ಮುರಿದು ಬಿದ್ದ ತೇರು: ಭಕ್ತರು ಪಾರು

ತೆರು
Advertisement

ಚಾಮರಾಜನಗರ: ಗುಡ್ಡದ ಮಠದ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವದಲ್ಲಿ ಇದ್ದಕ್ಕಿದ್ದಂತೆ ರಥದ ಮೇಲ್ಭಾಗ ಮುರಿದು ಬಿದ್ದ ಆಘಾತಕಾರಿ ಘಟನೆ ನಡೆದಿದೆ. ನೂರಾರು ಭಕ್ತರು ವಿಜೃಂಭಣೆಯಿಂದ ಪಾಲ್ಗೊಂಡಿದ್ದ ಚಾಮರಾಜನಗರ ತಾಲ್ಲೂಕಿನ ಹರನದಹಳ್ಳಿ ಹೋಬಳಿಯ ಚೆನ್ನಪ್ಪನಪುರದ ಅಮಚವಾಡಿ ಗುಡ್ಡದ ಮಠದ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವದಲ್ಲಿ ಸ್ವಾಮಿಯ ತೇರು ಮುರಿದು ಬಿದ್ದ ಪರಿಣಾಮ ಆತಂಕದ ವಾತಾವರಣ ಮನೆ ಮಾಡಿದೆ.
ಎರಡು ವರ್ಷಗಳ ಬಳಿಕ ನಡೆಯುತ್ತಿದ್ದ ಜಾತ್ರೆಯಲ್ಲಿ ದೇವಾಲಯದ ಅರ್ಧ ಸುತ್ತು ಪೂರ್ಣಗೊಳಿಸಿದ ಬಳಿಕ ಏಕಾಏಕಿ ರಥದ ಮೇಲ್ಭಾಗ ಮುರಿದು ಬಿದ್ದು ಚಕ್ರಗಳು ಪಲ್ಟಿಯಾಗಿದೆ. ಈ ಸಂದರ್ಭದಲ್ಲಿ 800ಕ್ಕೂ ಹೆಚ್ಚು ಭಕ್ತರು ರಥದ ಸುತ್ತ ಇದ್ದರು ಎಂದು ತಿಳಿದುಬಂದಿದ್ದು ಅದೃಷ್ಟವಶಾತ್ ಎಲ್ಲರೂ ಪಾರಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಗ್ರಾಮ ವೀರಭದ್ರೇಶ್ವರ ಸ್ವಾಮಿ ದೇಗುಲಕ್ಕೆ ಸುಮಾರು 600 ವರ್ಷಗಳ ಇತಿಹಾಸವಿದೆ. ಕೊವಿಡ್ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ರಥೋತ್ಸವ ನಡೆದಿರಲಿಲ್ಲ. ಹೀಗಾಗಿಯೇ ರಥೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ನಿಗದಿಯಂತೆ ಮಧ್ಯಾಹ್ನ 12 ಗಂಟೆಗೆ ರಥೋತ್ಸವ ಆರಂಭವಾಯಿತು. ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿದ ನಂತರ ದೇಗುಲ ಆವರಣದಲ್ಲಿ ಒಂದು ಸುತ್ತು ರಥ ಎಳೆಯುವುದು ವಾಡಿಕೆ. ಅರ್ಧದಷ್ಟು ದೂರಕ್ಕೆ ಸಂಚರಿಸಿದ ನಂತರ ರಥದ ಚಕ್ರವು ಅಚಾನಕ್ ಆಗಿ ಕಲ್ಲಿನ ಮೇಲೆ ಹತ್ತಿದಾಗ ಸಮತೋಲನ ಏರುಪೇರಾಯಿತು. ಚಕ್ರವು ಮುರಿದಿದಿದ್ದರಿಂದ ರಥವು ಉರುಳಿತು. ಅದೃಷ್ಟವಶಾತ್ ಭಕ್ತರು ಅಪಾಯದಿಂದ ಪಾರಾಗಿದ್ದಾರೆ.