ರಾಜ್ಯಕ್ಕೆ ಬರಲಿದೆ ವಿದ್ಯುತ್ ಕ್ಷಾಮ

ಸಂಪಾದಕೀಯ
Advertisement

ವಿದ್ಯುತ್ ಕ್ಷಾಮಕ್ಕೆ ಪರಿಹಾರ ಎಂದರೆ ಉಳಿತಾಯ ಇಲ್ಲವೆ ಲೋಡ್‌ಶೆಡ್ಡಿಂಗ್. ಇವೆರಡು ಬೇಡ ಎಂದರೆ ಹೆಚ್ಚಿನ ದರಕ್ಕೆ ವಿದ್ಯುತ್ ಖರೀದಿ ಅನಿವಾರ್ಯ.

ರಾಜ್ಯಕ್ಕೆ ಮಳೆರಾಯ ಕೈ ಕೊಟ್ಟಿದ್ದಾನೆ. ಜಲ ವಿದ್ಯುತ್ ಕೇಂದ್ರಗಳಲ್ಲಿರುವ ನೀರಿನ ಸಂಗ್ರಹ ಡಿಸೆಂಬರ್ ವೇಳೆಗೆ ಖಾಲಿಯಾಗಲಿದೆ. ಕಲ್ಲಿದ್ದಲು ಮತ್ತು ಸೌರ ವಿದ್ಯುತ್ ಅವಲಂಬನೆ ಎಂದರೆ ಹೆಚ್ಚಿನ ದರ ಪಾವತಿಸಬೇಕು. ರಾಜ್ಯದಲ್ಲಿ ಈಗ ಪ್ರತಿದಿನ ೨೮೪ ದಶಲಕ್ಷ ಯೂನಿಟ್ ಬಳಕೆಯಾಗುತ್ತಿದೆ. ಇದು ಇನ್ನೂ ಅಧಿಕಗೊಳ್ಳಲಿದೆ. ಜಲ ವಿದ್ಯುತ್ ಕೇಂದ್ರಗಳು ಪ್ರತಿದಿನ ೫೪ ದಶಲಕ್ಷ ಯೂನಿಟ್, ಸೋಲಾರ್ ೪೪ ಮತ್ತು ಪವನ ವಿದ್ಯುತ್ ೨೬ ದಶಲಕ್ಷ ಯೂನಿಟ್ ನೀಡುತ್ತಿದೆ. ಕಲ್ಲಿದ್ದಲು ಬಳಕೆಯಿಂದ ೩೬ ದಶಲಕ್ಷ ಯೂನಿಟ್ ವಿದ್ಯುತ್ ಪಡೆಯುತ್ತಿದ್ದೇವೆ. ಇದು ಎಷ್ಟು ದಿನ ಮುಂದುವರಿಯುತ್ತದೋ ತಿಳಿಯದು. ಅದಕ್ಕಾಗಿ ಈಗಿನಿಂದಲೇ ವಿದ್ಯುತ್ ಉಳಿತಾಯ ಕೈಗೊಳ್ಳುವುದು ಅನಿವಾರ್ಯ. ಎಸಿ ಬಳಸುವವರು ಕಡಿತಗೊಳಿಸಬೇಕು. ಮೋಜಿನ ತಾಣಗಳಲ್ಲಿ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಬೇಕು. ಸರ್ಕಾರಿ ಕಚೇರಿಗಳ ಮೇಲೆ ಸೌರ ಫಲಕ ಅಳವಡಿಸಿದರೆ ಹೆಚ್ಚು ವಿದ್ಯುತ್ ಉಳಿಸಬಹುದು. ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ವಿದ್ಯುತ್ ಬೇಕೇ ಬೇಕು. ನೀರಾವರಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಬಳಕೆ ನಿಲ್ಲಿಸಲು ಬರುವುದಿಲ್ಲ. ಆದರೆ ಬಾವಿಗಳಲ್ಲಿ ನೀರು ಇರಬೇಕು. ಅಲ್ಲದೆ ಬೆಳೆಗಳು ಒಣಗಿದ್ದರೆ ನೀರನ್ನು ಪಂಪ್ ಮಾಡಿದರೂ ಉಪಯೋಗವಾಗುವುದಿಲ್ಲ. ಉತ್ತರ ಕರ್ನಾಟಕದಲ್ಲಿ ನದಿ ಪಾತ್ರದಿಂದ ನೇರವಾಗಿ ಪಂಪ್ ಮಾಡುವ ಅಭ್ಯಾಸವಿದೆ. ಇದನ್ನು ತಪ್ಪಿಸುವುದು ಕಷ್ಟ.
ಕೈಗಾರಿಕೆಗಳಿಗೆ ವಿದ್ಯುತ್ ನೀಡಲೇಬೇಕು. ಇಲ್ಲದಿದ್ದಲ್ಲಿ ಆರ್ಥಿಕ ಉತ್ಪಾದನೆ ಇಳಿಮುಖಗೊಳ್ಳುತ್ತದೆ. ಅದರಿಂದ ಜನ ಸ್ವಯಂಪ್ರೇರಣೆಯಿಂದ ಮನೆಗಳಲ್ಲಿ ವಿದ್ಯುತ್ ಬಳಕೆಯನ್ನು ಕಡಿತಗೊಳಿಸಿದರೆ ಉಪಯೋಗವಾಗುತ್ತದೆ. ನಮ್ಮ ಮನೆಯ ಒಂದು ಬಲ್ಬ್ನಿಂದ ಏನು ಉಳಿತಾಯವಾಗುತ್ತದೆ ಎಂದು ಹೇಳುವವರೂ ಇದ್ದಾರೆ. ಅದರಲ್ಲೂ ಪಂಚತಾರಾ ಹೋಟೆಲ್ ಮತ್ತಿತರ ಮೋಜಿನ ತಾಣಗಳಲ್ಲಿ ವಿದ್ಯುತ್ ಬಳಕೆ ಹೆಚ್ಚು. ಜನರೇಟರ್ ಬಳಸಿದರೂ ಅದಕ್ಕೆ ಡೀಸೆಲ್ ಬೇಕು. ಯಾವ ಹೋಟೆಲ್‌ನವರೂ ಸೋಲಾರ್ ವಿದ್ಯುತ್ ಪಡೆಯಲು ಮನಸ್ಸು ಮಾಡಿಲ್ಲ. ಹೀಗಿರುವಾಗ ಲೋಡ್ ಶೆಡ್ಡಿಂಗ್ ಅನಿವಾರ್ಯ. ವಿದ್ಯುತ್ ವಿತರಣ ಕಂಪನಿಗಳು ಅನಧಿಕೃತವಾಗಿ ಲೋಡ್‌ಶೆಡ್ಡಿಂಗ್ ಕೈಗೊಂಡಲ್ಲಿ ಮಾತ್ರ ವಿದ್ಯುತ್ ಉಳಿತಾಯವಾಗುತ್ತದೆ. ಲೋಡ್‌ಶೆಡ್ಡಿಂಗ್‌ಗೆ ವೇಳಾಪಟ್ಟಿ ಪ್ರಕಟಿಸಿದರೆ ಅದರಿಂದ ಉಪಯೋಗವಾಗುವುದಿಲ್ಲ.
ಜಲ ವಿದ್ಯುತ್ ಲಭ್ಯವಿದ್ದಲ್ಲಿ ನಮಗೆ ವಿದ್ಯುತ್ ಖರೀದಿ ದರ ಇಳಿಮುಖಗೊಳ್ಳುತ್ತದೆ. ಶರಾವತಿ ವಿದ್ಯುತ್ ಪ್ರತಿ ಯೂನಿಟ್‌ಗೆ ೩೦ ಪೈಸೆ ಮಾತ್ರ. ಕಲ್ಲಿದ್ದಲು ಆಧರಿತ ವಿದ್ಯುತ್ ಪ್ರತಿ ಯೂನಿಟ್‌ಗೆ ಸರಾಸರಿ ೩.೩೦ ರೂ. ನೀಡಬೇಕು. ಸೋಲಾರ್ ದರ ೧೦ ರೂ. ಇದೆ. ಇದೆಲ್ಲವನ್ನೂ ನೋಡಿದಾಗ ಮುಂದಿನ ದಿನಗಳಲ್ಲಿ ವಿದ್ಯುತ್ ಖರೀದಿ ದರ ಅಧಿಕಗೊಳ್ಳುವುದು ಖಚಿತ. ಎಲ್ಲ ವಿತರಣ ಕಂಪನಿಗಳು ಪ್ರತಿ ತಿಂಗಳೂ ವಿದ್ಯುತ್ ಇಂಧನ ಖರೀದಿ ದರ ಹೆಚ್ಚಳಕ್ಕೆ ತಕ್ಕಂತೆ ವಿದ್ಯುತ್ ದರವನ್ನು ಹೆಚ್ಚಿಸಲು ಕೆಇಅರ್‌ಸಿಯಿಂದ ಅನುಮತಿ ಪಡೆದಿದೆ. ಹೀಗಾಗಿ ಅಯಾ ತಿಂಗಳೇ ವಿದ್ಯುತ್ ಇಂಧನ ದರ ಬಿಲ್‌ನಲ್ಲಿ ಬಂದು ಬಿಡುತ್ತದೆ. ಈಗ ಕಡು ಬಡವರಿಗೆ ಸರ್ಕಾರ ಉಚಿತ ವಿದ್ಯುತ್ ಒದಗಿಸುವುದರಿಂದ ಜನಸಾಮಾನ್ಯರಿಗೆ ಹೆಚ್ಚಿನ ಹೊರೆ ಬೀಳುವುದಿಲ್ಲ. ಆದರೆ ವಿದ್ಯುತ್ ಲೋಡ್‌ಶೆಡ್ಡಿಂಗ್‌ನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಕೇಂದ್ರ ಸರ್ಕಾರ ಈಗಾಗಲೇ ವಿದೇಶಿ ಕಲ್ಲಿದ್ದಲು ಖರೀದಿಸಲು ಆಯಾ ರಾಜ್ಯ ಸರ್ಕಾರಗಳಿಗೆ ತಿಳಿಸಿದೆ. ಇದು ಇನ್ನೂ ವಿದ್ಯುತ್ ದರವನ್ನು ಹೆಚ್ಚಿಸಲಿದೆಯೇ ಹೊರತು ಕಡಿಮೆ ಮಾಡುವುದಿಲ್ಲ.
ಹಿಂದೆ ಹಲವು ಬಾರಿ ರಾಜ್ಯ ವಿದ್ಯುತ್ ಕ್ಷಾಮವನ್ನು ಕಂಡಿದೆ. ಆಗ ವಿದ್ಯುತ್ ಬಳಕೆಯಲ್ಲಿ ಮಿತವ್ಯಯದ ಮೂಲಕ ಪರಿಹಾರ ಕಂಡುಕೊಳ್ಳಲಾಯಿತು. ಈಗ ಕೈಗಾರಿಕೆ ಮತ್ತು ವಾಣಿಜ್ಯ ಬಳಕೆದಾರರಿಗೆ ಮಿತಿ ಹೇರಲು ಬರುವುದಿಲ್ಲ. ಲೋಡ್‌ಶೆಡ್ಡಿಂಗ್ ಮಾಡಿದರೂ ಜನ ಅತಿ ಹೆಚ್ಚು ವಿದ್ಯುತ್ ಬಳಸುವ ಸಮಯದಲ್ಲಿ ಜಾರಿಗೆ ತರಬೇಕು. ಅದರಲ್ಲೂ ನಗರ ಪ್ರದೇಶದಲ್ಲಿ ಹೆಚ್ಚಿನ ಮಿತಿ ಹೇರಿದರೆ ಮಾತ್ರ ವಿದ್ಯುತ್ ಉಳಿತಾಯವಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ನೀರಾವರಿ ಪಂಪ್‌ಸೆಟ್‌ಗೆ ಹೊರತುಪಡಿಸಿದಲ್ಲಿ ವಿದ್ಯುತ್ ಬಳಕೆ ಕಡಿಮೆ. ದರ ಹೆಚ್ಚಿಸಿದಲ್ಲಿ ವಿದ್ಯುತ್ ಬಳಕೆ ಇಳಿಮುಖಗೊಳ್ಳುತ್ತದೆ ಎಂಬ ಭಾವನೆ ಕೆಲವರಲ್ಲಿದೆ. ಕಡು ಬಡವರಿಗೆ ಅದರಿಂದ ತೊಂದರೆಯಾಗುತ್ತದೆಯೇ ಹೊರತು ಶ್ರೀಮಂತರಿಗಲ್ಲ. ಅವರು ಹಣ ನೀಡಲು ಸಿದ್ಧವಿರುತ್ತಾರೆ. ಅವರ ಬಳಕೆ ಕಡಿಮೆ ಮಾಡಲು ಲೋಡ್‌ಶೆಡ್ಡಿಂಗ್ ಅನಿವಾರ್ಯ.