ಮೋಹವನ್ನು ಗೆದ್ದರೆ ಎಂದಿಗೂ ಶೋಕವಿಲ್ಲ

Advertisement

ಎಲ್ಲಾ ಜೀವಗಳಿಗೂ ಶೋಕ ಮತ್ತು ಮೋಹ ಎಂಬ ಎರಡು ಇವೆ. ಶ್ರೀ ಶಂಕರ ಭಗವತ್ಪಾದರು ಗೀತಾ ಭಾಷ್ಯದ ಆರಂಭದಲ್ಲಿ ಇದನ್ನು ಹೇಳಿದ್ದಾರೆ. ಇವುಗಳಿಗೆ ಅಜ್ಞಾನವೇ ಮೂಲ ಬೀಜ. ಅಜ್ಞಾನವನ್ನು ನಿವಾರಿಸುವುದಕ್ಕೋಸ್ಕರವೇ ಎಲ್ಲ ಪ್ರಯತ್ನಗಳು, ಅಂದರೆ ಜ್ಞಾನಯೋಗ, ಕರ್ಮ-ಭಕ್ತಿ-ರಾಜಯೋಗಗಳು.
ನಮ್ಮ ಜೀವನದಲ್ಲಿ ಈ ಶೋಕ ಮೋಹಗಳು ಎಲ್ಲಿವೆ ? ವೃದ್ಧಾಪ್ಯ ಪೂರ್ತಿ ಶೋಕಮಯ. ವೃದ್ಧಾಪ್ಯದಲ್ಲಿ ನಗು ಪ್ರಯತ್ನಪಟ್ಟು ಬರಬೇಕು. ಕೆಲವು ಅಧ್ಯಾತ್ಮ ಸಾಧಕರನ್ನು ಹೊರತು ಪಡಿಸಿದರೆ ಉಳಿದವರೆಲ್ಲರೂ ವೃದ್ಧಾಪ್ಯದಲ್ಲಿ ಶೋಕಿಸುವವರೇ ಆಗಿದ್ದಾರೆ. ಶರೀರವು ಕ್ರಮೇಣ ದುರ್ಬಲವಾಗುತ್ತಾ ಹೋಗುವುದರಿಂದ ಅದೇ ವೇಳೆಗೆ ರೋಗಗಳು ಮುತ್ತಿಕೊಳ್ಳುವುದರಿಂದ ಮತ್ತು ಮರಣದ ಭಯದಿಂದ ವೃದ್ಧನ ಮನಸ್ಸು ಸಾಮಾನ್ಯವಾಗಿ ಯಾವಾಗಲೂ ಶೋಕಪಡುತ್ತಲೇ ಇರುತ್ತದೆ. ಭಕ್ತಿಯ ಸಾಧನೆಯಲ್ಲಿ ಮುಂದುವರಿದ ಅಥವಾ ಬೇರೆ ಬೇರೆ ಅಧ್ಯಾತ್ಮ ಸಾಧನಪಥದಲ್ಲಿ ಮುಂದುವರಿದವರು ಹೀಗೆ ಶೋಕಿಸುವುದಿಲ್ಲ. ತಾನು ವಸ್ತುತಃ ಶರೀರಕ್ಕಿಂತ ಬೇರೆ, ಶರೀರದ ಒಳಗೆ ಇದ್ದವನು, ಶರೀರಕ್ಕೆ ಮರಣವೇ ಹೊರತು ತನಗಲ್ಲ ಎಂಬ ಅರಿವು ಅವರಿಗೆ ಉಂಟಾಗಿರುವುದೇ ಶೋಕಿಸದಿರುವುದಕ್ಕೆ ಕಾರಣ. ಇಂಥವರ ಸಂಖ್ಯೆ ಅತ್ಯಂತ ಕಡಿಮೆ. ಹೆಚ್ಚಿನವರೆಲ್ಲ ಶೋಕಕ್ಕೆ ಒಳಗಾಗುವವರೇ ಆಗಿದ್ದಾರೆ. ಶೋಕಕ್ಕೆ ಒಳಗಾಗುವಿಕೆ ವೃದ್ಧಾಪ್ಯದ ಲಕ್ಷಣಗಳಲ್ಲಿ ಒಂದು. ವೃದ್ಧಾಪ್ಯದ ಲಕ್ಷಣಗಳಲ್ಲಿ ಪಟ್ಟಿ ಮಾಡಿ ಹೇಳುವ ಸುಭಾಷಿತ ಹೀಗಿದೆ – “ರೂಪಸ್ಯ ಹಂತ್ರಿ ವ್ಯಸನಂ ಬಲಸ್ಯ ಶೋಕಸ್ಯ
ಯೋನಿಃ ನಿಧನಂ ರತೀನಾಮ್ | ನಾಶಃ ಸ್ಮೃತೀನಾಂ ರಿಪುರಿಂದ್ರಿಯಾಣಾಂ ಏಷಾ ಜರಾನಾಮ ಯ
ಏಷ ಭಗ್ನಃ ||”
ಮೋಹವು ಬಾಲ್ಯದಿಂದ ಆರಂಭಿಸಿ ಸುಮಾರು ವೃದ್ಧಾಪ್ಯವು ಕಾಲಿಡುವವರೆಗೂ ಇದ್ದಿರುತ್ತದೆ. ನಾನು ಸುಂದರವಾಗಿದ್ದೆನೆ, ಯೌವನದ ನನ್ನ ದೇಹಸ್ಥಿತಿ ಶಾಶ್ವತ, ನನ್ನ ಇಂದ್ರಿಯಗಳು ಯಾವಾಗಲೂ ಸಮರ್ಥವಾಗಿಯೇ ಇರುತ್ತದೆ, ಎಲ್ಲರೂ ಸತ್ತು ಹೋದರೂ ನಾನು ಸಾಯುವುದಿಲ್ಲ – ಈ ರೀತಿಯ ಭಾವನೆಗಳೇ ಮೋಹ. ಇವುಗಳು ಬಾಲ್ಯದಿಂದಲೇ ಆರಂಭಿಸಿ ವೃದ್ಧಾಪ್ಯ ಪ್ರವೇಶವಾಗುವವರೆಗೂ, ವೃದ್ಧಾಪ್ಯ ಪ್ರವೇಶವಾದ ನಂತರವೂ ಇವುಗಳ ಸಂಸ್ಕಾರಗಳು ಇರುತ್ತವೆ. ಮೋಹವು ಜೀವನವನ್ನು ಪರಮಾರ್ಥದೆಡೆಗೆ ಹೋಗಕೊಡದೇ ಐಹಿಕ ಬದುಕಿಗೆ ಕಟ್ಟಿ ಹಾಕುತ್ತದೆ. ಐಹಿಕ ಬದುಕು ಶಾಶ್ವತವಾಗಿದ್ದರೆ ಪರವಾಗಿರುತ್ತಿರಲಿಲ್ಲ. ಆದರೆ ಇದು ಅಶಾಶ್ವತ. ಅಲ್ಲದೇ ಹೆಚ್ಚು ಹೆಚ್ಚು ಮೋಹಕ್ಕೆ ಪೂರ್ವ ವಯಸ್ಸಿನಲ್ಲಿ ಒಳಗಾದವರು ಉತ್ತರ ವಯಸ್ಸಿನಲ್ಲಿ ಹೆಚ್ಚು ಶೋಕಕ್ಕೆ ಒಳಗಾಗುತ್ತಾರೆ. ಪೂರ್ವ ವಯಸ್ಸಿನಲ್ಲಿ ಮೋಹಗಳನ್ನು ನಿತ್ಯಂತ್ರಿಸಿಕೊಂಡವರು ಉತ್ತರ ವಯಸ್ಸಿನಲ್ಲಿ ಕಡಿಮೆ ಶೋಕವನ್ನು ಕಾಣುತ್ತಾರೆ. ಮೋಹವನ್ನು ಗೆದ್ದವರು ಶೋಕಕ್ಕೆ ಸ್ವಲ್ಪವೂ ಒಳಗಾಗುವುವದಿಲ್ಲ. ಇದು ಜೀವನದ ರಹಸ್ಯ.