ಮುಖ್ಯಮಂತ್ರಿಗಳ ಆಯ್ಕೆ : ಬಿಜೆಪಿ ಸಮಾನ ನ್ಯಾಯ

Advertisement

ಪ್ರಕಾಶಚಂದ್ರ
ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಜಯಭೇರಿ ಬಾರಿಸಿದ ಬಿಜೆಪಿ ಮುಖ್ಯಮಂತ್ರಿಗಳ ಆಯ್ಕೆಯಲ್ಲಿ ಸಾಮಾಜಿಕವಾಗಿ ಸಮಾನನ್ಯಾಯ ತತ್ವ ಪಾಲಿಸಿದೆ. ಛತ್ತೀಸ್‌ಗಢದಲ್ಲಿ ಬುಡಕಟ್ಟು ನಾಯಕ ವಿಷ್ಣುದೇವ ಸಾಯಿ, ಮಧ್ಯಪ್ರದೇಶದಲ್ಲಿ ಓಬಿಸಿ ಮುಖಂಡ ಮೋಹನ್ ಯಾದವ್ ಮತ್ತು ರಾಜಸ್ಥಾನದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಭಜನ್‌ಲಾಲ್ ಶರ್ಮಾರನ್ನು ಆಯ್ಕೆಮಾಡುವ ಮೂಲಕ ಬಿಜೆಪಿ ವರಿಷ್ಠರು ಜಾಣ್ಮೆಯ ನಡೆ ಪ್ರದರ್ಶಿಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಮಲ ಪಕ್ಷಕ್ಕೆ ಈ ಸೂತ್ರ ಹೆಚ್ಚಿನ ಮತಗಳನ್ನು ತಂದುಕೊಡುತ್ತದೆ ಎಂಬುದು ಲೆಕ್ಕಾಚಾರ.
ವಿಶೇಷವೆಂದರೆ , ಈ ಮೂರೂ ರಾಜ್ಯಗಳಲ್ಲಿ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಯಾದವರನ್ನು ಬಿಟ್ಟು ಯಾರೂ ಊಹಿಸದ ರೀತಿಯಲ್ಲಿ ಬೇರೆ ಮುಖಗಳಿಗೆ ಅವಕಾಶ ನೀಡಿರುವುದು ಅಚ್ಚರಿಯೆನಿಸಿದೆ.
ಜೊತೆಗೆ ಬಿಜೆಪಿಯಲ್ಲಿ ಹೊಸಬರು/ಯುವಕರಿಗೆ ಅಧಿಕಾರ ಕೊಟ್ಟು ಹಿರಿಯರಿಗೆ ಪಕ್ಷದ ಸಂಘಟನೆಯಲ್ಲಿ ಪ್ರಾತಿನಿಧ್ಯ ಕಲ್ಪಿಸಬೇಕೆಂಬ ಮಾತುಗಳೂ ಬಲವಾಗತೊಡಗಿವೆ. ಹೀಗಾಗಿಯೇ ಮಧ್ಯಪ್ರದೇಶದಲ್ಲಿ ನಾಲ್ಕು ಬಾರಿ ಸಿಎಂ ಆಗಿದ್ದ ಶಿವರಾಜ್ ಸಿಂಗ್ ಚೌಹಾಣ್‌ರನ್ನು ಬದಿಗಿಟ್ಟು ಓಬಿಸಿ ಸಮುದಾಯದ ಮೋಹನ್ ಯಾದವ್‌ಗೆ ಸಿಎಂ ಹುದ್ದೆ ನೀಡಲಾಗಿದೆ. ಛತ್ತೀಸ್‌ಗಢದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬುಡಕಟ್ಟು ಸಮುದಾಯಕ್ಕೆ ಸಿಎಂ ಹುದ್ದೆ ನೀಡಲಾಗುತ್ತದೆ ಎಂದು ಗೃಹ ಸಚಿವ ಅಮಿತ್ ಶಾ ಮೊದಲೇ ಘೋಷಿಸಿದ್ದರು. ಅದರಂತೆ ಮಾತು ತಪ್ಪದೆ ಬುಡಕಟ್ಟು ನಾಯಕ ವಿಷ್ಣುದೇವ ಸಾಯಿಗೆ ಪಟ್ಟ ಕಟ್ಟಲಾಗಿದೆ. ಆದರೆ ರಾಜಸ್ಥಾನ ಮುಖ್ಯಮಂತ್ರಿ ಆಯ್ಕೆಯಲ್ಲಿ ಬಿಜೆಪಿ ವರಿಷ್ಠರು ಬಹಳ ಬುದ್ಧಿವಂತಿಕೆ ಪ್ರದರ್ಶಿಸಿದ್ದಾರೆ. ಸಂಘ ಪರಿವಾರದ ನಿಷ್ಠಾವಂತ ಭಜನ್‌ಲಾಲ್ ಶರ್ಮಾಗೆ ಬಯಸದೇ ಬಂದ ಭಾಗ್ಯವೆಂಬಂತೆ ಸಿಎಂ ಕುರ್ಚಿ ಒಲಿದುಬಂದಿದೆ.
ಯಾರು ಭಜನ್ ಲಾಲ್…?:
ರಾಜಸ್ಥಾನ ಸಿಎಂ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ, ಕೇಂದ್ರ ಸಚಿವರಾದ ಅರ್ಜುನ್ ಮೇಘವಾಲ್, ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಅಶ್ವಿನಿ ವೈಷ್ಣವ್ ನಡುವೆ ತೀವ್ರ ಪೈಪೋಟಿ ಇತ್ತು. ರಾಜ್ಯಾಡಳಿತ ಅನುಭವಿ ನಾಯಕನಿಗೇ ವಹಿಸಲಾಗುವುದೆಂಬ ಲೆಕ್ಕಾಚಾರವೂ ಬಲವಾಗಿತ್ತು. ಅದರೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಅಧ್ಯಕ್ಷ ಜೆ.ಪಿ ನಡ್ಡಾ ಲೆಕ್ಕಾಚಾರವೇ ಬೇರೆಯಾಗಿತ್ತು. ದಿಢೀರನೇ ಭಜನ್‌ಲಾಲ್ ಶರ್ಮಾ ಹೆಸರು ಮುನ್ನಲೆಗೆ ಬಂದಿದೆ. ಇತರ ಪಕ್ಷಗಳೇ ಅಲ್ಲ, ಸ್ವತಃ ಬಿಜೆಪಿಯ ಅನೇಕ ಅಗ್ರನಾಯಕರಿಗೂ ಹೊಸಮುಖಕ್ಕೆ ವರಿಷ್ಠರು ಮಣೆಹಾಕುವರೆಂಬ ಕಲ್ಪನೆಯೂ ಇರಲಿಲ್ಲ.
ಆದರೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ನಿಷ್ಠ ಮತ್ತು ಕಳೆದ ೨೦ ವರ್ಷಗಳಿಂದ ಬಿಜೆಪಿಯಲ್ಲಿ ಸದ್ದಿಲ್ಲದೆ ಸೇವೆ ಸಲ್ಲಿಸುತ್ತಿರುವ ರಾಜಕೀಯದಲ್ಲಿ ಶುದ್ಧಹಸ್ತನೆನಿಸಿರುವ ಭಜನ್‌ಲಾಲ್ ಶರ್ಮಾರನ್ನು ಸಿಎಂ ಪದವಿ ಹುಡುಕಿಕೊಂಡು ಬಂದಿದೆ. ಅದೂ ಮೊದಲ ಬಾರಿಯೇ ಶಾಸಕರಾದವರಿಗೆ ಸಿಎಂ ಕುರ್ಚಿ ಸಿಗುವುದೆಂದರೆ ನಿಜಕ್ಕೂ ಅಚ್ಚರಿಯ ಆಯ್ಕೆಯೇ ಸರಿ.
ರಾಜಸ್ಥಾನ ವಿ.ವಿ.ಯಲ್ಲಿ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಶರ್ಮಾ ಸಂಘದ ನಂಟಿನೊಂದಿಗೆ ಪ್ರಧಾನಿ ಮೋದಿಗೂ ಆಪ್ತರಾಗಿದ್ದಾರೆ. ಕಳೆದ ಹತ್ತು ವರ್ಷಗಳಿಂದ ರಾಜಸ್ಥಾನ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ವಿರುದ್ಧ ಒಂದು ಕ್ರಿಮಿನಲ್ ಮೊಕದ್ದಮೆಯಿದೆ. ೧.೪ ಕೋಟಿ ರೂ. ಆಸ್ತಿ ಹೊಂದಿದ್ದಾರೆ.ಈವರೆಗೆ ಅಶೋಕ್ ಪರ್ಣಮಿ, ಮದನ್‌ಲಾಲ್ ಸೈನಿ, ಸತೀಶ್ ಪೂನಿಯಾ ಮತ್ತು ಸಿ.ಪಿ ಜೋಷಿಯಂತಹ ನಾಲ್ವರು ರಾಜ್ಯ ಘಟಕದ ಅಧ್ಯಕ್ಷರ ಕೆಳಗೆ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಅವರದು. ಸರಳ-ಸಜ್ಜನಿಕೆ, ತಾಳ್ಮೆ, ಶಿಸ್ತಿನ ನಡವಳಿಕೆ, ಪಕ್ಷದ ಕಾರ್ಯನಿಷ್ಠೆ ಇವೆಲ್ಲವೂ ಮಿಳಿತವಾಗಿದ್ದರಿಂದಲೇ ಸದ್ಯದ ಪರಿಸ್ಥಿತಿಯಲ್ಲಿ ಶರ್ಮಾ ಸಿಎಂ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿ ಎಂಬುದು ಬಿಜೆಪಿ ವರಿಷ್ಠರ ಅಭಿಪ್ರಾಯವಾಗಿದೆ. ರಾಜಸ್ಥಾನದಲ್ಲಿ ಶೇ.೭ ರಷ್ಟಿರುವ ಬ್ರಾಹ್ಮಣ ಸಮುದಾಯಕ್ಕೆ ಇದರಿಂದ ಸೂಕ್ತ ಪ್ರಾತಿನಿಧ್ಯ ದೊರೆತಂತಾಗಿದೆ.
ಜೊತೆಗೆ ಯಾರಿಗೂ ಅಸಮಾಧಾನವಾಗದಂತೆ ಎಲ್ಲರಿಗೂ ಇಷ್ಟವಾಗುವ ಶರ್ಮಾರನ್ನು ಆಯ್ಕೆಮಾಡಿದ್ದು ವರಿಷ್ಠರ ಜಾಣ್ಮೆಗೆ ಎಲ್ಲರೂ ತಲೆದೂಗುತ್ತಿದ್ದಾರೆ.