ರಾಜಕೀಯ ಶುದ್ಧಗೊಳಿಸಲು ಪೊರಕೆ ಸ್ಪರ್ಧಿಸಲಿದೆ: ಮುಖ್ಯಮಂತ್ರಿ ಚಂದ್ರು

Advertisement

ದಾವಣಗೆರೆ: ರಾಜ್ಯದಲ್ಲಿ ಜೆಸಿಬಿ (ಜೆಡಿಎಸ್, ಕಾಂಗ್ರೆಸ್, ಬಿಜೆಪಿ) ಪಕ್ಷಗಳು ಮಾತ್ರ ಸ್ಪರ್ಧಿಸುತ್ತಿಲ್ಲ ಅದರ ಜೊತೆಗೆ ಮನೆ, ರಸ್ತೆ ಸ್ವಚ್ಛಗೊಳಿಸುವ ಪೊರಕೆಯ ಚಿಹ್ನೆ ಹೊಂದಿರುವ ಆಮ್ ಆದ್ಮಿ ಪಾರ್ಟಿಯು ಸ್ಪರ್ಧಿಸುತ್ತಿದ್ದು, ರಾಜ್ಯದ ೨೨೪ ವಿಧಾನ ಸಭಾ ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ ಎಂದು ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.
ನಗರದ ರಿಂಗ್ ರಸ್ತೆಯಲ್ಲಿರುವ ಪಕ್ಷದ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯಷ್ಟೇ ಅಲ್ಲದೇ, ಮುಂಬರುವ ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಹಾಗೂ ಲೋಕಸಭಾ ಚುನಾವಣೆಗೂ ನಮ್ಮ ಪಕ್ಷ ಸ್ಪರ್ಧೆ ನಡೆಸಲಿದೆ ಎಂದು ತಿಳಿಸಿದರು. ಬರುವ ಮಾರ್ಚ್ ೪ರ ಬೆಳಿಗ್ಗೆ ೧೧ ಗಂಟೆಗೆ ನಗರದ ಹೈಸ್ಕೂಲ್ ಮೈದಾನದಲ್ಲಿ ಆಮ್ ಆದ್ಮಿ ಪಾರ್ಟಿಯಿಂದ ಸಮಾವೇಶ ಹಮ್ಮಿಕೊಂಡಿದ್ದು, ಪಕ್ಷದ ನಾಯಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಪಂಜಾಬ್ ಮುಖ್ಯಮಂತ್ರಿ ಭಗವತ್ ಸಿಂಗ್ ಮಾನ್ ಉದ್ಘಾಟಿಸಲಿದ್ದಾರೆ. ಪೂರ್ಣ ಪ್ರಮಾಣದಲ್ಲಿ ಪಕ್ಷದ ಕಾರ್ಯಕರ್ತರಾಗಿ ದುಡಿಯುತ್ತಿರುವ ೨೫ ಸಾವಿರ ಕಾರ್ಯಕರ್ತರು ಸೇರಿದಂತೆ ಬೃಹತ್ ಪ್ರಮಾಣದ ಸಾರ್ವಜನಿಕರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ದೇಶ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಪಕ್ಷದ ದುರಾಡಳಿತ ಕಂಡು ಜನರು ಬೇಸತ್ತಿದ್ದು, ಹೊಸತನವನ್ನು ಬಯಸಿದ್ದಾರೆ. ಈಗ ಚುನಾವನೆ ಬರುವುದನ್ನೇ ಕಾದಿದ್ದು, ದೆಹಲಿಯಲ್ಲಿ ತನ್ನ ಸ್ವಂತ ಬಲದಿಂದ ಶೂನ್ಯದಿಂದ ಸಾಧನೆ ಮಾಡಿರುವ ಎಎಪಿ ಬಗ್ಗೆ ಜನರು ಒಲವು ಹೊಂದಿದ್ದು, ನಮ್ಮ ಪಕ್ಷಕ್ಕೆ ಬೆಂಬಲಿಸುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದರು.
ಪಂಜಾಬ್‌ನಲ್ಲಿ ಖಲಿಸ್ತಾನಿಗಳು ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದ ಘಟನೆಯ ಕುರಿತ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಚಂದ್ರು, ಈ ಘಟನೆಯನ್ನು ಮುಂದಿಟ್ಟುಕೊಂಡು ಆಮ್ ಆದ್ಮಿ ಪಾರ್ಟಿ ಸರ್ಕಾರದ ಮೇಲೆ ಗೂಬೆ ಕೂರಿಸುವ ಯತ್ನ ನಡೆಸಲಾಗುತ್ತಿದೆ ಎಂದು ದೂಷಿಸಿದರು. ನಮಗೆ ಕೇಂದ್ರ ಸರ್ಕಾರದಿಂದ ಬೆಂಬಲ, ಸಹಕಾರ ಸಿಗುತ್ತಿಲ್ಲ. ನಮಗೆ ಕೆಟ್ಟ ಹೆಸರು ಬರಬೇಕೆಂದು ಕೇಂದ್ರ ಸರ್ಕಾರ ಪ್ರಯತ್ನ ನಡೆಸಿದೆ. ಈ ಘಟನೆಯನ್ನು ಮಂದಿಟ್ಟುಕೊಂಡು ಪಕ್ಷ ಮುಗಿಸುವ ಸಂಚು ನಡೆಸಿದ್ದಾರೆ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ರುದ್ರಯ್ಯ ಹಿರೇಮಠ್, ಜಿಲ್ಲಾ ಅಧ್ಯಕ್ಷ ಚಂದ್ರು ಬಸವಂತಪ್ಪ, ಸಂಘಟನಾ ಕಾರ್ಯದರ್ಶಿ ಆದಿಲ್ ಖಾನ್, ಜಂಟಿ ಕಾರ್ಯದರ್ಶಿ ಗುರುಮೂರ್ತಿ, ಜಿಲ್ಲಾ ಕಾರ್ಯದರ್ಶಿ ಅರುಣ್ ಸೇರಿದಂತೆ ಇತರೆ ವಿವಿಧ ಕ್ಷೇತ್ರಗಳ ಆಕಾಂಕ್ಷಿಗಳಾದ ಮಲ್ಲಿನಾಥ್, ಗೋವಿಂದ ರಾಜು, ಶ್ರೀಧರ ಪಾಟೀಲ್, ಬಿ. ರಾಜಶೇಖರ್, ಕಂಚಿಕೆರೆ ಜಯಣ್ಣ, ಇಂಧೂಧರ್ ಇದ್ದರು.