ಜಗಳೂರು: ಇಡೀ ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಮೈಪರಚಿಕೊಂಡರೂ ಎಟಿಎಂನಿಂದ ಬಿಡಿಗಾಸು ಸಿಗದೆ ಕಳ್ಳರು ವಾಪಾಸ್ ತೆರಳಿದ ಘಟನೆ ಭಾನುವಾರ ರಾತ್ರಿ ನಡೆದಿದೆ.
ದಾವಣಗೆರೆ-ಚಳ್ಳಕೆರೆ ರಸ್ತೆಯಲ್ಲಿ ಖಲಂದರ್ ಕಿರಾಣಿ ಅಂಗಡಿ ಪಕ್ಕದಲ್ಲಿರುವ ಖಾಸಗಿ ಬ್ಯಾಂಕ್ ಎಟಿಎಂ ಒಡೆದು ಹಣ ದೋಚಲು ಪ್ರಯತ್ನಿಸಿದ್ದು, ಆದರೆ ಆಸೆಯಿಂದ ಬಂದ ಕಳ್ಳರಿಗೆ ನಯಾಪೈಸೆ ಸಿಗದೆ ಬೆಳಗಾಗುವುದರೊಳಗೆ ಅಲ್ಲಿಂದ ಪರಾರಿಯಾಗಿದ್ದಾರೆ.
ಲಕ್ಷಗಟ್ಟಲೇ ಹಣ ದೋಚಬೇಕೆಂಬ ಆಸೆಯೊಂದಿಗೆ ಭಾನುವಾರ ರಾತ್ರಿ ಎಟಿಎಂಗೆ ಕನ್ನ ಹಾಕಿದ ಕಳ್ಳರು ಇಡೀ ರಾತ್ರಿ ಎಟಿಎಂ ಮಿಷನ್ ಒಡೆದಿದ್ದಾರೆ. ಆದರೆ ಎಟಿಎಂ ಸಾಫ್ಟ್ವೇರ್ ಹಾಳು ಮಾಡಿದ್ದಾರೆ ಹೊರತು, ಎಟಿಎಂನಿಂದ ಹಣ ತೆಗೆಯಲು ಅವರಿಂದ ಸಾಧ್ಯವಾಗಿಲ್ಲ. ಅಲ್ಲದೇ ಎಟಿಎಂ ಮಿಷನ್ ಒಡೆದು ಚೆಲ್ಲಾಪಿಲ್ಲಿ ಮಾಡಿದ್ದು, ಅವರು ಎಷ್ಟೇ ಪ್ರಯತ್ನ ಪಟ್ಟರೂ ಎಟಿಎಂನಿಂದ ಹಣ ದೋಚಲು ಆಗಿಲ್ಲ. ಹೀಗಾಗಿ ಬೆಳಗಾಗುವವರೆಗೆ ಹರಸಾಹಸ ಮಾಡಿ, ಕೊನೆಗೆ ವಿಧಿಯಿಲ್ಲದೆ ನಿರಾಸೆಯಿಂದ ವಾಪಾಸ್ ಆಗಿದ್ದಾರೆ. ಈ ಘಟನೆ ಸೋಮವಾರ ಬೆಳಗ್ಗೆ ಸಾರ್ವಜನಿಕರಿಂದ ಪೊಲೀಸರಿಗೆ ಮಾಹಿತಿ ತಿಳಿದು ಬಂದಿದೆ.
ಸಿಪಿಐ ಸತ್ಯನಾರಾಯಣಸ್ವಾಮಿ, ಪಿಎಸ್‌ಐ ಮಹೇಶ್ ಹೊಸಪೇಟೆ ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಿಸಿಟಿವಿ ಪರಿಶೀಲಿಸಿದರು. ಶ್ವ್ವಾನದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಈ ಕುರಿತು ಜಗಳೂರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.