ಮೋದಿ ರೋಡ್ ಶೋ-ಎಸ್‌ಪಿಜಿಯಿಂದ ಪರಿಶೀಲನೆ

Advertisement

ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಏ. ೧೪ರಂದು ಮಂಗಳೂರಿನಲ್ಲಿ ರೋಡ್ ಶೋ ನಡೆಸಲಿದ್ದು, ಎಸ್‌ಪಿಜಿ ಭದ್ರತಾ ವಿಭಾಗದ ಅಧಿಕಾರಿಗಳು ನಗರಕ್ಕೆ ಆಗಮಿಸಿ ಪರಿಶೀಲನೆ ನಡೆಸಲಿದ್ದಾರೆ.
ಪ್ರಧಾನಿಯವರ ಭದ್ರತೆಯ ಹೊಣೆ ಹೊತ್ತಿರುವ ಎಸ್‌ಪಿಜಿ ತಂಡದ ಅಧಿಕಾರಿಗಳು ರೋಡ್ ಶೋ ನಡೆಯುವ ರಸ್ತೆಯ ಉದ್ದಕ್ಕೂ ಕಾಲ್ನಡಿಗೆಯಲ್ಲಿ ಸಾಗಿ ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ಮೋದಿ ರೋಡ್ ಶೋ ನಡೆಸುವ ರೂಟ್ ಮ್ಯಾಪ್ ಸಿದ್ಧವಾಗಿದ್ದು, ನಗರದ (ಲೇಡಿಹಿಲ್) ನಾರಾಯಣ ಗುರು ವೃತ್ತ, ಲಾಲ್‌ಬಾಗ್, ಪಿವಿಎಸ್ ವೃತ್ತದ ಮೂಲಕ ನವಭಾರತ್ ಸರ್ಕಲ್ ಬಳಿಕ ಕೆಎಸ್ ರಾವ್ ರಸ್ತೆಯಲ್ಲಿ ಅಧಿಕಾರಿಗಳು ಸಂಚರಿಸಿ ಪರಿಶೀಲನೆ ನಡೆಸಿದ್ದಾರೆ.
ಎಸ್‌ಪಿಜಿ ಹಾಗೂ ಆಂತರಿಕ ಭದ್ರತಾ ವಿಭಾಗದ ಗುಪ್ತಚರ ಪಡೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಮಂಗಳೂರು ಪೊಲೀಸ್ ಕಮಿಷನರೇಟ್ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಬಿಜೆಪಿ ಜಿಲ್ಲಾ ನಾಯಕರು ಜೊತೆಗಿದ್ದು ಎಸ್‌ಪಿಜಿ ಕೇಳಿದ ಪ್ರಶ್ನೆಗಳಿಗೆ ಮಾಹಿತಿ ನೀಡಿದ್ದಾರೆ. ಏ. ೧೪ರಂದು ಮೋದಿಯವರು ಸಂಜೆ ೬ಗಂಟೆ ವೇಳೆಗೆ ನಾರಾಯಣ ಗುರು ವೃತ್ತಕ್ಕೆ ಆಗಮಿಸಿ, ಗುರುವರ್ಯರ ಪ್ರತಿಮೆಗೆ ಮಾಲಾರ್ಪಣೆಗೈದು ರೋಡ್ ಶೋ ಆರಂಭಿಸಲಿದ್ದಾರೆ. ಲಾಲ್‌ಬಾಗ್, ಪಿವಿಎಸ್ ವೃತ್ತ, ನವಭಾರತ ಸರ್ಕಲ್, ಕೆಎಸ್‌ ರಾವ್ ರಸ್ತೆಯ ಮೂಲಕ ಹಂಪನಕಟ್ಟೆ ವೃತ್ತದ ವರೆಗೆ ೨.೫ ಕಿಮೀ ಉದ್ದಕ್ಕೆ ರೋಡ್ ಶೋ ನಡೆಯಲಿದೆ.
ರಸ್ತೆಯ ಇಕ್ಕೆಲಗಳಲ್ಲಿಯೂ ಭಾರೀ ಸಂಖ್ಯೆಯಲ್ಲಿ ಜನರು ಸೇರಲಿದ್ದು, ಬಿಜೆಪಿಯಿಂದ ಮಂಗಳೂರು ಉತ್ತರ, ದಕ್ಷಿಣ, ಉಳ್ಳಾಲ ಮತ್ತು ಮೂಡುಬಿದ್ರೆ ಮಂಡಲ ವ್ಯಾಪ್ತಿಯಿಂದ ಕಾರ್ಯಕರ್ತರು, ಅಭಿಮಾನಿಗಳನ್ನು ಕರೆತರಲು ಯೋಜನೆ ರೂಪಿಸಲಾಗಿದೆ. ಇದಲ್ಲದೆ, ವಿಶಿಷ್ಟ ರೀತಿಯಲ್ಲಿ ಮೋದಿಯವರನ್ನು ಸ್ವಾಗತಿಸಲು ಲೋಕಸಭಾ ಚುನಾವಣಾ ಸಮಿತಿ ಸಿದ್ಧತೆ ನಡೆಸಿದೆ.