ಯುಪಿಎಸ್‌ಸಿ ಶ್ರೇಣಿಯಲ್ಲಿ ಕನ್ನಡ ಕುಡಿಗಳ ಕಲರವ

Advertisement

ಹಿಂದೆ ಒಂದು ಕಾಲವಿತ್ತು. ಯುಪಿಎಸ್‌ಸಿ ಪರೀಕ್ಷೆ ನಮಗಲ್ಲ ಎಂದು ಬಹುತೇಕ ಮಕ್ಕಳು ಅದಕ್ಕೆ ಕೈಹಾಕಲು ಹಿಂಜರಿಯುತ್ತಿದ್ದರು. ಕರ್ನಾಟಕದಿಂದ ಈ ಪರೀಕ್ಷೆ ತೆಗೆದುಕೊಳ್ಳುವವರೇ ಬೆರಳಿಣಿಕೆ ಇತ್ತು. ಈಗ ಎಂಜಿನಿಯರಿಂಗ್ ಮತ್ತು ಮೆಡಿಕಲ್ ರೀತಿ ಐಎಎಸ್ ಪರೀಕ್ಷೆ ತೆಗೆದುಕೊಳ್ಳುವ ಯುವಕ- ಯುವತಿಯರ ಸಂಖ್ಯೆ ಅಧಿಕಗೊಳ್ಳುತ್ತಿದೆ. ಕನ್ನಡ ಕುಡಿಗಳು ಈಗ ನಾಮುಂದು ತಾಮುಂದು ಎಂದು ಪರೀಕ್ಷೆಯಲ್ಲಿ ಭಾಗವಹಿಸುತ್ತಿರುವುದನ್ನು ನೋಡಿದರೆ ಮುಂದಿನ ಜನಾಂಗಕ್ಕೆ ಉತ್ತಮ ಭವಿಷ್ಯ ಇದೆ ಎಂಬುದು ಸ್ಪಷ್ಟ. ಹಿಂದೆ ಯುಪಿಎಸ್‌ಸಿ ಪರೀಕ್ಷೆ ಬೆಂಗಳೂರು ಮತ್ತಿತರ ನಗರಗಳಿಗೆ ಮಾತ್ರ ಸೀಮಿತವಾಗಿತ್ತು. ಈಗ ಗ್ರಾಮೀಣ ಪ್ರದೇಶದಿಂದಲೂ ಪ್ರತಿಭಾವಂತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮುಂಚೂಣಿಯಲ್ಲಿದ್ದಾರೆ. ಇಂಥ ಯುವ ಪಡೆ ರಾಷ್ಟ್ರೀಯ ಆಡಳಿತ ಸೇವೆಗೆ ಸೇರಲು ಮುಂದಾದಲ್ಲಿ ಖಂಡಿತವಾಗಿಯೂ ಬದಲಾವಣೆ ಬರುವುದು ಖಚಿತ. ಅದರಲ್ಲೂ ಕನ್ನಡ ಮಾಧ್ಯಮದಲ್ಲಿ ಓದಿದವರು ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ ಮುಂದಿನ ಸಾಲಿನಲ್ಲಿ ಬರುತ್ತಿರುವುದು ಶುಭ ಸೂಚನೆ. ಬ್ರಿಟಿಷರ ಕಾಲದಲ್ಲಿ ಐಸಿಎಸ್ ಪಾಸಾದವರಿಗೆ ಎಲ್ಲ ರೀತಿಯ ಸವಲತ್ತು ಲಭಿಸುತ್ತಿತ್ತು.ಭಾರತೀಯರೂ ಐಸಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸೇವೆ ಸಲ್ಲಿಸಿದ ಉದಾಹರಣೆಗಳಿವೆ. ಸ್ವಾತಂತ್ರ್ಯ ಬಂದ ಮೇಲೆ ಐಎಎಸ್ ಪರೀಕ್ಷೆ ಯುವ ಜನಾಂಗಕ್ಕೆ ಅಂತಿಮ ಗುರಿಯಾಗಿತ್ತು. ಈ ಪರೀಕ್ಷೆಯಲ್ಲಿ ಪಾಸಾಗುವುದು ಕಷ್ಟ ಎಂಬ ಭಾವನೆ ಇತ್ತು. ಈಗ ಹಳ್ಳಿಗಳಿಂದಲೂ ಹಾಗೂ ಬಡತನದ ಕುಟುಂಬದಿಂದ ಬಂದವರೂ ಉತ್ತೀರ್ಣರಾಗುತ್ತಿದ್ದಾರೆ. ಇದರಿಂದ ಸಮಾಜದಲ್ಲಿ ಅಸಮಾನತೆ ನಿವಾರಣೆಗೆ ಆಶಾಕಿರಣ ಮೂಡಿದೆ. ತಳ ಸಮುದಾಯದಿಂದ ಬಂದ ಯುವಪಡೆ ಅಧಿಕಾರ ದೊರಕಿದಾಗ ಬಡತನ ನಿವಾರಣೆಗೆ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಾರೆ ಎಂಬ ಭಾವನೆ ಮೂಡುವುದು ಸಹಜ. ಗ್ರಾಮೀಣ ಭಾಗದಿಂದ ಹೆಚ್ಚು ಪ್ರತಿಭೆ ಕಂಡು ಬರಲು ಶಿಕ್ಷಣ ರಂಗದಲ್ಲಾಗಿರುವ ಪ್ರಗತಿ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ಕಂಪ್ಯೂಟರೀಕರಣ ಮತ್ತು ಇಂಟರ್‌ನೆಟ್ ಸಂಪರ್ಕ ಗ್ರಾಮೀಣ ಯುವಕರಿಗೆ ಮತ್ತು ಯುವತಿಯರಿಗೆ ಜ್ಞಾನದ ಲೋಕವನ್ನೇ ತೆರೆದುಕೊಟ್ಟಿದೆ. ಬಹುತೇಕ ಮಕ್ಕಳು ಏಕಲವ್ಯರಾದರು. ಹೀಗಾಗಿ ಜ್ಞಾನ ಯಾರ ಸ್ವತ್ತೂ ಅಲ್ಲ ಎಂದು ತೋರಿಸಿಕೊಡಲು ಸಾಧ್ಯವಾಯಿತು. ದೇಶಾದ್ಯಂತ ೯೩೩ ಜನ ಉತ್ತೀರ್ಣರಾಗಿದ್ದು, ಅದರಲ್ಲಿ ೨೫ ಜನ ಕರ್ನಾಟಕದವರು. ಮಹಿಳೆಯರ ಸಂಖ್ಯೆಯೂ ಸಾಕಷ್ಟಿದೆ. ಈಗ ಪರೀಕ್ಷೆಯಲ್ಲಿ ಉತ್ತೀರ್ಣರಾದವರಲ್ಲಿ ಹುಬ್ಬಳ್ಳಿಯ ಸಮೀಪ ಇರುವ ಅಣ್ಣಿಗೇರಿಯ ಬಾಲಕ ಸಿದ್ದಲಿಂಗಪ್ಪ ಪೂಜಾರ್ ಕೂಡ ಒಬ್ಬರು. ಇವರ ತಂದೆ ಕೆಎಸ್‌ಆರ್‌ಟಿಸಿ ಚಾಲಕರು. ಅದೇರೀತಿ ಮೈಸೂರಿನ ಬೆಳವಾಡಿ ಗ್ರಾಮಕ್ಕೆ ಸೇರಿದ ಜೆ. ಭಾನುಪ್ರಕಾಶ್ ಅಂಗನವಾಡಿ ಶಿಕ್ಷಕರ ಮಗ. ಎಷ್ಟೋ ಜನ ಎಂಜಿನಿಯರಿಂಗ್ ಪದವಿ ಪಡೆದು ಐಎಎಸ್ ಉತ್ತೀರ್ಣರಾಗಿದ್ದಾರೆ. ಅವರ ದೃಷ್ಟಿಯಲ್ಲಿ ಆಡಳಿತ ನಿರ್ವಹಣೆ ಪ್ರಮುಖ ಎನಿಸಿದೆ. ಹೆಚ್ಚು ಹೆಚ್ಚು ವಿದ್ಯಾವಂತರು ಐಎಎಸ್ ಸೇವೆ ಬಂದಲ್ಲಿ ಉತ್ತಮ ಗುಣಮಟ್ಟದ ಆಡಳಿತ ಕಾಣಬಹುದು. ಕರ್ನಾಟಕ ಅತ್ಯುತ್ತಮ ಐಎಎಸ್ ಅಧಿಕಾರಿಗಳ ಪರಂಪರೆಯನ್ನು ಕಂಡಿದೆ. ಇದರಲ್ಲಿ ಮಹಿಳೆಯರ ಪಾಲುಗಾರಿಗೆ ನಿಧಾನವಾಗಿಯಾದರೂ ಅಧಿಕಗೊಳ್ಳುತ್ತಿದೆ. ಕೆಲವರು ತರಬೇತಿ ಕೇಂದ್ರಗಳಿಗೂ ಹೋಗದೆ ಸ್ವಂತ ಅಧ್ಯಯನದಿಂದ ತೇರ್ಗಡೆ ಹೊಂದಿರುವುದು ನಿಜಕ್ಕೂ ಶ್ಲಾಘನೀಯ. ಇಂಥ ಪೀಳಿಗೆ ಅಧಿಕಗೊಳ್ಳಬೇಕು. ಭಾರತ ಮುಂಬರುವ ದಿನಗಳಲ್ಲಿ ಜ್ಞಾನಾಧರಿತ ಕೇಂದ್ರವಾಗಿ ರೂಪುಗೊಳ್ಳಲಿದೆ ಎಂದು ಅಬ್ದುಲ್ ಕಲಾಂ ಹೇಳುತ್ತಿದ್ದರು. ಅದು ಈಗ ಸಾಕಾರಗೊಳ್ಳುತ್ತಿದೆ.
ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಭಾರತೀಯ ಪ್ರತಿಭೆಗೆ ಮನ್ನಣೆ ದೊರಕುತ್ತಿದೆ. ನಮ್ಮ ಯುವ ಪ್ರತಿಭೆ ಇಡೀ ಜಗತ್ತಿನಲ್ಲಿ ಎಲ್ಲಿ ಬೇಕಾದರೂ ಕೆಲಸ ಮಾಡಲು ಬೇಕಾದ ಬುದ್ಧಿಮತ್ತೆಯನ್ನು ಹೊಂದಿದೆ. ಹಿರಿಯರು ತಮ್ಮ ಮಕ್ಕಳನ್ನು ಮನೆಯಲ್ಲೇ ಇರಬೇಕೆಂದು ಭಾವನಾತ್ಮಕ ನಂಟಿಗೆ ಗಂಟು ಹಾಕದೆ ಮುಕ್ತವಾಗಿ ಜಗತ್ತಿನಲ್ಲಿ ಎಲ್ಲಿ ಬೇಕಾದರೂ ಬದುಕಲು ಅವಕಾಶ ನೀಡಬೇಕು. ಹಿರಿಯರ ಉದಾರ ನಿಲುವು ಭಾರತದ ಪ್ರತಿಭೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಅಧಿಕಗೊಳ್ಳುವುದರಲ್ಲಿ ಸಂದೇಹವಿಲ್ಲ. ಇದಕ್ಕೆ ನಮ್ಮಲ್ಲಿರುವ ಸುಭದ್ರ ಶಿಕ್ಷಣ ಪದ್ಧತಿ ಕಾರಣ. ನಾವು ನಮ್ಮ ಮಕ್ಕಳಲ್ಲಿ ಆಧುನಿಕ ಜ್ಞಾನದ ಹಸಿವು ಬೆಳೆಸುವ ಹಾಗೆ ಪ್ರಾಮಾಣಿಕತೆ, ನಿಷ್ಠೆಯ ಮಹತ್ವವನ್ನೂ ಬೆಳೆಸುತ್ತಿದ್ದೇವೆ. ಅದರಿಂದಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯರು ಎಲ್ಲರ ವಿಶ್ವಾಸಾರ್ಹತೆಗಳಿಸಲು ಸಾಧ್ಯವಾಗಿದೆ. ವೈಜ್ಞಾನಿಕ ತಂತ್ರಜ್ಞಾನದೊಂದಿಗೆ ನೈತಿಕ ಶಿಕ್ಷಣವೂ ಅಗತ್ಯ. ಇದರಲ್ಲಿ ನಮ್ಮ ಹಿರಿಯರು ಮೊದಲಿನಿಂದಲೂ ಯಾವುದೇ ರೀತಿ ರಾಜಿಸೂತ್ರಕ್ಕೆ ಒಪ್ಪದೆ ಮಕ್ಕಳಲ್ಲಿ ನೈತಿಕ ಶ್ರೀಮಂತಿಕೆಯನ್ನು ಬೆಳೆಸಿದರು. ಇದರಿಂದ ನಮ್ಮ ಮಕ್ಕಳು ಜಗತ್ತಿನ ಯಾವುದೇ ಮೂಲೆಗೆ ಹೋದರೂ ಅಲ್ಲಿಯ ಜನ ವಿಶ್ವಾಸಗಳಿಸಲು ಸಾಧ್ಯವಾಗಿದೆ. ಉತ್ತಮ ಜ್ಞಾನ ಮತ್ತು ಉತ್ತಮ ವ್ಯಕ್ತಿತ್ವ ನಮ್ಮ ಯುವಪೀಳಿಗೆಗೆ ಉತ್ತಮ ಭವಿಷ್ಯವಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಈಗ ಯುವ ಪೀಳಿಗೆ ಸ್ವತಂತ್ರ ಜೀವನ ನಡೆಸಲು ಬಯಸುತ್ತದೆ. ಅದಕ್ಕಾಗಿ ಜಗತ್ತಿನ ಎಲ್ಲ ಜ್ಞಾನವನ್ನು ತಮ್ಮದಾಗಿಸಿಕೊಳ್ಳಲು ಹಗಲು ಇರುಳು ದುಡಿಯಲು ಸಿದ್ಧರಿದ್ದಾರೆ. ಇದರಲ್ಲಿ ಯುವತಿಯರೂ ಹಿಂದೆ ಬಿದ್ದಿಲ್ಲ. ಐಟಿ-ಬಿಟಿಯ ನಂತರ ಈಗ ಐಎಎಸ್ ಅತಿ ಹೆಚ್ಚು ಬೇಡಿಕೆ ಇರುವ ಪರೀಕ್ಷೆಯಾಗಿದೆ. ಅತಿ ಹೆಚ್ಚು ವಿದ್ಯೆ ಪಡೆದವರು ಆಡಳಿತ ಸೇವೆಗೆ ಬಂದಲ್ಲಿ ಆಡಳಿತದ ಗುಣಮಟ್ಟ ಉತ್ತಮಗೊಳ್ಳುವುದರಲ್ಲಿ ಸಂದೇಹವಿಲ್ಲ. ೧೦ ಜನ ಉತ್ತಮ ನಿಷ್ಠಾವಂತ ಐಎಎಸ್ ಅಧಿಕಾರಿಗಳಿದ್ದರೆ ಸಾಕು. ಎಂಥ ಭ್ರಷ್ಟ ಸರ್ಕಾರವನ್ನೂ ಮಣಿಸಬಹುದು ಎಂಬ ಮಾತಿದೆ.