ಮುಂದುವರಿದ ಗ್ಯಾಸ್ ಟ್ಯಾಂಕರ್ ತೆರವು ಕಾರ್ಯಾಚರಣೆ; ಸಾಲುಗಟ್ಟಿ ನಿಂತ ವಾಹನಗಳು

Advertisement

ಧಾರವಾಡ: ಬುಧವಾರ ಸಂಜೆ ಇಲ್ಲಿನ ಹೈಕೋರ್ಟ್ ಸಮೀಪ ರಾಷ್ಟ್ರೀಯ ಹೆದ್ದಾರಿಯ ಅಂಡರ್ ಪಾಸ್ ನಲ್ಲಿ ಸಿಲುಕಿದ ಗ್ಯಾಸ್ ಟ್ಯಾಂಕರ್ ತೆರವುಗೊಳಿಸುವ ಕಾರ್ಯಾಚರಣೆ ಗುರುವಾರ ಬೆಳಿಗ್ಗೆಯೂ ಮುಂದುವರಿದಿದೆ.

ಸೇತುವೆ ಸೀಲಿಂಗ್ ಗೆ ಟ್ಯಾಂಕರ್ ಮುಚ್ಚಳ ತಾಗಿ ಅನಿಲ ಸೋರಿಕೆಯಾಗಿದ್ದರಿಂದ ಎಲ್ಲ ಸುರಕ್ಷತಾ ಕ್ರಮಗಳೊಂದಿಗೆ ಅಗ್ನಿಶಾಮಕ ದಳ, ಎಚ್ ಪಿಸಿಎಲ್ ತಂಡ ಹಾಗೂ ಪೊಲೀಸರು ತೆರವು ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಬೆಳಗಾವಿ ಮತ್ತು ಧಾರವಾಡ ಮಾರ್ಗದಲ್ಲಿ ಸಾಗುವ ( ಹೋಗುವ ಮತ್ತು ಬರುವ) ವಾಹನ ಸಂಚಾರ ಬಂದ್ ಮಾಡಲಾಗಿದೆ.
ಹೀಗಾಗಿ ದೂರ ಮಾರ್ಗದಲ್ಲಿ ಸಾಗುವ ಸರಕು ವಾಹನಗಳು ಸಾಲುಗಟ್ಟಿ ನಿಂತಿವೆ.

ಬುಧವಾರ ಸಂಜೆ ವಿಷಯ ತಿಳಿಯುತ್ತಿದ್ದಂತೆಯೇ ಧಾರವಾಡ – ಬೆಳಗಾವಿ ಮಾರ್ಗದಲ್ಲಿ ಸಾಗುವ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಕೃಷಿ ವಿವಿ, ಬೇಲೂರು ಕೈಗಾರಿಕಾ ಪ್ರದೇಶ, ಹೆದ್ದಾರಿ ಅಕ್ಕಪಕ್ಕದ ಹೊಟೇಲ್, ಹಳ್ಳಿಗಳು, ಹೈಕೋರ್ಟ್ ನ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು.
ಗುರುವಾರವೂ ಕಾರ್ಯಾಚರಣೆ ಮುಂದುವರಿದಿದ್ದು, ವಿದ್ಯುತ್ ಸಂಪರ್ಕ ಕಡಿತ ಮುಂದುವರಿದಿದೆ.
ಮಧ್ಯಾಹ್ನದ ಹೊತ್ತಿಗೆ ಕಾರ್ಯಾಚರಣೆ ಪೂರ್ಣವಾಗುವ ಸಾಧ್ಯತೆ ಇದೆ ಎಂದು ತಿಳಿದಿದೆ.