ರಾಜಕೀಯದಲ್ಲಿ ಧರ್ಮ ಬೇಕು, ಧರ್ಮದಲ್ಲಿ ರಾಜಕೀಯ ಬೇಡ

ಶುಕ್ರವಾರ
Advertisement

ನಮ್ಮ ಭಾರತ ದೇಶ ಪ್ರಜಾಪ್ರಭುತ್ವದ ಅಡಿಯಲ್ಲಿ ಆಡಳಿತ ನಡೆದುಕೊಂಡು ಬಂದಿದೆ. ನಮ್ಮ ದೇಶ ಸ್ವಾತಂತ್ರ್ಯವಾದ ನಂತರ ಸಂವಿಧಾನದ ಸೂತ್ರದ ಪ್ರಕಾರ ರಾಜಕಾರಣಿಗಳು ಅಧಿಕಾರವಹಿಸಿ ಜನರ ಆಶೋತ್ತರಗಳಿಗೆ ಸ್ಪಂದಿಸಿ ತಮ್ಮ ಕರ್ತವ್ಯ ನಿರ್ವಹಿಸಬೇಕಾಗುತ್ತದೆ.
ಈ ಮೊದಲು ರಾಜ ಮಹಾರಾಜರ ಕಾಲದಲ್ಲಿ ಒಬ್ಬ ರಾಜಗುರು ಎಂಬವರು ಇರುತ್ತಿದ್ದರು. ರಾಜನ ನಡೆತೆಯಲ್ಲಿ ಏನಾದರೂ ವ್ಯತ್ಯಾಸ ಕಂಡು ಬಂದರೆ ಅವನನ್ನು ತನ್ನ ಆಶ್ರಮಕ್ಕೆ ಕರೆಯಿಸಿ ಉತ್ತಮ ಮಾರ್ಗದರ್ಶನ ನೀಡಿ ತಿದ್ದಿ ಕಳುಹಿಸುತ್ತಿದ್ದರು. ಆತನ ಮೇಲೆ ಸದಾಕಾಲ ನಿಗಾ ಇಡುತ್ತಿದ್ದರು. ಹಿಂದೆ ಗುರು ಇರಬೇಕು. ಮುಂದೆ ಗುರಿ ಇರಬೇಕು ಎಂದು ರಾಜರೇ ಹೇಳಿದ ಮಾತು.
ಆದರೆ ಇಂದು ರಾಜಕಾರಣ ನೋಡಿದರೆ ಯಾವಾಗ ಏನಾಗುತ್ತೋ ಎಂಬ ಭಯದ ವಾತಾವರಣದಲ್ಲಿ ಬದುಕುತ್ತಿದ್ದೇವೆ. ರಾಜಕಾರಣದಲ್ಲಿ ಧರ್ಮ ಇದ್ದರೆ ಆಳುವವರಿಗೆ ಭಯ ಇರುತ್ತದೆ. ತಾನು ಮಾಡುತ್ತಿರುವುದು ಸರಿಯೋ ಅಥವಾ ತಪ್ಪೋ ಎಂಬ ಅರಿವು ಬರುತ್ತದೆ. ಆದರೆ ಧರ್ಮದ ಹಂಗಿಲ್ಲದೇ ಸ್ವೇಚ್ಛೆಯಿಂದ ವರ್ತಿಸುವ ರಾಜಕಾರಣ ಕೇವಲ ಹಣ ಗಳಿಕೆಗಾಗಿ ರಾಜಕಾರಣಕ್ಕೆ ಬರುತ್ತಾನೆ ಹೊರತು ಉತ್ತಮ ಆಡಳಿತ ನೀಡುವುದಕ್ಕಾಗಿ ಜನಸೇವೆಗಾಗಿ ಅಲ್ಲವೇ ಅಲ್ಲ; ಜನರ ಕಷ್ಟ ನಷ್ಟಗಳ ಬಗ್ಗೆ ಕಾಳಜಿ ವಹಿಸಿ ಕೆಲಸ ಮಾಡುವ ಪ್ರಯತ್ನ ಮಾಡುತ್ತಾರೆ. ಇಂಥವರು ತಮ್ಮ ಸ್ವಾರ್ಥಕ್ಕಾಗಿ ಯರ‍್ಯಾರನ್ನೋ ಬಲಿ ಕೊಟ್ಟು ಜಾತಿ ವಿಷ ಬೀಜ ಬಿತ್ತಿ ತಾವು ಲಾಭ ಪಡೆಯುತ್ತಾರೆ. ಅನೈತಿಕ ಮಾರ್ಗದಲ್ಲಿ ಆಡಳಿತವನ್ನು ತಮ್ಮ ಕೈ ವಶ ಮಾಡಿಕೊಳ್ಳುತ್ತಾರೆ. ಇಂಥವರಿಂದ ಸಮಾಜಕ್ಕೆ ಹಾನಿಯೇ ಹೊರತು ಲಾಭ ಕಿಂಚಿತ್ತೂ ಇಲ್ಲ; ರಾಜ ಧರ್ಮ ಪಾಲಿಸುವವರು ಸ್ವಾರ್ಥವನ್ನು ಬಿಡಬೇಕು. ಅದು ವ್ರತವೇ ಆಗಬೇಕು. ಇಂಥ ರಾಜಕಾರಣಿಗಳು ಈಗೆಲ್ಲಿದ್ದಾರೆ ಎಂಬ ಪ್ರಶ್ನೆ ಸಹಜ. ಸಮಾಜವನ್ನು ಕೂಡ ಕಲ್ಮಶಗೊಳಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ.
ಜನಾನುರಾಗಿಯಾದಾಗ ಮಾತ್ರ ನಿಜವಾದ ರಾಜಕಾರಣಿಯಾಗಲು ಸಾಧ್ಯ. ಕೆಲವು ಧರ್ಮ ಗುರುಗಳು ಧರ್ಮದ ಕೆಲಸ ಮಾಡುವದು ಬಿಟ್ಟು ರಾಜಕಾರಣ ಮಾಡಲು ಹೋಗಿ ತಮ್ಮ ಘನತೆ ಕಳೆದುಕೊಳ್ಳುತ್ತಾರೆ. ರಾಜಕಾರಣಿಗಳು ಧರ್ಮದ ಭಯದಲ್ಲಿ ಆಡಳಿತ ನಡೆಸಬೇಕೇ ವಿನಃ ಅದನ್ನು ಬಿಟ್ಟು ಧರ್ಮದಲ್ಲೇ ರಾಜಕಾರಣ ಮಾಡುವುದು ಸರಿಯಾದ ಕ್ರಮವಲ್ಲ.