ಮೈಷುಗರ್ 121 ಕೋಟಿ ನುಂಗಿದ ನಾಗರಾಜಪ್ಪ

Advertisement

ಮಂಡ್ಯ : 2008-09 ಮತ್ತು 2011-12ರ ಅವಧಿಯಲ್ಲಿ ಮೈಷುಗರ್ ಅಧ್ಯಕ್ಷರಾಗಿದ್ದ ಮಂಡ್ಯದ ಬಿಜೆಪಿ ನಾಯಕ ನಾಗರಾಜಪ್ಪ ತಮ್ಮ ಅವಧಿಯಲ್ಲಿ ಮೈಷುಗರ್ ಗೆ ₹ 121 ಕೋಟಿಗಳಷ್ಟು ನಷ್ಟವನ್ನು ಉಂಟು ಮಾಡಿರುವುದು ಉಪ ಲೋಕಾಯುಕ್ತರ ತನಿಖೆಯಿಂದ ಸಾಬೀತಾಗಿದೆ.
ಮೈಷುಗರ್ ಮಾಜಿ ಅಧ್ಯಕ್ಷ ನಾಗರಾಜಪ್ಪ
ಉಪ ಲೋಕಾಯುಕ್ತರು ನೀಡಿರುವ ವರದಿಯ ಪ್ರಕಾರ ನಾಗರಾಜಪ್ಪ ಮೇಲಿನ ಆರೋಪಗಳು ಸಾಬೀತಾಗಿರುವ ಹಿನ್ನೆಲೆಯಲ್ಲಿ ಈ ನಷ್ಟವನ್ನು ಮೈಸೂರು ಶುಗರ್ ಕಂಪನಿಗೆ ಮರುಪಾವತಿಸಿಕೊಳ್ಳುವ ಸಂಬಂಧ ನ್ಯಾಯಾಲಯದಲ್ಲಿ ಅವರ ವಿರುದ್ಧ ಸಿವಿಲ್ ದಾವೆಯನ್ನು ಹೂಡಲು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ  ಸರ್ಕಾರದ ಕಾರ್ಯದರ್ಶಿಗಳು ಅನುಮೋದನೆ ನೀಡಿದ್ದಾರೆ.
ನಾಗರಾಜಪ್ಪ ಅವರ ಆಸ್ತಿ ವಿವರದ ಮಾಹಿತಿ ಕೇಳಿದ ವ್ಯವಸ್ಥಾಪಕ ನಿರ್ದೇಶಕರು ನಾಗರಾಜಪ್ಪ ಅವರ ಹೆಸರಿನಲ್ಲಿ ಹಾಗೂ ಅವರ ಕುಟುಂಬದ ಸದಸ್ಯರೆಲ್ಲರ ಹೆಸರಿನಲ್ಲಿರುವ ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಸ್ಥಿರಾಸ್ತಿ ಮತ್ತು ಚರಾಸ್ತಿಗಳ ಮಾಹಿತಿಯನ್ನು ಕ್ರೋಡೀಕರಿಸಬೇಕಾಗಿರುವುದರಿಂದ ಅವರಿಗೆ ಸಂಬಂಧಿಸಿದ ಕೃಷಿ ಜಮೀನು, ಕೃಷಿಯೇತರ ಆಸ್ತಿ, ನಿವೇಶನ, ವಾಹನಗಳು, ಬ್ಯಾಂಕಿನಲ್ಲಿರುವ ನಗದು, ಠೇವಣಿಗಳು, ಷೇರು ಹಾಗೂ ಇತ್ಯಾದಿ ಮಾಹಿತಿಗಳನ್ನು ದಾಖಲೆಗಳೊಂದಿಗೆ ನೀಡುವಂತೆ ಮೈಷುಗರ್ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್.ರವಿಕುಮಾರ್ ಅವರು ಕಳೆದ ಡಿ.31ರಂದು ಮಂಡ್ಯ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.