ರಾಜ್ಯದಲ್ಲಿ ಕಾಲರಾ ಅಬ್ಬರ

Advertisement

ಬೆಂಗಳೂರು: ರಾಜ್ಯದಲ್ಲಿ ಕಾಲರಾ ಅಬ್ಬರ ಹೆಚ್ಚಾಗಿದ್ದು, ಇಂದು ಬೆಂಗಳೂರಿನಲ್ಲಿ ಮತ್ತೊಬ್ಬರಿಗೆ ಕಾಲರಾ ಸೋಂಕು ದೃಢಪಟ್ಟಿದ್ದು, ಈ ಮೂಲಕ ರಾಜ್ಯದಲ್ಲಿ ಕಾಲರಾ ಸೋಂಕಿತರ ಸಂಖ್ಯೆ ೧೦ ಕ್ಕೆ ಏರಿಕೆಯಾಗಿದೆ.
ಕಾರು ಚಾಲಕನಿಗೆ ಕಾಲರಾ ಸೋಂಕು ಇರುವುದು ದೃಢಪಟ್ಟಿದ್ದು, ವಾಂತಿ, ಭೇದಿ ಹಿನ್ನೆಲೆಯಲ್ಲಿ ಬೊಮ್ಮನಹಳ್ಳಿ ವ್ಯಾಪ್ತಿಯ ಕಾರು ಚಾಲಕ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದು, ಆತನ ಮಲದ ಪರೀಕ್ಷೆಯ ವರದಿಯಲ್ಲಿ ಕಾಲರಾ ಸೋಂಕು ಇರುವುದು ದೃಢಪಟ್ಟಿದೆ.
ಬೆಂಗಳೂರಿನಲ್ಲಿ ಶನಿವಾರ ಇಬ್ಬರು ಮೆಡಿಕಲ್ ವಿದ್ಯಾರ್ಥಿನಿಯರಿಗೆ ಕಾಲರಾ ಸೋಂಕು ದೃಢಪಟ್ಟಿದ್ದು, ಇದೀಗ ಮತ್ತೊಂದು ಪ್ರಕರಣ ಪತ್ತೆಯಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಮೂರು ಪ್ರಕರಣಗಳು, ರಾಮನಗರ ಜಿಲ್ಲೆಯಲ್ಲಿ ಒಂದು ಪ್ರಕರಣ ಸೇರಿದಂತೆ ರಾಜ್ಯದಲ್ಲಿ ಈವರೆಗೆ ಕಾಲರಾ ಸೋಂಕಿತರ ಸಂಖ್ಯೆ ೧೦ಕ್ಕೆ ಏರಿಕೆಯಾಗಿದೆ. ಇದರಿಂದ ಎಲ್ಲ ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಕಾಲರಾ ಚಿಕಿತ್ಸೆಗೆ ಹಾಸಿಗೆಗಳನ್ನು ಮೀಸಲಿರಿಸಲಾಗಿದೆ
ಈ ಬಾರಿಯೇ ಹೆಚ್ಚು: ರಾಜ್ಯದಲ್ಲಿ ಕಾಲರಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಕಳೆದ ೪ ವರ್ಷಗಳ ಕಾಲರಾ ಪ್ರಕರಣಗಳ ಅಂಕಿ ಅಂಶಗಳನ್ನು ನೋಡಿದರೆ, ಪ್ರತಿವರ್ಷ ಕ್ರಮವಾಗಿ ೩೦, ೪೦, ೪೮ ಪ್ರಕರಣಗಳು ದಾಖಲಾಗಿದೆ. ಆದರೆ, ಈ ಬಾರಿ ಈಗಾಗಲೇ ಬೆಂಗಳೂರಿನ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ೬ ರಿಂದ ೭ ಪ್ರಕರಣಗಳು ವರದಿಯಾಗಿವೆ.
ಹಾಸ್ಟೆಲ್ ತೊರೆದ ವಿದ್ಯಾರ್ಥಿನಿಯರು: ಬಿಎಂಸಿ ಹಾಸ್ಟೆಲ್‌ನಲ್ಲಿ ಇಬ್ಬರಿಗೆ ಕಾಲರಾ ದೃಢವಾಗಿದ್ದು, ಈ ಹಿನ್ನೆಲೆಯಲ್ಲಿ ಭಯಗೊಂಡ ಉಳಿದ ವಿದ್ಯಾರ್ಥಿಗಳು ಹಾಸ್ಟೆಲ್ ಖಾಲಿ ಮಾಡುತ್ತಿದ್ದಾರೆ. ಅಸ್ವಸ್ಥ ೪೯ ವಿದ್ಯಾರ್ಥಿಗಳ ಪೈಕಿ ೨೨ ವಿದ್ಯಾರ್ಥಿನಿಯರ ಕಾಲರಾ ತಪಾಸಣಾ ವರದಿ ಇಬ್ಬರಲ್ಲಿ ಕಾಲರಾ ಇರುವುದು ದೃಢಪಟ್ಟಿದೆ. ಉಳಿದವರ ವರದಿ ಸೋಮವಾರ ಕೈಸೇರಲಿದ್ದು, ಮತಷ್ಟು ಆತಂಕ ಹೆಚ್ಚಿದೆ. ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದ ಹಾಸ್ಟೆಲ್ ೨೧ ವಿದ್ಯಾರ್ಥಿಗಳು ಇಂದು ಡಿಸ್ಚಾರ್ಜ್ ಆಗಲಿದ್ದಾರೆ. ಇನ್ನುಳಿದ ವಿದ್ಯಾರ್ಥಿಗಳಿಗೆ ಚಿಕಿತ್ಸೆ ಮುಂದುವರಿಕೆಯಾಗಲಿದೆ. ಸದ್ಯ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳ ಆರೋಗ್ಯ ಸ್ಥಿರವಾಗಿದ್ದು, ಇಬ್ಬರು ವಿದ್ಯಾರ್ಥಿನಿಯರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾಲರಾ ಸೋಂಕು ಭೀತಿಯಿಂದ ಕೆಲವು ಮೆಡಿಕಲ್ ವಿದ್ಯಾರ್ಥಿನಿಯರು ಲಗೇಜ್ ಸಮೇತ ಹಾಸ್ಟೆಲ್ ಖಾಲಿ ಮಾಡಿದರೆ ಇನ್ನೂ ಕೆಲವರು ಬೇರೆ ಹಾಸ್ಟೆಲ್‌ಗೆ ಶಿಫ್ಟ್ ಆಗುತ್ತಿದ್ದಾರೆ. ಉಳಿದುಕೊಂಡ ವಿದ್ಯಾರ್ಥಿನಿಯರು ಆಹಾರಕ್ಕಾಗಿ ಸ್ವಿಗ್ಗಿ, ಝೋಮೆಟೋ ಮೊರೆ ಹೋಗುತ್ತಿದ್ದಾರೆ.