ಮಾ. 1, 2ರಂದು ಬಳ್ಳಾರಿ ಜಿಲ್ಲಾ ಅಕ್ಷರ ಜಾತ್ರೆ

Advertisement


ಬಳ್ಳಾರಿ: ಅಖಂಡ ಬಳ್ಳಾರಿ ಜಿಲ್ಲೆಯ 22ನೆಯ ಜಿಲ್ಲಾ ಸಾಹಿತ್ಯ ಸಮ್ಮೇಳನ ಮಾ.1,2 ರಂದು ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ನಿಷ್ಠಿರುದ್ರಪ್ಪ ತಿಳಿಸಿದರು.
ಮೊದಲ ದಿನ ಬೆಳಗ್ಗೆ 7.30ಕ್ಕೆ ಧ್ವಜಾರೋಹಣ ಕಾರ್ಯಕ್ರಮ ನೆರವೇರಲಿದೆ. ಮೇಯರ್ ರಾಜೇಶ್ವರಿ ಅವರು ಧ್ವಜಾರೋಹಣ ನೆರವೇರಿಸುವರು. ಬೆಳಗ್ಗೆ 8.30ಕ್ಕೆ ಸಮ್ಮೇಳನಾಧ್ಯಕ್ಷ, ತಾಯಿ ಭುವನೇಶ್ವರಿ ಭಾವಚಿತ್ರ ಮೆರವಣಿಗೆ ನಡೆಯಲಿದೆ. ಶಾಸಕ ಸೋಮಶೇಖರ ರೆಡ್ಡಿ ಮೆರವಣಿಗೆ ಚಾಲನೆ ನೀಡುವರು ಎಂದು ಅವರು ಮಾಹಿತಿ ನೀಡಿದರು.
ಮೆರವಣಿಗೆ ಕಮ್ಮಾ ಭವನದಿಂದ ಗಡಗಿ ಚೆನ್ನಪ್ಪ ವೃತ್ತ, ಮೀನಾಕ್ಷಿ ವೃತ್ತ, ಕಾಳಮ್ಮ ವೃತ್ತ, ಬ್ರೂಸ್ ಪೇಟೆ ವೃತ್ತ, ತೇರು ಬೀದಿ, ಬಸವೇಶ್ವರ ವೃತ್ತ, ರೈಲು ನಿಲ್ದಾಣ ಮಾರ್ಗವಾಗಿ ರಾಘವ ಕಲಾಮಂದಿರ ತಲುಪಲಿದೆ ಎಂದು ಅವರು ತಿಳಿಸಿದರು.
ಬೆಳಗ್ಗೆ 10.30ಕ್ಕೆ ಸಮ್ಮೇಳನದ ಉದ್ಘಾಟನೆ ನೆರವೇರಲಿದೆ. ಕಸಾಪ ರಾಜ್ಯಾಧ್ಯಕ್ಷ ಡಾ. ನಾಡೋಜ ಮಹೇಶ್ ಜೋಶಿ ಸಮ್ಮೇಳನ ಉದ್ಘಾಟಿಸುವರು.ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಬಸವ ಲಿಂಗ ಸ್ವಾಮಿ ಸಾನ್ನಿಧ್ಯ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಅಧ್ಯಕ್ಷತೆ ವಹಿಸುವರು. ಶಾಸಕರಾದ ಸೋಮಶೇಖರ ರೆಡ್ಡಿ, ನಾಗೇಂದ್ರ ಸೇರಿದಂತೆ ವಿವಿಧ ಗಣ್ಯರು ಪಾಲ್ಗೊಳ್ಳುವರು ಎಂದು ಅವರು ತಿಳಿಸಿದರು.
ಸಮ್ಮೇಳನದಲ್ಲಿ ಒಟ್ಟು 8 ಗೋಷ್ಠಿಗಳು ನಡೆಯಲಿವೆ. ಜಿಲ್ಲೆಯ ಸಾಹಿತ್ಯ ಸಾಂಸ್ಕೃತಿಕ ವೈಶಿಷ್ಟ್ಯಗಳು, ಕನ್ನಡ ಸಾಹಿತ್ಯ ಪ್ರಕಾರಗಳು, 2 ಕವಿಗೋಷ್ಠಿ, ಅಖಂಡ ಬಳ್ಳಾರಿ ಜಿಲ್ಲೆಯ ಜ್ವಲಂತ ಸಮಸ್ಯೆಗಳು, ಜಿಲ್ಲೆಯ ಸಾಹಿತ್ಯ ಸಾಂಸ್ಕೃತಿಕ ವೈಶಿಷ್ಟ್ಯಗಳು, ಮಾಧ್ಯಮ ಮತ್ತು ಕನ್ನಡ, ಕನ್ನಡ ಸಾಹಿತ್ಯ ಪರಂಪರೆ ಕುರಿತು ಗೋಷ್ಠಿಗಳು ನಡೆದಿವೆ ಎಂದು ಅವರು ತಿಳಿಸಿದರು.
ಗೌರವ ಕಾರ್ಯದರ್ಶಿ ಬಸವರಾಜ ಗದಗಿನ, ಪ್ರಭು, ದೊಡ್ಡ ಬಸಪ್ಪ, ಬಿಸಿಲಹಳ್ಳಿ ಬಸವರಾಜ, ಚಂದ್ರಶೇಖರ್ ಸೇರಿದಂತೆ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.