಗಿದೆ. ಮಹಾರಾಷ್ಟ್ರ, ಉತ್ತರ ಪ್ರದೇಶ, ಒಡಿಶಾಗಳಲ್ಲಿ ನಮ್ಮ ಹಬ್ಬದ ವಿಗ್ರಹಗಳಿಗೇಕೆ ಮಾತ್ರ ನಿಷೇಧ? ಇಂತಹ ಪ್ರತಿಬಂಧನೆ? ಎಂದು ಸರ್ಕಾರದ ಪ್ರತಿನಿಧಿಗಳು, ಮುಖ್ಯಸ್ಥರೇ ಸವಾಲೊಡ್ಡಿದ್ದಾರೆ.
ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಪ್ರತಿ ರಾಜ್ಯಗಳ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ಇದೊಂದು ವಾರ್ಷಿಕ ಕಾರ್ಯ ಎಂಬಂತೆ ಕಾಣುತ್ತದೆ ಎಂದು ಹೇಳಿದರೆ ತಪ್ಪಾಗದು. ಏಕೆಂದರೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗಳಲ್ಲೇ ಮಾಲಿನ್ಯ'ವಿದೆ. ಅಲ್ಲಿನ ಅವರ ಕೈಗಳು ಕೊಳಕಾಗಿವೆ. ಭ್ರಷ್ಟಾಚಾರ, ಪಕ್ಷಪಾತ, ಅವ್ಯವಹಾರಗಳ ಮಂಡಳಗಳಾಗಿರುವುದರಿಂದ ಜನ ಹಾಗೂ ಉದ್ಯಮಿಗಳು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಕುಹಕ ನೋಟದಿಂದ ಕಾಣುತ್ತಿದ್ದಾರೆ. ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಷ್ಟು ವಿವಾದ ಮತ್ತು ಅವ್ಯವಹಾರದ ಆರೋಪ ಹೊತ್ತ ಮಂಡಳಿ ದೇಶದ ಇತರೆಡೆ ಕಾಣುವುದಿಲ್ಲ. ಮಂಡಳಿಯ ಅಧ್ಯಕ್ಷರು, ಸದಸ್ಯರು, ಕಾರ್ಯದರ್ಶಿಗಳ ನಡುವಿನ ಬೀದಿ ರಂಪಾಟ, ನೇಮಕ ವಿವಾದ, ಅಕ್ರಮಗಳು ಕಳೆದೆರೆಡು ತಿಂಗಳಗಳಿಂದ ಬಯಲಾಗಿವೆ. ಈಗಷ್ಟೇ ಅಲ್ಲ. ಕಳೆದ ಹತ್ತು ವರ್ಷಗಳಿಂದ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ, ಸದಸ್ಯ, ಕಾರ್ಯದರ್ಶಿಗಳ ಹುದ್ದೆ ಬೆಟ್ಟಿಂಗ್ ರೀತಿ ಮೌಲ್ಯ ಹೆಚ್ಚಿಸಿಕೊಳ್ಳುತ್ತಿದೆ. ಎಷ್ಟಿದೆ ನೋಡಿ? ಮಂಡಳಿಯಲ್ಲಿ ಹದಿನೇಳೂವರೆ ಕೋಟಿ ರೂಪಾಯಿಯಷ್ಟು ಕಾನೂನು ಬಾಹೀರವಾಗಿ ಗುತ್ತಿಗೆ ನೀಡಲಾಗಿದೆ; ಬೇಕಾಬಿಟ್ಟಿ ಪ್ರಚಾರ ಜಾಹೀರಾತು ನೀಡಿ ಅವ್ಯವಹಾರ ಎಸಗಲಾಗಿದೆ ಎಂದು ಕಳೆದ ತಿಂಗಳು ಆರೋಪಿಸಿದವರೇ ಸದಸ್ಯ ಕಾರ್ಯದರ್ಶಿ. ಅವರಿಗೆ ಅಮಾನತು ಶಿಕ್ಷೆ. ಈಗ ಮಂಡಳಿಯ ಅಧ್ಯಕ್ಷ ಶಾಂತ್ ತಿಮ್ಮಯ್ಯ ವಜಾ! ಈ ಮಧ್ಯೆ ಹೊಸ ಅಧ್ಯಕ್ಷರ ನೇಮಕಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾನದಂಡಗಳೇ ಬದಲು. ಪರಿಸರ, ರಸಾಯನ, ಫಿಜಿಕ್ಸ್ ಅಧ್ಯಯನ ಮಾಡಿದವರು ಮಂಡಳಿಯ ಅಧ್ಯಕ್ಷರಾಗಬೇಕೆಂಬ ಷರತ್ತನ್ನು ಸಡಿಲಗೊಳಿಸಿ ಎಂಜಿನಿಯರ್ ಕೂಡ ಅಧ್ಯಕ್ಷರಾಗಬಹುದು ಎಂದು ಯಾರಿಗೋ ಫೇವರ್ ಮಾಡಲು ನಿಯಮ ಬದಲಿಸಿದ ಆರೋಪ ಇದೆ. ಅಂದರೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹತ್ತು ವರ್ಷಗಳ ಹಿಂದೆ ನಾಮಕೆವಾಸ್ತೆಯಂತಿತ್ತು. ಈಗ ಹಾಗಲ್ಲ. ಅತ್ಯಂತ ಪ್ರಬಲ ಮತ್ತು ಕೈತುಂಬ ದೋಚುವ, ಬೊಕ್ಕಸ ಬಗೆಯುವ ಇಲಾಖೆ ಎನ್ನಬಹುದು. ಇದಕ್ಕೆ ಪೂರಕವಾಗಿ ಸರ್ಕಾರಗಳು ವರ್ತಿಸಿವೆ. ಪ್ಲಾಸ್ಟಿಕ್ ನಿಷೇಧ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸಿಬ್ಬಂದಿಗೆ ಜೇಬು ಭರ್ತಿಯ ದೊಡ್ಡ ದಂಧೆ. ಪ್ಲಾಸ್ಟಿಕ್ ಉದ್ಯಮಿಗಳಿಂದ, ಮಾರುವ ಅಂಗಡಿಕಾರರಿಂದ ಎಲ್ಲರಿಂದಲೂ ಹಫ್ತಾ ವಸೂಲಿ. ಹಾಗೆಯೇ ಪಟಾಕ್ಷಿ ನಿಷೇಧ. ದೇಶದ ಪಟಾಕ್ಷಿ ಉದ್ಯಮಿಗಳು ಈ ಮಾಲಿನ್ಯ ನಿಯಂತ್ರಣ ಮಂಡಳಿಯ ಹೊಟ್ಟೆ ಹೊರೆದು ಸಣ್ಣಗಾಗಿದ್ದಾರೆ. ಮೊನ್ನೆ ಮೊನ್ನೆ ಹಾವೇರಿ ಬಳಿ ಪಟಾಕ್ಷಿ ಗೋದಾಮಿಗೆ ಬೆಂಕಿ ಬಿದ್ದು ನಾಲ್ವರು ಸಾವನ್ನಪ್ಪಿದರು. ಜಿಲ್ಲಾಡಳಿತ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಎಲ್ಲರಿಗೂ ಅಲ್ಲಿ ಗೋದಾಮಿರುವುದು, ರಕ್ಷಣೆ ಇಲ್ಲದಿರುವುದು ಗೊತ್ತು. ಅಸುರಕ್ಷತೆ ಇದ್ದರೂ ವರ್ಷಗಳ ಕಾಲ ನಿರಾತಂಕವಾಗಿ ವ್ಯವಹಾರ ನಡೆದದ್ದೇಮಾಮೂಲಿ’ಯಿಂದ. ಈಗ ಸ್ಫೋಟ ಸಂಭವಿಸಿ ಸಾವುಗಳು ಸಂಭವಿಸಿದ ನಂತರ, ನಾವು ಹಿಂದೆ ನೋಟಿಸ್ ಕೊಟ್ಟಿದ್ವಿ, ಎಚ್ಚರಿಸಿದ್ವಿ, ಲೈಸೆನ್ಸ್ ನವೀಕರಿಸಿಲ್ಲ ಇತ್ಯಾದಿ ಸಬೂಬುಗಳು ಬಂದವು.
ದಕ್ಷಿಣ ಕನ್ನಡದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಯಿಂದ ಐವತ್ತು ಮೀಟರ್ ದೂರದಲ್ಲಿ ಪ್ಲಾಸ್ಟಿಕ್ ಕೊಟ್ಟೆ (ಪ್ಯಾಕೆಟ್) ತಯಾರಿಸುವ ಫ್ಯಾಕ್ಟರಿಗಳಿವೆ. ಪ್ಲಾಸ್ಟಿಕ್ ನಿಷೇಧ ಹೇರಿದಾಗ್ಯೂ ಪಕ್ಕದಲ್ಲಿರುವ ಕಾರ್ಖಾನೆಯನ್ನು ನಿಯಂತ್ರಿಸಿಲ್ಲ !! ಇಲ್ಲಿ ಹೊಸ ಅಧಿಕಾರ ಬಂದ ತಕ್ಷಣ ತನ್ನ ಮಾಮೂಲಿ ಹೆಚ್ಚಿಸಿಕೊಳ್ಳಲು ರೇಡ್ ಮಾಡುತ್ತಾರೆ. ಹಾಗೆ ರೇಡ್ ಮಾಡಿದಾಗ ಕಾರ್ಮಿಕರು, ಸಮುದಾಯದ ಜನ, ಹತ್ತು ವರ್ಷಗಳಿಂದ ಅಕ್ಕಪಕ್ಕದಲ್ಲೇ ಇದ್ದೀರಿ. ಈಗೇಕೆ? ನಿಯಮವನ್ನು ಮೊದಲೇ ಪಾಲಿಸಬಹುದಿತ್ತಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಬೆಂಗಳೂರಿನ ನೆಲಮಂಗಲ ಕೈಗಾರಿಕಾ ಪ್ರದೇಶದ ೧೭೮ ಉದ್ಯಮಿಗಳು ಒಂದು ವರ್ಷದ ಹಿಂದೆ ರಾಜ್ಯದ ಮುಖ್ಯಮಂತ್ರಿಗಳಿಗೆ ಮತ್ತು ಅಂದಿನ ಪರಿಸರ ಮಂತ್ರಿ ಆನಂದ ಸಿಂಗ್ ಅವರಿಗೆ ಸುದೀರ್ಘ ಪತ್ರ ಬರೆದು, ಎಷ್ಟೆಲ್ಲ ಹಿಂಸೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತದರ ಅಧಿಕಾರಿಗಳಿಂದ ಆಗುತ್ತಿದೆ ಎಂದು ವಿವರಿಸಿದ್ದರು. ಕೈಗಾರಿಕೆ ನಡೆಸುವುದೇ ಸಾಧ್ಯವಿಲ್ಲದ, ಮಾಮೂಲಿ ಕೊಟ್ಟು ಸುಸ್ತಾಗಿರುವ ಕಥೆಯನ್ನು ಬಣ್ಣಿಸಿದರು. ಮಂತ್ರಿಗಳ ಕಚೇರಿಯಲ್ಲಿ ಈ ಕಡತ ದಾಖಲೆಯಲ್ಲಿದೆ.
ನಿಜ. ಯಾವುದೇ ಕೈಗಾರಿಕೋದ್ಯಮಿಯನ್ನು ಮಾತನಾಡಿಸಿ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಉಪಟಳದ ಬಗ್ಗೆ ಪುಂಖಾನುಪುಂಖವಾಗಿ ದೂರು ಹೇಳುತ್ತಾರೆ. ಸಾಮಾನ್ಯ ಲೇತ್ ಮಷಿನ್ ಇಟ್ಟುಕೊಂಡವರಿಂದ ಹಿಡಿದು ದೊಡ್ಡ ಫ್ಯಾಕ್ಟರಿಯವರೆಗೂ ಈ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಕಾಟ.
ಪ್ರವಾಸೋದ್ಯಮ ಅಭಿವೃದ್ಧಿಗೆ, ಯೋಜನೆಗಳಿಗೆ ಇದೇ ಮಂಡಳಿಯ ಪರವಾನಗಿ ಅಗತ್ಯ. ಬಂದರು ನಿರ್ಮಾಣಕ್ಕೂ ಅಗತ್ಯ. ಹಾಗೇ ಪ್ರತಿ ರಾಸಾಯನಿಕ ಫ್ಯಾಕ್ಟರಿಗಂತೂ ಹತ್ತು ಹಲವು ಷರತ್ತುಗಳ ನಿಬಂಧನೆ ಇದೆ. ಇಷ್ಟಕ್ಕೂ ವರ್ಷಾನುಗಟ್ಟಲೇ ಕಡತ ಮಂಡಳಿಯಲ್ಲೇ ಬಿದ್ದಿರುತ್ತದೆ. ಲೋಕಾಯುಕ್ತ ಅಧಿಕಾರಿಗಳು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಯಲ್ಲಿ ದಾಖಲೆ ಪರಿಶೀಲಿಸಿದರೆ ಅವರೇ ಕಕ್ಕಾಬಿಕ್ಕಿಯಾಗುವಂತಾಯಿತು.
ವರ್ಷಾನುಗಟ್ಟಲೇ ಕಡತ ಬಿದ್ದಿರುವುದು ಅವರಿಗೂ ತಿಳಿಯದ್ದೇನಲ್ಲ. ನಿಯಮಬದ್ಧ, ತಾಂತ್ರಿಕವಾಗಿ ಪರಿಪೂರ್ಣವಾಗಿರುವ, ಮಂಡಳಿಯ ಷರತ್ತುಗಳೆಲ್ಲವನ್ನು ಪೂರೈಸಿಯೂ ಪರವಾನಗಿ ದೊರೆಯದ ನೂರಾರು ಉದ್ಯಮಗಳು ಬಾಗಿಲು ತೆಗೆಯುತ್ತಿಲ್ಲ. ಅದೇ ಯಾವುದೇ ನಿರ್ಬಂಧ, ನಿಯಂತ್ರಣ ಇಲ್ಲದ, ವಿಷಾನಿಲ ಹೊರಸೂಸುವ, ಪರಿಸರ-ಜಲಮಾಲಿನ್ಯ ಉಂಟು ಮಾಡುವ ಉದ್ಯಮಗಳು ರಾಜಾರೋಷವಾಗಿ ನಡೆಯುತ್ತಿವೆ. ಕಾನೂನು ಪಾಲಕರಿಗೆ, ನಿಯಮಬದ್ಧವಾಗಿ ವ್ಯವಹರಿಸುವವರಿಗೆ ಮಾಲಿನ್ಯ ನಿಯಂತ್ರಣ ಮಂಡಳಿಯ ಕಿರುಕುಳ ಎನ್ನುವುದು ಆರೋಪ.
ಇಷ್ಟಕ್ಕೂ ಲೋಕಾಯುಕ್ತ ಪುರ‍್ರಚನೆ ಆಯಿತಲ್ಲ, ಕಳೆದ ವರ್ಷ. ಆ ನಂತರ ನಡೆದ ದಾಳಿಗಳಲ್ಲಿ ಲೋಕೋಪಯೋಗಿ, ಕಂದಾಯ ಅಧಿಕಾರಿಗಳನ್ನು ಬಿಟ್ಟರೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸಿಬ್ಬಂದಿಯೇ ಅತೀ ಹೆಚ್ಚು ದಾಳಿಗಳಲ್ಲಿ ಸಿಕ್ಕವರು. ಆಸ್ತಿಪಾಸ್ತಿ ನೂರಾರು ಪಟ್ಟು ಹೆಚ್ಚು ದೊರೆತದ್ದು.
ನಿಜ. ಮಾಲಿನ್ಯ ನಿಯಂತ್ರಣಕ್ಕೆ ಆದ್ಯತೆ ಬೇಕೇ ಬೇಕು. ಇಲ್ಲದಿದ್ದರೆ ಜನರಿಗೆ ಶುದ್ಧ ಗಾಳಿ, ನೀರು, ನೆಲವೂ ಇಲ್ಲದ ನಾಡಾದೀತು. ಪ್ರಶ್ನೆ ಇರುವುದು ಒಂದು ಅಧ್ಯಕ್ಷ, ಸದಸ್ಯ ಕಾರ್ಯದರ್ಶಿಗಾಗಿ ಕೋಟ್ಯಂತರ ರೂಪಾಯಿ ಸುರಿಯುವ, ಲಾಬಿ ನಡೆಸುವ ಮಂಡಳಿಯ ನಡೆಯ ಬಗ್ಗೆ.
ಎಲ್ಲ ನಿಷೇಧ, ನಿಬಂಧನೆಗಳು, ಕಾನೂನು ಕಟ್ಟಳೆಗಳನ್ನು ಕೈತುಂಬ ಬಗೆಯುವ ಅಸ್ತçಗಳನ್ನಾಗಿಸಿಕೊಂಡಿರುವ ಸಿಬ್ಬಂದಿಗಳು, ಎಲ್ಲಕ್ಕೂ ಹೆಚ್ಚಾಗಿ ಅವರಲ್ಲೇ ಇರುವ ಭ್ರಷ್ಟ, ಕಲುಷಿತ ಮನಸ್ಸು ಇವುಗಳಿಂದ ಉಳದೀತೇ ಪರಿಸರ? ನಿಯಂತ್ರಣಗೊಂಡೀತೇ ಮಾಲಿನ್ಯ? ಗಣೇಶನೇ ವರ್ಷಕ್ಕೆ ಲಕ್ಷಾಂತರ ರೂಪಾಯಿ ಆದಾಯ ತಂದು ಕೊಡುವಾಗ, ಪಟಾಕ್ಷಿ ಕೋಟ್ಯಂತರ ರೂಪಾಯಿ ಪೀಕುವಾಗ ಎಲ್ಲರಿಗೂ ಬೇಕು ಪರಿಸರ ಮಾಲಿನ್ಯ ಮಂಡಳಿ ಅಧ್ಯಕ್ಷ, ಸದಸ್ಯರು, ಕಾರ್ಯದರ್ಶಿ ಹುದ್ದೆಗಳು ಅಲ್ಲವೇ?!