ಯಾವ ಕಾರಣಕ್ಕೂ ಬಿಜೆಪಿ ಲಿಂಗಾಯತರನ್ನು ಸಿಎಂ ಮಾಡುವುದಿಲ್ಲ

ಕುಮಾರಸ್ವಾಮಿ
Advertisement

ಬಾಗಲಕೋಟೆ: ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿದರೆ ಆ ಪಕ್ಷ ಯಾವ ಕಾರಣಕ್ಕೂ ಲಿಂಗಾಯತರನ್ನು ಮುಖ್ಯಮಂತ್ರಿಯನ್ನಾಗಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.
ಬಾದಾಮಿ ಕ್ಷೇತ್ರದ ಅಭ್ಯರ್ಥಿ ಹಣಮಂತ ಮಾವಿನಮರದ ಪರ ಪ್ರಚಾರಕ್ಕೆ ಆಗಮಿಸಿರುವ ಅವರು ಚಿಕ್ಕಮುಚ್ಚಳಗುಡ್ಡ ಹೆಲಿಪ್ಯಾಡ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಬ್ರಾಹ್ಮಣ ಸಿಎಂ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು. ನಾನು ಇದನ್ನು ಮೊದಲೇ ಊಹೇ ಮಾಡಿದ್ದೇ. ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆ ಗಮನಿಸಿದರೆ ಬಿಜೆಪಿ ಯಾವ ಕಾರಣಕ್ಕೂ ಲಿಂಗಾಯತರನ್ನು ಮುಖ್ಯಮಂತ್ರಿಯನ್ನಾಗಿಸುವುದಿಲ್ಲ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧವೂ ವಾಗ್ದಾಳಿ ನಡೆಸಿದ ಎಚ್‌ಡಿಕೆ, ಜನರಿಗೋಸ್ಕರ ತಾವು ಸರ್ಪವಾಗಲು ಸಿದ್ದ ಎಂದು ಮೋದಿ ಹೇಳಿದ್ದಾರೆ. ಆದರೆ ಸರ್ಪ ಎಂದಿಗಿದ್ದರೂ ಅಪಾಯಕಾರಿಯೇ. ಹೀಗಾಗಿ ಮೋದಿ ಕೂಡ ಅಪಾಯಕಾರಿ ಅನಿಸಬಹುದು. ವಿಷ ಸರ್ಪ, ವಿಷ ಕನ್ಯೆ ಚರ್ಚೆಗಳು ಅನಗತ್ಯ. ಅಕಾಲಿಕ ಮಳೆಯಿಂದ ರೈತರ ಬೆಳೆ ನಷ್ಟವಾಗಿದೆ. ಆ ಬಗ್ಗೆ ಯಾರೂ ಚರ್ಚೆ ಮಾಡುತ್ತಿಲ್ಲ ಎಂದು ದೂರಿದರು. ಅದೆಂಥದ್ದೋ ಪರಿವಾರ ಅಂತೆ, ಎಟಿಎಂ ಅಂತೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ಮುಂದವರಿಸಿದ ಅವರು ಬಿಜೆಪಿಯವರು ಎಲ್ಲವನ್ನು ಲೂಟಿ ಹೊಡೆದುಕೊಂಡು ಕೂತಿದ್ದಾರೆ. ಮೋದಿಯದ್ದು ಎಲ್ಲವೂ ಸಂತೆ ಭಾಷಣ ಅವರು ಹೇಳಿದನ್ನು ಮಾಡುವುದಿಲ್ಲ ಎಂದರು. ಜೆಡಿಎಸ್‌ಯನ್ನು ಕಾಂಗ್ರೆಸ್, ಬಿಜೆಪಿ ಬಿಟೀಂ ಎಂದರು ಎರಡು ಪಕ್ಷದ ನಾಯಕರ ಟೀಕೆಗೆ ಉತ್ತರಿಸಿದ ಅವರು, ನಮ್ಮದು ಜನರ ಟೀಂ ಎಂದಷ್ಟೇ ಹೇಳುತ್ತೇನೆ. ನಾವು ಕನ್ನಡಿಗರ ತಂಡದವರಾಗಿದ್ದೇವೆ ಎಂದರು. ವರುಣಾ ಕ್ಷೇತ್ರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಸೋಲಿಸುವ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, ಇನ್ನೊಬ್ಬರನ್ನು ಸೋಲಿಸಬೇಕೆಂಬ ಯೋಚನೆ ನಮ್ಮದಲ್ಲ ನಮ್ಮ ಅಭ್ಯರ್ಥಿ ಗೆಲ್ಲಬೇಕೆಂಬ ಗುರಿಯಿದೆ ಎಂದರು.