ಮುಳುಗುತ್ತಿದ್ದ ಬೋಟ್ ಸಹಿತ ಏಳು ಮೀನುಗಾರರ ರಕ್ಷಣೆ

Advertisement

ಕಾರವಾರ: ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ವೇಳೆ ಒಡೆದು ಮುಳುಗುತ್ತಿದ್ದ ಬೋಟ್ ಹಾಗೂ ೭ ಮಂದಿ ಮೀನುಗಾರರನ್ನು ರಕ್ಷಣೆ ಮಾಡಿದ ಘಟನೆ ಕಾರವಾರ ಗೋವಾ ಗಡಿಭಾಗದ ಅರಬ್ಬಿ ಸಮುದ್ರದಲ್ಲಿ ಬುಧವಾರ ಮುಂಜಾನೆ ನಡೆದಿದೆ.
ಮೂರು ದಿನಗಳ ಹಿಂದೆ ಮಂಗಳೂರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಇಮ್ದಾರ್ ಮಾಲಿಕತ್ವದ ರಾಯಲ್ ಬ್ಲ್ಯೂ ಹೆಸರಿನ ಮೀನುಗಾರಿಕಾ ಬೋಟ್ ಗೋವಾದ ಬೈತೊಲ್ ಬಳಿ ಬುಧವಾರ ಮುಂಜಾನೆ ಗಾಳಿ ರಭಸಕ್ಕೆ ಒಡೆದಿತ್ತು. ಬೋಟ್ ಒಳಭಾಗಕ್ಕೆ ನೀರು ನುಸುಳಲಾರಂಭಿಸಿತ್ತು. ಬಳಿಕ ಮೀನುಗಾರರು ನೀರನ್ನು ಹೊರ ಹಾಕಿದ್ದರಾದರೂ ನೀರು ತುಂಬುತ್ತಿದ್ದ ಕಾರಣ ಮುಳುಗಡೆ ಭೀತಿಯಲ್ಲಿತ್ತು.
ತಕ್ಷಣ ಮೀನುಗಾರರು ಮಾಲಿಕರು, ಕೋಸ್ಟ್ ಗಾರ್ಡ್ ಹಾಗೂ ಕರಾವಳಿ ಕಾವಲು ಪಡೆಗೆ ಮಾಹಿತಿ ನೀಡಿದ್ದರು. ಏಷ್ಯನ್ ಬ್ಲ್ಯೂ, ಬ್ಲಾಕ್ ಬೆರಿ, ವೈಟ್ ಆರ್ಬಿಟ್, ಸಿ ಪ್ರಿನ್ಸ್, ಸಿ ಹಂಟರ್ ಹೆಸರಿನ ಬೋಟುಗಳ ಮೀನುಗಾರರು ನೆರವಿಗೆ ಧಾವಿಸಿದ್ದರು. ಕೊನೆಗೆ ಎರಡು ಬೋಟುಗಳಿಗೆ ಮುಳುಗಿದ್ದ ಬೋಟ್ ಕಟ್ಟಿಕೊಂಡು ಕೋಸ್ಟ್ ಗಾರ್ಡ್ ಹಾಗೂ ಕರಾವಳಿ ಕಾವಲು ಪಡೆ ನೆರವಿನೊಂದಿಗೆ ಕಾರವಾರ ಬಂದರಿಗೆ ಎಳೆದು ತರಲಾಗಿದೆ. ಬೋಟ್‌ನಲ್ಲಿದ್ದ ಎಲ್ಲ ಮೀನುಗಾರರು ಸುರಕ್ಷಿತವಾಗಿದ್ದು, ಬೋಟ್ ಹಾನಿಯಿಂದ ಲಕ್ಷಾಂತರ ರೂ ನಷ್ಟವಾಗಿದೆ ಎಂದು ರಕ್ಷಣೆಗೆ ತೆರಳಿದ ಬೋಟ್‌ನಲ್ಲಿದ್ದ ಗಣೇಶ ಎಂಬುವವರು ಮಾಹಿತಿ ನೀಡಿದರು.