ಯೂಟ್ಯೂಬ್ ಮೇಲೆ ಪ್ರಹಾರ ಅಭಿವ್ಯಕ್ತಿ ಹಕ್ಕಿಗೆ ಗಮನವಿರಲಿ

ಸಂಪಾದಕೀಯ
Advertisement

ಅಭಿವ್ಯಕ್ತಿ ಸ್ವಾತಂತ್ರ್ಯ ಎರಡು ಅಲಗು ಇರುವ ಕತ್ತಿ. ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳು ಇದನ್ನು ದುರುಪಯೋಗಪಡಿಸಿಕೊಳ್ಳಬಾರದು. ಅದೇರೀತಿ ಸರ್ಕಾರ ವಿರೋಧಿ ಧ್ವನಿ ದಮನ ಮಾಡಲು ಕಾಯ್ದೆಯ ಮೊರೆ ಹೋಗಬಾರದು.

ಕೇಂದ್ರ ಸರ್ಕಾರ ೮ ಯೂಟ್ಯೂಬ್‌ಗಳ ಮೇಲೆ ಕ್ರಮ ಕೈಗೊಂಡಿದೆ. ಈ ಚಾನೆಲ್‌ಗಳು ಸರ್ಕಾರದ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದವು ಎಂದು ಆರೋಪಿಸಲಾಗಿದೆ. ಸರ್ಕಾರ ತನ್ನ ವಿರುದ್ಧ ಧ್ವನಿ ಎತ್ತಿದವರ ಮೇಲೆ ಕಾನೂನಿನ ಗದಾಪ್ರಹಾರ ನಡೆಸುವುದು ಸರಿಯಲ್ಲ. ಆಡಳಿತ ನಡೆಸುವವರು ಸಕಾರಾತ್ಮಕ ಟೀಕೆಗಳನ್ನು ಸ್ವಾಗತಿಸಬೇಕು. ಉದಾರತೆಯನ್ನು ತೋರಬೇಕು. ಆಗಲೂ ಯೂಟ್ಯೂಬ್‌ಗಳು ತಮ್ಮ ಕಾರ್ಯವಿಧಾನವನ್ನು ಬದಲಿಸಿಕೊಳ್ಳಲಿಲ್ಲ ಎಂದರೆ ಕ್ರಮ ಕೈಗೊಳ್ಳಬೇಕು.
ಅದೇ ರೀತಿ ಸಾಮಾಜಿಕ ಜಾಲತಾಣದಲ್ಲಿರುವವರು ಸಾಮಾಜಿಕ ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಕಾನೂನು ಪರಿಧಿಯಲ್ಲಿ ಕೆಲವು ನಿರ್ಬಂಧಗಳು ಇದ್ದೇ ಇರುತ್ತವೆ. ನಮ್ಮಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲೇ ಪತ್ರಿಕಾಸ್ವಾತಂತ್ರ್ಯವೂ ಅಡಗಿದೆ. ಡಿಜಿಜಲ್ ಮಾಧ್ಯಮ ಬಂದ ಮೇಲೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹೆಚ್ಚು ಬಲ ಬಂದಿದೆ. ಜಗತ್ತಿನಲ್ಲಿ ನಡೆಯುವ ಪ್ರತಿಯೊಂದು ಘಟನೆ ಜನರ ಗಮನಕ್ಕೆ ಕೂಡಲೇ ಬರುತ್ತದೆ. ಅದಕ್ಕೆ ಪ್ರತಿಕ್ರಿಯೆ ಸೂಚಿಸುವುದು ಜನರ ಹಕ್ಕು. ಅದಕ್ಕೆ ಅವರು ಸಮೂಹ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುವುದು ಸಹಜ. ಇದನ್ನು ಬಳಸುವಾಗ ಸಂಯಮ ಮತ್ತು ಭಾಷೆಯ ಮೇಲೆ ಹಿಡಿತ ಅಗತ್ಯ.
ಸರ್ಕಾರ ಪಿಐಬಿ ವರದಿಯ ಮೇಲೆ ೮ ಯೂಟ್ಯೂಬ್ ಮೇಲೆ ಕ್ರಮ ಕೈಗೊಂಡಿದೆ. ಇವುಗಳ ಮೇಲಿರುವ ಆರೋಪ ಎಂದರೆ ಸರ್ಕಾರಿ ಯೋಜನೆಗಳ ಬಗ್ಗೆ ಸುಳ್ಳು ವರದಿಗಳನ್ನು ಪ್ರಚುರ ಪಡಿಸಿದರು. ಆದರೆ ಇದನ್ನು ನ್ಯಾಯಾಲಯ ತೀರ್ಮಾನಿಸಬೇಕೇ ಹೊರತು ಸರ್ಕಾರ ಏಕಪಕ್ಷೀಯ ತೀರ್ಮಾನಕ್ಕೆ ಬರುವುದು ಸರಿಯಲ್ಲ. ಸ್ವಯಂ ನಿಯಂತ್ರಣ ರೇಖೆ ಇಬ್ಬರಿಗೂ ಅಗತ್ಯ.
ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿಗಳ ತೇಜೋವಧೆ ಮಾಡುವ ಕೆಲಸ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ಇದು ಅಪಾಯಕಾರಿ. ಸತ್ಯ ಮತ್ತು ಸಾರ್ವಜನಿಕ ಹಿತದ ಮೌಲ್ಯಗಳನ್ನು ಪ್ರತಿಯೊಂದು ಪ್ರಕರಣದಲ್ಲೂ ಹುಡುಕುವುದು ಕಷ್ಟ. ಪ್ರತಿ ಪ್ರಜೆಗೂ ತನ್ನ ಖಾಸಗಿ ಬದುಕನ್ನು ರಕ್ಷಿಸಿಕೊಳ್ಳಲು ಹಕ್ಕು ಇದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಬೇರೆಯವರ ಖಾಸಗಿ ಬದುಕನ್ನು ಟೀಕಿಸಲು ಬರುವುದಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದು ಮೂಲಭೂತ ಹಕ್ಕಾಗಿದ್ದರೂ ಅದೇನೂ ಪರಮಾಧಿಕಾರವಲ್ಲ. ಅದಕ್ಕೂ ಕೆಲವು ನಿರ್ಬಂಧಗಳಿವೆ. ನಮ್ಮ ಸಂವಿಧಾನ ರಚಿಸಿದವರು ಮುಂದಾಲೋಚನೆ ಮಾಡಿ ಅಪರಾಧಗಳಿಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆ ಮತ್ತು ನಾಗರಿಕ ಅಪರಾಧ ಸಂಹಿತೆ (ಸಿಆರ್‌ಪಿಸಿ) ರಚಿಸಿದ್ದಾರೆ. ಅದರಂತೆ ನಮ್ಮಲ್ಲಿ ನ್ಯಾಯ ವಿತರಣೆ ವ್ಯವಸ್ಥೆ ನಡೆದುಕೊಂಡು ಬಂದಿದೆ. ಯಾವುದೇ ಅಪರಾಧವಿರಲಿ ಆರೋಪ ಮಾಡಬೇಕೆಂದರೆ ನ್ಯಾಯಾಲಯಕ್ಕೆ ಹೋಗಿ ಪ್ರಮಾಣಪತ್ರ ಸಲ್ಲಿಸಬೇಕು. ಇಲ್ಲವೆ ಪೊಲೀಸ್ ಠಾಣೆಗೆ ಹೋಗಿ ಲಿಖಿತ ದೂರು ಸಲ್ಲಿಸಬೇಕು. ಬಹಿರಂಗವಾಗಿ ಆರೋಪಗಳನ್ನು ಮಾಡಲು ಬರುವುದಿಲ್ಲ. ಈಗ ಎಲ್ಲವೂ ತಿರುಗುಮುರುಗು ಆಗಿದೆ. ವ್ಯಕ್ತಿನಿಂದೆ ಪ್ರಧಾನವಾಗುತ್ತಿದೆ. ಸುಳ್ಳು ಸುದ್ದಿ ಹರಡಬಾರದು ಎಂದು ಕಾನೂನು ಹೇಳುತ್ತದೆ. ಆದರೆ ಇದಕ್ಕೆ ನಿಯಂತ್ರಣ ಹಾಕಲು ಸಾಧ್ಯವಾಗಿಲ್ಲ. ಹಿಂದೆ ಕೊರೊನಾ ಕಾಲದಲ್ಲಿ ಲಸಿಕೆ ಹಾಕಿಸಿಕೊಳ್ಳಬೇಡಿ ಎಂದು ದೊಡ್ಡ ಅಪಪ್ರಚಾರವೇ ನಡೆದಿತ್ತು. ಕೊನೆಗೆ ಪಾರದರ್ಶಕ ಕ್ರಮಗಳಿಂದ ಜನರ ಸಂಶಯ ನಿವಾರಿಸಲು ಸಾಧ್ಯವಾಯಿತು. ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದು ಎರಡು ಅಲಗಿನ ಕತ್ತಿ ಇದ್ದಂತೆ. ಅದನ್ನು ಸಮಾಜದ ಹಿತಕ್ಕೆ ಅಥವ ಸಂಚಕಾರಕ್ಕೆ ಬಳಸಬಹುದು. ಸುಳ್ಳು ಸುದ್ದಿ ಹರಡುವುದು ಸುಲಭ. ಸತ್ಯವನ್ನು ಜನರ ಮುಂದಿಡುವುದು ಕಷ್ಟ. ಅಭಿವ್ಯಕ್ತಿ ಸ್ವಾತಂತ್ರö್ಯ ಹರಣ ಪ್ರಕರಣಗಳು ನ್ಯಾಯಾಲಯದ ಮುಂದೆ ಬಂದಾಗ ನ್ಯಾಯಮೂರ್ತಿಗಳು ನೋಡುವುದು ಸತ್ಯಾಂಶ ಹಾಗೂ ಸಾರ್ವಜನಿಕ ಹಿತ. ಅವೆರಡು ಇದೆ ಎಂದು ಸಾಬೀತಾದರೆ ನ್ಯಾಯಾಲಯ ಮುಂದಿನ ಕ್ರಮಕ್ಕೆ ಅವಕಾಶ ನೀಡುವುದಿಲ್ಲ. ಈ ಎರಡು ಮೌಲ್ಯಗಳು ಸಾವಿನ ಅಂಚಿನಲ್ಲಿದೆ.