ಬಾಯಿ ತುಂಬ ಈಗ ಬರಿ ರಾಜಕೀಯ ಕೆಸರೋ ಕೆಸರು

Advertisement

ಮೋಹನ ಹೆಗಡೆ

ರಾಜಕಾರಣ ಎನ್ನುವುದು ಪುಂಡರ, ಠಕ್ಕರ ಅಂತಿಮ ಆಶ್ರಯತಾಣ'. ಜಾರ್ಜ್ ಬರ್ನಾರ್ಡ್ ಶಾ ಅವರ ಈ ಮಾತನ್ನ ಹುಸಿಯಾಗಿಸುವ ರಾಜಕಾರಣಿ ಅಥವಾ ರಾಜಕೀಯ ವ್ಯವಸ್ಥೆ ಯಾವ ದೇಶದಲ್ಲಿಯೂ ಸಾಧ್ಯವಾಗಲಿಲ್ಲ ಎನ್ನುವುದು ನಿಜ. ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ಇದರೊಟ್ಟಿಗೆ ಸ್ಕೌಂಡ್ರಲ್‌ಗಳ ಜೊತೆಗೆ ರಾಜಕಾರಣಿಗಳನ್ನು ವಂಚಕರು, ಭ್ರಷ್ಟರು, ಅನೀತಿವಂತರು, ದುರುಳರು, ದುರಾತ್ಮರು ಎಂದೆಲ್ಲವನ್ನೂ ಮುಕ್ತವಾಗಿ ಸೇರಿಸಿಕೊಳ್ಳಬಹುದೇನೋ...!? ಬಹುತೇಕ ದೇಶಗಳ, ವಿಶೇಷವಾಗಿ ಭಾರತದಲ್ಲಂತೂ ಇದು ಈಗ ಜನತೆಗೆ ಕೆಟ್ಟ ಅನುಭವಕ್ಕೆ ಬಂದ ಮಾತು. ಕಳೆದ ಚುನಾವಣೆಯ ನಂತರ ನಡೆದ ಟೀಕೆ ಟಿಪ್ಪಣಿಗಳು, ವಿದ್ಯಮಾನಗಳನ್ನು ಗಮನಿಸಿದರೆ ಇಷ್ಟಕ್ಕೇ ಈ ಬಿರುದಾಂಕಿತ ನಿಲ್ಲಲಿಕ್ಕಿಲ್ಲ. ಈಗ ಇದರೊಟ್ಟಿಗೆ ಬಯ್ಗುಳಗಳ ವರಸೆ, ಎಲ್ಲೆ ಮೀರಿದ ಟೀಕೆಟಿಪ್ಪಣಿಗಳು, ವೈಯಕ್ತಿಕ ನಿಂದನೆಗಳ ಕಾಲ. ವೈಯಕ್ತಿಕ ನಿಂದನೆಗಳ ಭರಾಟೆ ಅಸಹ್ಯಪಡುವಷ್ಟು ಜೋರಾಗಿದೆ. ಕೇವಲ ಎರಡು ಮೂರು ದಶಕಗಳ ಹಿಂದಿನ ಮಾತು. ಸಂಸತ್ತಿನಲ್ಲಿರಲಿ, ಶಾಸನ ಸಭೆಗಳಲ್ಲಿರಲಿ, ಹೊರಗಿರಲಿ, ವೈಯಕ್ತಿಕ ನಿಂದನೆ ಬಿಡಿ, ಬಿರುಸು ಮಾತು ಕೂಡ ಇರಲಿಲ್ಲ. ಸಿದ್ಧಾಂತ ಮತ್ತು ವಸ್ತುನಿಷ್ಠ ಟೀಕೆಟಿಪ್ಪಣಿಗಳಿಗೆ ಆದ್ಯತೆ ಇತ್ತು. ಅಷ್ಟಕ್ಕೇ ಆಗ ರಾಜಕಾರಣಿಗಳ ಮನಸ್ಸು ಘಾಸಿಯಾಗುತ್ತಿತ್ತು. ಸಮಾಜದಲ್ಲಿ ಪರಿಣಾಮ ಬೀರುತ್ತಿತ್ತು. ಈಗ ಹಾಗಿಲ್ಲ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿಯೂ ವಾಜಪೇಯಿ, ಜಯಪ್ರಕಾಶ ನಾರಾಯಣ, ಸ್ವತಃ ರಾಜನಾರಾಯಣ ಕೂಡ ಇಂದಿರಾಜೀ ಎಂದೇ ಸಂಬೋಧಿಸುತ್ತಿದ್ದರು. ಏಕವಚನ ಪದಪ್ರಯೋಗ ಮತ್ತು ವೈಯಕ್ತಿಕ ನಿಂದನೆ- ಅವಹೇಳನವನ್ನು ಅಂದಿನ ಯಾವ ಮುತ್ಸದ್ದಿ ರಾಜಕಾರಣಿಯೂ ಮಾಡುತ್ತಿರಲಿಲ್ಲ. ಮರಿ ಪುಢಾರಿಗಳು ತಮ್ಮ ನಾಯಕರ ಓಲೈಕೆಗೆ ಮಾತು ಹರಿಬಿಟ್ಟಾಗಲೂ ಎಚ್ಚರಿಕೆ ನೀಡಿ ಅವರನ್ನು ಗದರಿಸುತ್ತಿದ್ದ ಕಾಲವಿತ್ತು. ರಾಜಕೀಯ ಮತ್ತು ಸ್ಪರ್ಧೆ ಸಿದ್ಧಾಂತದ ಆಧಾರದ ಮೇಲೆಯೇ ನಡೆಯುತ್ತಿತ್ತು. ಶಾಸನ ಸಭೆಗಳಲ್ಲೂ ಅಸಭ್ಯ ವರ್ತನೆಗಳಿಗೆ ಅವಕಾಶ ಇರಲಿಲ್ಲ. ವಿಶೇಷವಾಗಿ ಮಹಿಳೆಯರ ಬಗ್ಗೆಯಂತೂ ಅತ್ಯಂತ ಜಾಗೃತಿ ಇದ್ದ ಕಾಲವದು. ಈಗ ನೋಡಿ ! ೨೦೧೩ರಲ್ಲಿಸಾವಿನ ಸರ್ದಾರ, ಮೌತ್ ಕಾ ಸೌದಾಗರ್’ ಎನ್ನುವ ಟೀಕೆಯಿಂದ ಆರಂಭವಾದ ರಾಜಕಾರಣ ಈಗ ಶಾಸಕರೆಲ್ಲ ವೇಶ್ಯೆಯರು, ಷಂಡರು, ಪಿಂಪ್ ಎನ್ನುವ ಮಟ್ಟಕ್ಕೆ ಬಂದಿದೆ. ದುರಂತ ಎಂದರೆ ಇಂತಹ ಟೀಕೆ ನಿಂದನೆಗಳನ್ನು ಆರಾಧಿಸುವವರ ಮತ್ತು ರಂಜನೀಯವಾಗಿ ವಿಜೃಂಭಿಸುವವರ ಸಪೊಟರ‍್ಸ್ (ಬೆಂಬಲಿಗರ) ಸಂಖ್ಯೆ ಕೂಡ ಅಷ್ಟೇ ಜೋರಾಗಿ ಬೆಳೆಯುತ್ತಿದೆ. ದುಡ್ಡು, ಮತ, ತೋಳ್ಬಲ ಇವಿಷ್ಟಿದ್ದರೆ ರಾಜಕಾರಣದಲ್ಲಿ ಏನೂ ನಡೆದೀತು ಎನ್ನುವುದು ಸಾಬೀತಾಗಿರುವುದರಿಂದ ಇಂತಹ ಪುಂಡಾಟಿಕೆಗೆ, ಅನೈತಿಕ ಮಾತು- ದರ್ಪಗಳಿಗೆ ಪ್ರೋತ್ಸಾಹ ಹೆಚ್ಚಾಗಿದೆ.
೧೯೮೩- ೮೪ರ ನೆನಪು. ಜನತಾರಂಗ ಸರ್ಕಾರ ಆಗ ತಾನೇ ಅಧಿಕಾರ ಹಿಡಿದು ಕ್ರಾಂತಿರಂಗ ಬೇರೆಯಾಗಿ ಕಾಂಗ್ರೆಸ್ಸೇತರ ಸರ್ಕಾರ ಅಸ್ತಿತ್ವಕ್ಕೆ ಬಂದ ಕಾಲ. ಎರಡನೆಯ ಅಧಿವೇಶನ ಕಲಾಪ ವೇಳೆ ಅಂದಿನ ಪ್ರಬಲ ನಾಯಕ ಎಸ್.ಬಂಗಾರಪ್ಪ ಅವರ ವಾಗ್ಝರಿ, ಟೀಕೆಯಿಂದ ಸಭೆಯಲ್ಲಿ ಕಾವೇರಿತ್ತು.. ಆ ವೇಳೆ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ, ಬಂಗಾರಪ್ಪನವರೇ ನಿಮಗೇನು ಕಡೀತಾ ಇದೆಯಾ? ಏಕೆ ಇಡೀ ಮೈ ಕೈಯನ್ನೆಲ್ಲ ಕೆರೆದುಕೊಳ್ಳುತ್ತೀರಿ' ಅಂತ ಹೇಳಿಬಿಟ್ಟರು. ತಕ್ಷಣ ಇಡೀ ಸದನವಷ್ಟೇ ಅಲ್ಲ. ಹೊರಗಡೆಯೂ ಕೂಡ ಪತ್ರಿಕೆಗಳಲ್ಲಿ ಅದೇ ಶಬ್ದಹೆಗಡೆ ಕಟು ಮಾತು’ ಎನ್ನುವ ಟೀಕೆಯೊಂದಿಗೆ ಪ್ರಕಟವಾಯಿತು. ಆದರೆ ಉತ್ತರ ಕರ್ನಾಟಕದ ಭಾಗದಲ್ಲಿ ಕಡಿತ ಎಂಬ ಶಬ್ದಕ್ಕೆ ಬೇರೆಯದ್ದೇ ಆದ ಅರ್ಥವಿದ್ದರೂ ಸಾಮಾನ್ಯ ಭಾಷೆಯದು. ಮೈಸೂರು ಕರ್ನಾಟಕದಲ್ಲಿ ಈ ಶಬ್ದಕ್ಕಿರುವ ಕ್ರೂರತೆ ಉತ್ತರದಲ್ಲಿ ಇಲ್ಲ. ಆದಾಗ್ಯೂ ಹೆಗಡೆ ಕ್ಷಮೆ ಕೋರಿದರು.
ಜೆ.ಎಚ್.ಪಟೇಲ್ ಅವರು ವಿಧಾನಸಭೆಯಲ್ಲಿ ಸರ್ಕಾರ ಈಗ ಬೀಳುತ್ತೆ, ಆಗ ಬೀಳುತ್ತೆ ಎಂದು ಕಾದು ಕುಳಿತಿರುವ ಕಾಂಗ್ರೆಸ್ ಪ್ರಮುಖರಿಗೆ ಹೋರಿಕಥೆ ಹೇಳಿದ್ದರು. ಅದಕ್ಕೆ ಮಾರ್ಮಿಕವಾಗಿ ಉತ್ತರಿಸಿದ್ದರು ಪಟೇಲ್.
ಅಂದಿನ ರಾಜಕಾರಣವೇ ಬೇರೆ. ಆದರೆ ಈಗ ಹಾಗಲ್ಲವಲ್ಲ. ದ್ವೇಷಪೂರಿತ, ಧರ್ಮ ಜಾತಿ ಆಧಾರಿತ, ವೈಯಕ್ತಿಕ ನಿಂದನೆಗಳೇ ಎಲ್ಲೆ ಮೀರಿ ಸಮಾಜದ ಎಲ್ಲ ಸ್ತರಗಳಲ್ಲಿಯೂ ಘಾಸಿಗೊಳಿಸುವಂತಹ ಅಥವಾ ಕಲುಷಿತಗೊಳಿಸುವಂತಹ ಮಾತುಗಳೇ ವಿಜೃಂಭಿಸುತ್ತಿವೆ. ಪೈಲಟ್ ಆಗಿದ್ದ ರಾಜೀವ್‌ಗಾಂಧಿ ಇಂದಿರಾ ಹತ್ಯೆ ನಂತರ ಪ್ರಧಾನ ಮಂತ್ರಿಯಾದಾಗ, ಜನತಾ ಪಕ್ಷದ ಪ್ರಮುಖರು, ಯಾರು ಈ ರಾಜೀವ್?'ಎಂದು ಪ್ರಶ್ನಿಸಿದ್ದರು. ಅದಕ್ಕೆ ರಾಜೀವ್ ಯಾರು ಗೊತ್ತಿಲ್ಲದವರಲ್ಲ ಎಂದು ಮತದಾರರೇ ತಿರುಗೇಟು ನೀಡಿದ್ದರು. ಅಷ್ಟು ವೈಯಕ್ತಿಕ ನಿಂದನೆಯನ್ನೂ ಕೂಡ ಅಂದು ಮತದಾರರು ಸಹಿಸಿಕೊಳ್ಳುತ್ತಿರಲಿಲ್ಲ. ತಕ್ಕ ಪಾಠವನ್ನೇ ಕಲಿಸುತ್ತಿದ್ದರು. ಯಾರು ರಾಜೀವ್? ಎಂದು ಪ್ರಶ್ನಿಸಿದ್ದವರೆಲ್ಲ ಮಣ್ಣುಮುಕ್ಕಿದ್ದರು. ದೇಶ ಮತ್ತು ರಾಜಕಾರಣದಲ್ಲಿ ರಾಜೀವ್ ಯಾರು ಎನ್ನವ ಆಗಿನ ಪ್ರೌಢಪ್ರಶ್ನೆಯನ್ನೂ ಕೂಡ ಅಂದಿನ ಜನ ಅರ್ಥೈಸಿಕೊಳ್ಳಲು ಸಿದ್ಧರಿರಲಿಲ್ಲ. ಅಷ್ಟು ಭಾವನಾತ್ಮಕವಾಗಿದ್ದರು. ಈಗ ಪ್ರಧಾನ ಮಂತ್ರಿ, ರಾಷ್ಟ್ರಪತಿ, ಮುಖ್ಯ ನ್ಯಾಯಾಧೀಶರು, ರಾಜ್ಯಪಾಲರುಗಳನ್ನು ಏಕವಚನದಲ್ಲಿ ಪ್ರಶ್ನಿಸುವ, ಬೇಕಾಬಿಟ್ಟಿ ಟೀಕಿಸುವವರಿಗೆ ನಿಯಂತ್ರಣ ಹೇರುವವರಿಲ್ಲ. ಇತ್ತೀಚೆಗಷ್ಟೇ ನ್ಯಾಯಾಲಯ ಹಾಗೂ ಚುನಾವಣಾ ಆಯೋಗ ಸಾಂವಿಧಾನಿಕ ಹುದ್ದೆ ಇದ್ದವರನ್ನು ವೈಯಕ್ತಿಕ ನಿಂದನೆ ಮಾಡಬಾರದು ಎನ್ನುವ ನಿರ್ದೇಶನವನ್ನೇ ನೀಡಿದೆ. ಆದರೆ ಇದನ್ನು ಪಾಲಿಸುವವರು ಯಾರು? ಪಾಲಿಸಬೇಕಾದವರು ಯಾರು? ಪಾಲಿಸುವಂತೆ ಕಟ್ಟುನಿಟ್ಟಿನ ನಿರ್ದೇಶನ ಜಾರಿಗೊಳಿಸುವವರು ಯಾರು? ಲೋಕಸಭೆಯಲ್ಲಿಯೇ ರಾಷ್ಟ್ರಪತಿಯಲ್ಲ, ರಾಷ್ಟ್ರಪತ್ನಿ ಎಂದು ಪ್ರತಿಪಕ್ಷದ ನಾಯಕ ಹೇಳಿದಾಗ ಮೂರು ದಿನಗಳ ಕಾಲ ಕಲಾಪ ಜರುಗಲಿಲ್ಲ. ಕೋಟ್ಯಂತರ ರೂಪಾಯಿ ವ್ಯರ್ಥವಾಯಿತು. ರಾಜ್ಯದಲ್ಲಿ ಸಿದ್ರಾಮುಲ್ಲಾಖಾನ್ ಎಂದು ರವಿ ಟೀಕಿಸಿದರೆ, ಅದಕ್ಕೆಸಿ.ಟಿ.ರವಿ ಸಮಾಜಘಾತುಕ, ಧರ್ಮಾಂಧ, ಪಿಟಿರವಿ’ ಇತ್ಯಾದಿ ಶಬ್ದಗಳೆಲ್ಲ ಬಂದವು. ಪ್ರತಿಪಕ್ಷದವರನ್ನು ಏಕವಚನದಲ್ಲಿ ಸಂಬೋಧಿಸುವ, ಸ್ವತಃ ಪ್ರಧಾನಿಯನ್ನೂ ಏಕವಚನದಲ್ಲೇ ಬಯ್ಯುವ ಸಿದ್ದರಾಮಯ್ಯ ಮತ್ತಿತರರು ಅದೇ ತಮ್ಮ ನಾಯಕರನ್ನು ಗೌರವ ಶಬ್ದಗಳಿಂದಲೇ ಸಂಬೋಧಿಸುತ್ತಾರೆ. ಒಮ್ಮೆ ಎಂದಾದರೂ ರಾಹುಲ್, ಸೋನಿಯಾ ಎಂದೇನೂ ಕರೆಯುವುದಿಲ್ಲ. ಅವರ ಮುಂದೆ ಜೀ'' ಕೊಟ್ಟೇ ಮಾತನಾಡುತ್ತಾರೆ !! ಹಳ್ಳಿ ಹಕ್ಕಿಯೂ ದಿನಕ್ಕೊಂದು, ದಿಕ್ಕಿಗೊಂದು ಕುಹಕವಾಡುತ್ತದೆ... ಬಯ್ಗುಳ ಶಬ್ದಗಳು ಎಲ್ಲಿಯವರೆಗೆ ಈಗ ಬಂದಿವೆ ಎಂದರೆ ಪಿಂಪ್- ವೇಶ್ಯಾವಾಟಿಕೆಯವರೆಗೆ ಶಾಸಕನ್ನು ತಂದು ನಿಲ್ಲಿಸಲಾಗಿದೆ. ತಮಾಷೆ ಎಂದರೆ ಈಗ ಒಂದೇ ಪಕ್ಷದ ಶಾಸಕರು, ಸಚಿವರು, ತಮ್ಮದೇ ಪಕ್ಷದ ಶಾಸಕರು- ಸಚಿವರ ಬಗ್ಗೆಯೂ ಅಸಹ್ಯ ಎನ್ನಿಸುವಷ್ಟು ಕೆಟ್ಟ ಬಯ್ಗುಳಗಳಲ್ಲಿ ತೊಡಗಿರುವುದು. ಇತ್ತೀಚಿನ ಬಸವನಗೌಡ ಪಾಟೀಲ ಯತ್ನಾಳ್ ಮತ್ತು ನಿರಾಣಿ ನಡುವಿನ ಮಾತಿನ ಕದನ ಪ್ರತಿಪಕ್ಷಗಳು ನಗೆಯಾಡುವಂತೆ ಮಾಡಿವೆ. ಜನಸಾಮಾನ್ಯರು ಅಸಹ್ಯ ಪಟ್ಟುಕೊಳ್ಳುತ್ತಿದ್ದಾರೆ. ಈಗ ಅವರವರ ಅಣ್ಣ, ತಮ್ಮ, ಸ್ವಾಮಿಗಳು, ಮಠಾಧೀಶರು, ಬೆಂಬಲಿಗರುಗಳು ಷಂಡ, ನಾಲಾಯಕ, ನಾಲಿಗೆ ಸೀಳತೀನಿ... ಆ ಮಗ..ಈಮಗ.. ಬಯ್ಗುಳಕ್ಕೆ ಬಿದ್ದಿದ್ದಾರೆ. ಯಾಕೆ ಹೀಗೆ ಅಂದರೆ ರಾಜಕೀಯ ಪಕ್ಷ ಮತ್ತು ಹೈಕಮಾಂಡ್ ಇಂತಹ ಲಘು ಅಸಹ್ಯ ಮಾತುಗಳಿಗೆ ಬ್ರೇಕ್ ಹಾಕದೇ ಇರುವುದು. ಮತ್ತು ತಮಗೆ ಅನುಕೂಲಕರವಾಗಿ ಈ ವ್ಯಕ್ತಿಗಳನ್ನು ಬಳಸಿಕೊಂಡಿರುವುದರಿಂದ ಇಂತಹ ವಿಕಟತನಕ್ಕೆ ಮಾದ ಬಂದಂತಾಗಿದೆ ಅಷ್ಟೇ... ಪ್ರತಿ ಪಕ್ಷದಲ್ಲಿಯೂ ಶಿಸ್ತು ಸಮಿತಿ ಇರುತ್ತದೆ. ಆದರೆ ಶಿಸ್ತು ಸಮಿತಿ ನಾಮಕೇವಾಸ್ತೆ. ಒಂದು ಅಧಿಕಾರ ಇಲ್ಲದ, ಹಲ್ಲಿಲ್ಲದ ಹಾವು ಇದು. ಯಾರು ಯಾರನ್ನು ನಿಯಂತ್ರಿಸಬೇಕು. ದೊಡ್ಡ ಮದಗಜಗಳೇ ಕಾದಾಟಕ್ಕೆ ಇಳಿದಾಗ ಪುಟ್ಟ ಕುರಿಮಂದೆ ಏನು ಮಾಡೀತು? ಇದು ಇನ್ನೂ ಬೆಳೆಯುತ್ತಲೇ ಇರುತ್ತದೆ. ದಾಸರೇ ಹೇಳಿಲ್ಲವೇ ನಾಲಗೆಯ ಬಗ್ಗೆ? ಇನ್ನಂತೂ ಚುನಾವಣೆಯ ಭರಾಟೆ. ಮಾತು- ಬಾಣ- ಬಿರುಸುಗಳ ಮಧ್ಯೆ ಕೊಡುಗೆ ಮತ್ತು ಆಶ್ವಾಸನೆಗಳ ಕಾಲ. ಏನಕೇನ ಪ್ರಕಾರಣೇನ ಮತಗಳಿಕೆಯೊಂದೇ ಮಂತ್ರ. ತೋಳ್ಬಲ- ಹಣಬಲ, ರಾಜಕಾರಣ ಎಲ್ಲ ಕಾಲದಲ್ಲಿಯೂ ನಡೆಯುತ್ತಿಲ್ಲ. ಎಲ್ಲೆಡೆಯೂ ನಡೆಯಲಿಕ್ಕೂ ಇಲ್ಲ. ಆದರೆ ಆಮಿಷಕ್ಕೆ ಒಳಗಾಗದವರು ಬಹುಶಃ ಇನ್ಯಾರೂ ಇರಲಿಕ್ಕಿಲ್ಲ. ಹಾಗಾಗಿಯೇ ರಾಜಕೀಯ ಪಕ್ಷಗಳು ಈಗ `ಆಶ್ವಾಸನೆ', `ಗ್ಯಾರಂಟಿ', `ಭರವಸೆ' ನೀಡಲಾರಂಭಿಸಿವೆ. ಹಿಂದಿನ ಹತ್ತಾರು ಚುನಾವಣೆಗಳಲ್ಲಿ ನೀಡಿದ ಭರವಸೆಗಳು, ಪ್ರಣಾಳಿಕೆಗಳು ಮೂಲೆಗುಂಪಾದವು ಬಿಡಿ. ಈಗ ಕರ್ನಾಟಕದ ಜನಕ್ಕಂತೂ `ಕಿವಿ ಇಂಪಾಗುವ' ಮತ್ತಷ್ಟುಕಣ್ಣು ಕೆಂಪಾಗುವ”, `ತಲೆ ಝುಮ್ಮೆನ್ನುವ’ ಭರವಸೆಗಳೇ ಜಾಸ್ತಿ. ಆರ್‌ಬಿಐ ಎಚ್ಚರಿಸಿದರೇನು? ಚುನಾವಣಾ ಆಯೋಗ ನೊಟೀಸ್ ನೀಡಿದರೇನು? ಭ್ರಷ್ಟ ಮತ್ತು ಕ್ರಿಮಿನಲ್ ಜನಪ್ರತಿನಿಧಿಗಳಿಗಾಗಿಯೇ ನ್ಯಾಯಾಲಯ ತೆರೆದರೇನು ಬಂತು? ಈಗ ಹಳ್ಳಿ ಹಳ್ಳಿಗಳಲ್ಲಿ, ಆಕಾಂಕ್ಷಿಗಳ ಮತ್ತು ಈಗಿದ್ದವರ “ಕೊಡುಗೆ” ಜೋರಾಗಿದೆ. ಫ್ರಿಜ್ಜು, ಕುಕ್ಕರ್, ಸ್ಕೂಟರ್, ದವಸ-ಧಾನ್ಯಗಳಿಂದ ಹಿಡಿದು, ಮಠ- ಮಂದಿರ, ಮಸೀದಿ- ಚರ್ಚು, ಸ್ತ್ರೀಶಕ್ತಿ, ಯುವ ಶಕ್ತಿ ಸಂಘಟನೆಗಳಿಗೆ ಕೊಡುಗೆ ಎಲ್ಲವೂ ಜೋರಾಗಿ ನಡೆಯುತ್ತಿವೆ.
ಸಿಕ್ಕಿದ್ದೇ ಸೀರುಂಡೆ ಎಂದು ಜನರೇನೋ ಪಡೆಯುತ್ತಿದ್ದಾರೆ. ಬಹುಶಃ ಹಿಂದೆಲ್ಲ ಚುನಾವಣೆಗಿಂತ ಈಗಿನ ಚುನಾವಣೆಯ ಖರ್ಚು ವೆಚ್ಚ, ಟೀಕೆ ಟಿಪ್ಪಣಿ, ಅನೈತಿಕತೆ ಉಳಿದೆಲ್ಲವನ್ನೂ ಮೀರಿಸೀತು. ಸಾಂವಿಧಾನಿಕವಾಗಿ ಸ್ಥಾಪಿತವಾದ ಚುನಾವಣಾ ಆಯೋಗ ಕಣ್ಣು ಪಿಳುಕಿಸಿ ನೋಡಬೇಕಷ್ಟೇ. ಏಕೆಂದರೆ ಶೇಷನ್ ಅವರಂಥವರು ಈಗಿಲ್ಲ. ನೀತಿ ಬೋಧಿಸುವವರು, ಪಾಲಿಸುವವರೂ ಇಲ್ಲ…!