ರಾಜ್ಯದಲ್ಲಿ ಹಿಂದು ವಿರೋಧಿ ಸರ್ಕಾರ

Advertisement

ಗಂಗಾವತಿ: ರಾಜ್ಯದಲ್ಲಿ ಹಿಂದೂ ವಿರೋಧಿ ಸರ್ಕಾರವಿದೆ ಎಂದು ಜರಿದಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಅಯೋಧ್ಯೆಯಲ್ಲಿ ನಡೆಯುವ ರಾಮಲಲ್ಲಾ ಪ್ರತಿಷ್ಠಾಪನೆಗೆ ಕೇಂದ್ರ ಹಾಗೂ ೧೫ಕ್ಕೂ ಹೆಚ್ಚು ರಾಜ್ಯಗಳು ರಜೆ ಘೋಷೆಣೆ ಮಾಡಿದ್ದರೂ ನಮ್ಮಲ್ಲಿ ಆಗಿಲ್ಲ. ಮುಖ್ಯಮಂತ್ರಿಗಳು ಇನ್ನಾದರೂ ತಮ್ಮ ಧೋರಣೆ ಬದಲಿಸಿಕೊಳ್ಳಬೇಕು. ಬಿಜೆಪಿ ಸರ್ಕಾರ ಇದ್ದಾಗ ಅಂಜನಾದ್ರಿ ಅಭಿವೃದ್ಧಿಗೆ ಮಂಜೂರಾದ ೧೨೦ ಕೋಟಿ ಅನುದಾನ ಶೀಘ್ರ ಬಿಡುಗಡೆ ಮಾಡಿ ಅಭಿವೃದ್ಧಿಗೆ ಸಹಕರಿಸಬೇಕು.
ಅಂಜನಾದ್ರಿ ಸ್ವಚ್ಛವಾಗಿಡಲು ಸರ್ವರೂ ಕೈಜೋಡಿಸಬೇಕು ಎಂದು ಆಗ್ರಹಿಸಿದ್ದಾರೆ.
ತಾಲೂಕಿನ ಅಂಜನಾದ್ರಿ ಆಂಜನೇಯನ ಸ್ಥಳದಲ್ಲಿ ಸ್ವಚ್ಛ ಭಾರತ ಪರಿಕಲ್ಪನೆಯಡಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿ ಸಚಿವರು ಮಾತನಾಡಿದರು.
ಅಂಜನಾದ್ರಿ ಅಭಿವೃದ್ಧಿ ಬಗ್ಗೆ ಈಗಾಗಲೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಗಮನಕ್ಕೆ ತರಲಾಗಿದೆ. ಅಯೋಧ್ಯೆಯಂತೆ ಅಂಜನಾದ್ರಿಯೂ ಕಂಗೊಳಿಸುವಂತೆ ಮೋದಿಜೀಯವರು ಮಾಡುತ್ತಾರೆ. ರ‍್ವೆಲ್ವೆ ಸಚಿವರೊಂದಿಗೆ ನಾನು, ಸಚಿವ ಪ್ರಹ್ಲಾದ ಜೋಶಿ ಹಾಗೂ ಸಂಸದ ಸಂಗಣ್ಣ ಕರಡಿಯವರು ಸೇರಿ ಚರ್ಚಿಸಿ ಅಯೋಧ್ಯೆಯಿಂದ ಅಂಜನಾದ್ರಿಗೆ ರೈಲ್ವೆ ವ್ಯವಸ್ಥೆ ಮಾಡುತ್ತೇವೆ. ಶ್ರೀರಾಮಾಂಜನೇಯ ಕಾರಿಡಾರ ಬಗ್ಗೆಯೂ ಚರ್ಚಿಸುತ್ತೇನೆ ಎಂದರು.
ಸಂಸದ ಸಂಗಣ್ಣ ಕರಡಿ, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ವಿಪ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಅನೇಕ ಮುಖಂಡರು ಹಾಜರಿದ್ದರು.