ಮಾ. 10ರಂದು ದೇವಗಿರಿ ಲಕ್ಷ್ಮೀಕಾಂತ ಸಂಘದ 36ನೇ ವರ್ಷದ ಶ್ರೀ ಪುರಂದರ ದಾಸರ ಸಂಸ್ಮರಣೋತ್ಸವ

Advertisement

:ಶ್ರೀ ಸುವಿದ್ಯೇಂದ್ರ ತೀರ್ಥರಿಂದ ಚಾಲನೆ, :ವಿದ್ವಾನ್ ಶ್ರೀಕಂಠ ಭಟ್, ರಾಯಚೂರು ಶೇಷಗಿರಿದಾಸರಿಂದ ಸಂಗೀತ ಲಹರಿ, :ಶಾಂತಾಬಾಯಿ ನೇತೃತ್ವ

ಬೆಂಗಳೂರು: ರಾಜಧಾನಿ ಬೆಂಗಳೂರಿನ ಬನಶಂಕರಿ 2ನೇ ಹಂತದಲ್ಲಿರುವ ದೇವಗಿರಿ ಲಕ್ಷ್ಮೀಕಾಂತ ಸಂಘ ಎಂದರೆ ಅದು ಒಂದು ಪ್ರಾಕೃತಿಕ ಚೇತನ ಶಕ್ತಿ. ಕ್ರಿಯಾಶೀಲ ಸಂಘಟನೆಯಲ್ಲಿ ನಿರಂತರ ಸಾಹಿತ್ಯ, ಸಾಂಸ್ಕೃತಿಕ ಮತ್ತು ಧಾರ್ಮಿಕ ಚಟುವಟಿಕೆ ಇದ್ದೇ ಇರುತ್ತದೆ. ಹೋಮ, ಹವನ, ಶ್ರೀನಿವಾಸನ ಕಲ್ಯಾಣ ಇತ್ಯಾದಿ ಮಹೋತ್ಸವಗಳು ವಿಜೃಂಭಿಸುತ್ತವೆ. ದೇವಗಿರಿ ಲಕ್ಷ್ಮೀಕಾಂತ ಸಂಘ ಎಂದರೆ ಅದು ಹರಿ ದಾಸರ ಕೃತಿಗಳನ್ನು ಹೊತ್ತು ಮೆರೆದಾಡಿಸುವ ಸಜ್ಜನರ ತಂಡ. ವಿದ್ವಾಂಸರ ನಂದನ ವನ. ಸಂಗೀತಗಾರರ ಕಲಾಭಿವ್ಯಕ್ತಿಗೆ ಮಹಾ ಮಂಚ.
ಜ್ಞಾನಿಗಳಿವೆ ವೇದಿಕೆ. ಯತಿಗಳು ಬಂದು ಹರಸುವ ಭೂಮಿಕೆ.
ಇಂಥ ಸಂಘವು ಭಾನುವಾರ ಎಂದರೆ ಮಾರ್ಚಿ 10ರಂದು 36ನೇ ವರ್ಷದ ಶ್ರೀ ಪುರಂದರ ದಾಸರ ಸಂಸ್ಮರಣೋತ್ಸವ ಹಮ್ಮಿಕೊಂಡಿದೆ. ಬೆಂಗಳೂರಿನ ಜಯನಗರದ 8ನೇ ಬಡಾವಣೆಯ ಬೆಳಗೋಡು ಕಲ್ಯಾಣ ಮಂದಿರದಲ್ಲಿ
ಸಾವಿರಾರು ಮಾತೆಯರ ಸಂಗಮ, ಶ್ರೀ ಪುರಂದರ ಸಂಸ್ಮರಣೋತ್ಸವ, ವಿದ್ವಾಂಸರಿಗೆ ಸನ್ಮಾನ, ಗಾಯನ ಸಮರ್ಪಣೆ- ಸನ್ಮಾನ- ಹೀಗೆ ವೈವಿಧ್ಯಮಯ ಚಟುವಟಿಕೆ ಸಂಪನ್ನಗೊಳ್ಳಲಿದೆ. ತಿರುಮಲ, ತಿರುಪತಿ ದಾಸ ಸಾಹಿತ್ಯ ಪ್ರಾಜೆಕ್ಟ್ ಮತ್ತು ಮಂತ್ರಾಲಯದ ಗುರು ಸಾರ್ವಭೌಮ ದಾಸ ಸಾಹಿತ್ಯ ಯೋಜನೆಗಳು ಈ ಕಾರ್ಯಕ್ರಮಕ್ಕೆ ಸಹಯೋಗ ನೀಡಿರುವುದು ಮಹಾ ಭಾಗ್ಯ.

ಭಾನುವಾರ ಬೆಳಗ್ಗೆ 7ಕ್ಕೆ ಹಿರಿಯ ವಿದ್ವನ್ಮಣಿ, ಮಂತ್ರಾಲಯದ ಗುರು ಸಾರ್ವಭೌಮ ದಾಸ ಸಾಹಿತ್ಯ ಯೋಜನೆ ನಿರ್ದೇಶಕರಾದ ಶ್ರೀ ಅಪ್ಪಣ್ಣಾಚಾರ್ಯರಿಂದ ಸುಪ್ರಭಾತ ಸೇವೆಯೊಂದಿಗೆ ಸ್ಮರಣೋತ್ಸವ ಚಾಲನೆ ಪಡೆಯಲಿದೆ. 8ಕ್ಕೆ ಸಾಮೂಹಿಕ ಭಜನೆ, ಕೋಲಾಟ,
9.30ಕ್ಕೆ ಶ್ರೀ ಅನುಗ್ರಹ ಸಂಗೀತ ಮಹಾವಿದ್ಯಾಲಯದ ಪ್ರಾಚಾರ್ಯ, ವಿದ್ವಾನ್ ಜೆ.ಎಸ್. ಶ್ರೀಕಂಠ ಭಟ್ ಮತ್ತು ಸಂಗಡಿಗರಿಂದ‘ ಪುರಂದರ ದಾಸರ ಪಿಳ್ಳಾರಿ ಗೀತೆಗಳ’ ವಿಶೇಷ ಗಾಯನ ನೆರವೇರಲಿದೆ.
ಬೆಳಗ್ಗೆ 10.30ಕ್ಕೆ ಶ್ರೀ ಸುವಿದ್ಯೇಂದ್ರ ತೀರ್ಥರು ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಲಿದ್ದಾರೆ. ಹರಿದಾಸರಾದ ಮಾದನೂರು ಪವಮಾನಾಚಾರ್ಯರಿಗೆ ಸನ್ಮಾನ ನಡೆಯಲಿದೆ.
ವಿಶೇಷ ಅತಿಥಿಗಳಾಗಿ ಖ್ಯಾತ ವಿದ್ವಾಂಸ, ವಿದ್ಯಾ ವಾಚಸ್ಪತಿ ಅರಳು ಮಲ್ಲಿಗೆ ಪಾರ್ಥ ಸಾರಥಿ, ಸಂಶೋಧಕ ಸುಭಾಸ ಕಾಖಂಡಕಿ, ಡಾ. ವಾಸುದೇವ ಅಗ್ನಿಹೋತ್ರಿ, ಪಂಡಿತ ಕಲ್ಲಾಫುರ ಪವಮಾನಾಚಾರ್ಯ, ಹಾ.ರಾ. ನಾಗರಾಜಾಚಾರ್ಯ, ಪ್ರಖ್ಯಾತ ಗಾಯಕರಾದ ಡಾ. ರಾಯಚೂರು ಶೇಷಗಿರಿದಾಸ, ಡಾ. ಪುತ್ತೂರು ನರಸಿಂಹ ನಾಯಕ ಇತರ ವಿದ್ವಜ್ಜನರು ಭಾಗವಹಿಸಲಿದ್ದಾರೆ. ಮಧ್ಯಾಹ್ನ ವಿದ್ವಾನ್ ಸಿ.ಎನ್. ರಾಘವೇಂದ್ರ ರಾಯಚೂರು ಅಚರಿಂದ ಪುರಂದರ ಕೀರ್ತನೆಗಳ ಗಾಯನ ಅನುರಣಿಸಲಿದೆ.

ಹರಿದಾಸಿನಿಯರಿಗೆ ಸನ್ಮಾನ:
ಮಧ್ಯಾಹ್ನದ ಅವಧಿಯಲ್ಲಿ ಸಂಘದ ವತಿಯಿಂದ ಹರಿದಾಸಿನಿಯರಿಗೆ ಸನ್ಮಾನ ಹಮ್ಮಿಕೊಂಡಿರುವುದು ಬಹು ವಿಶೇಷವಾಗಿದೆ. ದಾಸ ಸಾಹಿತ್ಯ ಮತ್ತು ವಿವಿಧ ರಂಗದಲ್ಲಿ ಅದ್ವಿತೀಯ ಸಾಧನೆ ತೋರಿರುವ ಮಾತಾ ಮಣಿಗಳಾದ ಡಾ. ರಾಜಲಕ್ಷ್ಮೀ ಪಾರ್ಥಸಾರಥಿ, ಡಾ. ರೇಖಾ ಕಾಖಂಡಕಿ, ಡಾ. ಚಂದ್ರಿಕಾ, ಡಾ. ರಮಾ ವಿಠಲ, ಪುಷ್ಪಾ ಗುಪ್ತಾ, ಶಾಂತಾಬಾಯಿ ಅವರಿಗೆ ಗೌರವಾರ್ಪಣೆ ನೆರವೇರಲಿದೆ. ಡಾ. ಕುಮುದಾ ಗೋವಿಂದ ರಾವ್ ಅವರು ಸನ್ಮಾನ ನೆರವೇರಿಸಲಿದ್ದಾರೆ.
ನಂತರ ಸಂಘದ ಹಿರಿಯ ಸದಸ್ಯರಿಗೆ ಸನ್ಮಾನ, ವಿಜಯಾ ಕಲ್ಚರಲ್ ಅಕಾಡೆಮಿಯ ತೇಜಸ್ವಿನಿ ಸುಬ್ಬರಾವ್ ಮತ್ತು ತಂಡದಿಂದ ದಾಸರ ಕೀರ್ತನೆ ಮತ್ತು ಭರತನಾಟ್ಯ ಪ್ರದರ್ಶನ ನೆರವೇರಲಿದೆ. ನ್ಯಾಯಾಧೀಶೆ ಪದ್ಮಾ ಕಾಖಂಡಕಿ ಅವರು ವಿವಿಧ ಸ್ಪರ್ಧೆ ವಿಜೇತ ಮಹಿಳೆಯರಿಗೆ ಬಹುಮಾನ ವಿತರಣೆ ಮಾಡಲಿದ್ದಾರೆ.

ಸಮಾರೋಪದಲ್ಲಿ ನೃತ್ಯ ರೂಪಕ
ಸಂಜೆ ಪುರಂದರ ಸಂಸ್ಮರಣೋತ್ಸವ ನಿಮಿತ್ತ ಪ್ರಖ್ಯಾತ ಹಿರಿಯ ನೃತ್ಯ ವಿದ್ವಾಂಸ, ಗುರು ಪುಲಿಕೇಶಿ ಕಸ್ತೂರಿ ತಂಡದವರಿಂದ ಮತ್ತು ದೇವಗಿರಿ ಲಕ್ಷ್ಮೀಕಾಂತ ಸಂಘದವರಿಂದ ಮಹಿಳಾ ಹರಿದಾಸಿನಿಯರ ಜೀವನ- ಸಾಧನೆ ಆಧಾರಿತ ನೃತ್ಯ ರೂಪಕ ಪ್ರಸ್ತುತಿ ಸಂಪನ್ನಗೊಳ್ಳಲಿದೆ.