ಯೋಗೇಶ್ವರ್ ಪುತ್ರಿಗೆ ಕಾಂಗ್ರೆಸ್‌ನತ್ತ ಒಲವು

Advertisement

ಬೆಂಗಳೂರು: ಬಿಜೆಪಿಯ ಶಾಸಕರಾಗಿರುವ ಸಿ.ಪಿ. ಯೋಗೇಶ್ವರ್ ಬೆಂಗಳೂರು ಗ್ರಾಮಾಂತರ ಹಾಗೂ ಮಂಡ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಗೆಲುವಿಗಾಗಿ ಟೊಂಕ ಕಟ್ಟಿ ನಿಂತಿದ್ದರೆ, ಇತ್ತ ಅವರ ಪುತ್ರಿ ನಿಶಾ ಕಾಂಗ್ರೆಸ್ ಸೇರಲು ಮುಂದಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಯೋಗೇಶ್ವರ್ ಪುತ್ರಿ ನಿಶಾ ಹಾಗೂ ಅವರ ಪತ್ನಿ ಇಬ್ಬರೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರಲ್ಲದೆ ತಾವು ಕಾಂಗ್ರೆಸ್ ಸೇರುವುದಾಗಿ ತಿಳಿಸಿದ್ದಾರೆನ್ನಲಾಗಿದೆ.
ಈ ಕುರಿತಂತೆ ಡಿ.ಕೆ. ಶಿವಕುಮಾರ್ ಅವರೇ ಮಾಹಿತಿ ನೀಡಿದ್ದು, ಸಿ.ಪಿ.ಯೋಗೇಶ್ವರ್ ಅವರ ಪುತ್ರಿ ನಿಶಾ ತಮ್ಮ ಮನೆಗೆ ಬಂದು ನನ್ನನ್ನು ಭೇಟಿ ಮಾಡಿದ್ದಾರೆ. ಆಕೆಯ ತಾಯಿಯೂ ಜೊತೆಯಲ್ಲಿ ಬಂದಿದ್ದರು. ನಿಶಾ ನನ್ನನ್ನು ತಂದೆ ಸ್ಥಾನದಲ್ಲಿ ಸ್ವೀಕರಿಸುವುದಾಗಿ ಹೇಳಿದ್ದಾರೆ. ಆಕೆ ಪ್ರಬುದ್ಧಳಿದ್ದು, ಬುದ್ಧಿವಂತಳಾಗಿದ್ದಾಳೆ. ಮನೆಯ ಸಮಸ್ಯೆಯನ್ನು ಹೇಳಿಕೊಂಡಿದ್ದಾಳೆ. ಈಗ ಆಕೆಗೆ ರಕ್ಷಣೆ ಇಲ್ಲವಾಗಿದೆ ಎಂದರು.
ತಂದೆ ಮಗಳನ್ನು ಬೇರ್ಪಡಿಸುವುದಿಲ್ಲ
ನಿಶಾ ಮತ್ತು ಅವರ ತಾಯಿಯ ಪರಿಸ್ಥಿತಿ ಗೊತ್ತಿದೆ. ಆರ್ಥಿಕ ಸ್ಥಿತಿಗತಿಯ ಬಗ್ಗೆ ಮಾಹಿತಿಯೂ ಇದೆ. ಅಂದ ಮಾತ್ರಕ್ಕೆ ನಿಶಾಳನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡು ತಂದೆ-ಮಗಳನ್ನು ಬೇರೆ ಮಾಡುವುದಿಲ್ಲ. ಪಕ್ಷಕ್ಕೆ ಸೇರಿಸಿಕೊಂಡರೆ ತಂದೆ ಮಗಳನ್ನು ಬೇರೆ ಮಾಡಿದರು ಎಂದು ಜನ ನಾಳೆ ನನ್ನನ್ನು ಪ್ರಶ್ನೆ ಮಾಡುವಂತಾಗಬಾರದು ಎಂಬ ಕಾರಣಕ್ಕೆ ತಾಳ್ಮೆಯಿಂದ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.