ಬೆಳಗಾವಿ(ಯರಗಟ್ಟಿ): ಮೋದಿ ಬೆಳಗಾವಿಗೆ ಬಂದು ಭಯಾನಕ ಹಸೀ ಸುಳ್ಳು ಹೇಳಿ ಹೋಗಿದ್ದಾರೆ. ಪ್ರತೀ ಬಾರಿ ರಾಜ್ಯಕ್ಕೆ ಬರೋದು, ಸುಳ್ಳು ಹೇಳಿ ಹೋಗೋದೇ ಆಯ್ತು. ನಾವು ಶಿವಾಜಿ ಮತ್ತು ಕಿತ್ತೂರು ರಾಣಿ ಚನ್ನಮ್ಮ ಅವರಿಗೆ ಅವಮಾನಿಸಿದ್ದೀವಿ ಎಂದು ಹಸಿ ಹಸಿ ಸುಳ್ಳು ಹೇಳಿ ಹೋಗಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಮೃಣಾಳ್ ಹೆಬ್ಬಾಳ್ಕರ್ ಗೆಲುವಿನ ಸಂದೇಶ ನೀಡಲು ಸಂಘಟಿಸಿದ್ದ ಪ್ರಜಾಧ್ವನಿ-2 ಜನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ರಾಣಿ ಚನ್ನಮ್ಮ ಜಯಂತಿ ಆರಂಭಿಸಿದ್ದು ನಮ್ಮ ಸರ್ಕಾರ. ಶಿವಾಜಿ ಮಹಾರಾಜರನ್ನು ಅತ್ಯಂತ ಗೌರವದಿಂದ ಕಾಣುವವರು ನಾವು. ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರ ಮಾಡಿದವರು ನಾವು. ಹೀಗಾಗಿ ಈ ಹಸಿ ಸುಳ್ಳುಗಾರ ಮೋದಿ ಮಾತನ್ನು ನಂಬಬೇಡಿ. ನಂಬಿ ಮೋಸ ಹೋಗಬೇಡಿ. ಹತ್ತತ್ತು ವರ್ಷ ಮೋದಿ ಬರೀ ಸುಳ್ಳು ಹೇಳಿಕೊಂಡು ತಿರುಗಿದ್ದು ಬಿಟ್ಟರೆ ಒಂದೇ ಒಂದು ಭರವಸೆಯನ್ನೂ ಈಡೇರಿಸಲಿಲ್ಲ ಎಂದರು.
ಬಿಜೆಪಿಯವರು ನಮ್ಮ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳನ್ನು ಅವಮಾನಿಸಿದರು. ಈಗ ಚುನಾವಣೆ ಬಳಿಕ ಗ್ಯಾರಂಟಿಗಳು ನಿಂತೋಗತ್ತವೆ ಎಂದು ಸುಳ್ಳು ಹೇಳುತ್ತಿದ್ದಾರೆ. ಯಾವುದೇ ಕಾರಣಕ್ಕೂ ಐದು ವರ್ಷ ಗ್ಯಾರಂಟಿಗಳು ನಿಲ್ಲುವುದಿಲ್ಲ. ಮುಂದಿನ ವರ್ಷಕ್ಕೆ ಬೇಕಾಗುವ ಹಣವನ್ನು ನಾನು ಆಗಲೇ ತೆಗೆದಿಟ್ಟಿದ್ದೀವಿ ಎಂದರು.