ಮೋದಿಯಲ್ಲ, ಬ್ರಹ್ಮ ಬಂದು ಹೇಳಿದರೂ ಸ್ವತಂತ್ರ ಸ್ಪರ್ಧೆ

ಈಶ್ವರಪ್ಪ
Advertisement

ಶಿವಮೊಗ್ಗ: ಕ್ಷೇತ್ರದ ಹಾಲಿ ಸಂಸದರ ಬಗ್ಗೆ ಜನರಲ್ಲಿ ಆಕ್ರೋಶವಿದೆ. ನನಗಾದ ಅನ್ಯಾಯವನ್ನು ನೋಡಿ ಹೋದೆಡೆಯೆಲ್ಲಾ ಮತದಾರರು ನನಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿರುವ ಕೆ.ಎಸ್. ಈಶ್ವರಪ್ಪ ಹೇಳಿದರು.
ಗುರುವಾರ ಮಲ್ಲೇಶ್ವರ ನಗರದ ತಮ್ಮ ಮನೆಯ ಆವರಣದಲ್ಲಿ ನಡೆದ ಚುನಾವಣಾ ಕಚೇರಿ ಉದ್ಘಾಟನಾ ಸಮಾರಂಭದ ಬಳಿಕ ಮಾತನಾಡಿದ ಅವರು, ಒಂದು ಕುಟುಂಬದ ಕೈಯಲ್ಲಿ ರಾಜ್ಯ ಬಿಜೆಪಿ ಇರುವುದು ಜನರಿಗೂ ಇಷ್ಟವಿಲ್ಲ. ಹಿಂದುತ್ವದ ಪರವಾಗಿ ಹೋರಾಟ ಮಾಡಿದ ಎಲ್ಲರಿಗೂ ಅನ್ಯಾಯವಾಗಿದೆ. ಅನೇಕ ಕಾರ್ಯಕರ್ತರು ತಮಗಾದ ನೋವನ್ನು ನನ್ನ ಬಳಿ ತೋಡಿಕೊಂಡಿದ್ದಾರೆ. ನನ್ನ ಸ್ಪರ್ಧೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ನಿಮ್ಮ ಪಕ್ಷ ನಿಷ್ಠೆ, ಹಿಂದುತ್ವದ ಹೋರಾಟ ಬೆಂಬಲಿಸಿ ನಿಮ್ಮ ಹಿಂದೆ ನಾವಿದ್ದೇವೆ ಎಂದು ನಮ್ಮ ಕಾರ್ಯಕರ್ತರು ಹೇಳಿದ್ದಾರೆ. ಅಲ್ಲದೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಬಹಳಷ್ಟು ಕಾರ್ಯಕರ್ತರು ಬೆಂಬಲ ಸೂಚಿಸಿದ್ದಾರೆ ಎಂದರು.
ಈ ಚುನಾವಣೆಯಲ್ಲಿ ನನ್ನ ಗೆಲುವು ನಿಶ್ಚಿತವಾಗಿದ್ದು, ಗೆಲುವಿನ ನಂತರ ಮೋದಿ ಮತ್ತೆ ಪ್ರಧಾನಿಯಾಗಲು ಕ್ಷೇತ್ರದ ಮತದಾರರ ಪರವಾಗಿ ಕೈ ಎತ್ತುತ್ತೇನೆ. ಆದರೆ, ಮೋದಿ ಹೇಳಿದ ಕೂಡಲೇ ನಾಮಪತ್ರ ವಾಪಸ್ ಪಡೆಯಲಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಮೋದಿಯಲ್ಲ, ಬ್ರಹ್ಮ ಬಂದು ಹೇಳಿದರೂ ನಾನು ಚುನಾವಣೆಗೆ ನಿಲ್ಲುವುದು ಶತಃಸ್ಸಿದ್ಧ ಎಂದರು.