ರಾಜ್ಯದ ಪದವಿಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ

ಶಿಕ್ಷಕ
Advertisement

ಬೆಂಗಳೂರು: ಪದವಿ ಪೂರ್ವ ಕಾಲೇಜುಗಳು ಆರಂಭವಾಗಿ ತರಗತಿಗಳು ನಡೆಯುತ್ತಿವೆ. ಆದರೆ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ವಿಷಯ ಬೋಧಿಸಲು ಉಪನ್ಯಾಸಕರು ಇಲ್ಲದಂತಾಗಿದೆ.
ರಾಜ್ಯದಲ್ಲಿ ೫ ಸಾವಿರಕ್ಕೂ ಹೆಚ್ಚು ಉಪನ್ಯಾಸಕರ ಹುದ್ದೆಗಳು ಒಂದು ವರ್ಷದಿಂದ ಖಾಲಿ ಇವೆ.
ಕಳೆದ ವರ್ಷ ರಾಜ್ಯದ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ೧೨,೮೫೮ ಹುದ್ದೆಗಳು ಮಂಜೂರಾಗಿದ್ದವು. ಇವುಗಳಲ್ಲಿ ೮,೯೧೭ ಉಪನ್ಯಾಸಕರು ಮಾತ್ರ ಸೇವೆ ಸಲ್ಲಿಸುತ್ತಿದ್ದರು. ಕಳೆದ ವರ್ಷ ೩,೯೪೧ ಹುದ್ದೆಗಳು ಖಾಲಿ ಇದ್ದವು. ಈ ವರ್ಷ ೫ ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಗೊಂದಲ ಎದುರಾಗಿದ್ದು ನಿಗದಿತ ಸಮಯಕ್ಕೆ ಉಪನ್ಯಾಸಕ ನೇಮಕ ನಡೆಯುತ್ತಿಲ್ಲ. ಕಡಿಮೆ ಸಂಬಳ ಸೇರಿದಂತೆ ಹಲವು ಸಮಸ್ಯೆಗಳಿಂದ ನೇಮಕಾತಿಗೆ ಉಪನ್ಯಾಸಕರು ಆಸಕ್ತಿ ತೋರುತ್ತಿಲ್ಲ ಎನ್ನಲಾಗಿದೆ.

ದೈಹಿಕ ಉಪನ್ಯಾಸಕರೂ ಇಲ್ಲ
ರಾಜ್ಯದಲ್ಲಿ ವಿಷಯವಾರು ಉಪನ್ಯಾಸಕರ ಕೊರತೆ ಜತೆ ದೈಹಿಕ ಶಿಕ್ಷಣ ಉಪನ್ಯಾಸಕರು ಇಲ್ಲದಂತಾಗಿದೆ. ರಾಜ್ಯದ ೧,೨೦೦ಕ್ಕೂ ಅಧಿಕ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ದೈಹಿಕ ಉಪನ್ಯಾಸಕರ ಹುದ್ದೆಗಳು ಇಲ್ಲ.
ಪದವಿಪೂರ್ವ ಕಾಲೇಜುಗಳಲ್ಲಿ ದೈಹಿಕ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಬೇಕು ಎನ್ನುವ ಸೂಚನೆ ಇದ್ದರೂ ಇಲಾಖೆ ಕ್ರಮ ವಹಿಸುತ್ತಿಲ್ಲ.
ಅನುದಾನಿತ ಪಿಯು ಹಾಗೂ ಖಾಸಗಿ ಪಿಯು ಕಾಲೇಜುಗಳಲ್ಲಿ ಶೇ.೯೦ರಷ್ಟು ದೈಹಿಕ ಉಪನ್ಯಾಸಕರ ಹುದ್ದೆಗಳು ಇವೆ. ಸರ್ಕಾರಿ ಕಾಲೇಜುಗಳಲ್ಲಿ ದೈಹಿಕ ಉಪನ್ಯಾಸಕರು ಇಲ್ಲದ ಹಿನ್ನೆಲೆಯಲ್ಲಿ ಕ್ರೀಡಾ ಸಾಧನೆ ಶೂನ್ಯವಾಗಿದೆ.

ಬಿಸಿನೆಸ್ ಸ್ಟಡೀಷ್ ಅಧಿಕ ಖಾಲಿ
ರಾಜ್ಯದ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಬಿಸಿನೆಸ್ ಸ್ಟಡೀಸ್ ಉಪನ್ಯಾಸಕರ ಕೊರತೆ ಅಧಿಕವಾಗಿದೆ. ಈ ವಿಷಯದ ಉಪನ್ಯಾಸಕರ ೫೦೧ ಹುದ್ದೆಗಳು ಖಾಲಿಯಾಗಿ ೫ ವರ್ಷ ಕಳೆದರೂ ಇನ್ನು ಭರ್ತಿಯಾಗಿಲ್ಲ. ಬಹುತೇಕ ಕಾಲೇಜುಗಳು ಅತಿಥಿ ಉಪನ್ಯಾಸಕರನ್ನೇ ಅವಲಂಬಿಸಿವೆ.

೧೨೩೨ ಸರ್ಕಾರಿ ಪಿಯು ಕಾಲೇಜುಗಳು
ರಾಜ್ಯದಲ್ಲಿ ೧,೨೩೨ ಸರ್ಕಾರಿ ಪಿಯು ಕಾಲೇಜುಗಳು ಇವೆ. ಅಲ್ಲದೆ ಸರ್ಕಾರಿ ಅನುದಾನಿತ ೭೯೭ ಕಾಲೇಜುಗಳು, ೧೬೧ ಸಂಯೋಜಿತ ಪಿಯು ಕಾಲೇಜುಗಳು ಮತ್ತು ೧೩ ಪಾಲಿಕೆ ಕಾಲೇಜುಗಳು ಇವೆ. ಇವುಗಳಿಗೆ ೧೨,೮೫೮ ಹುದ್ದೆಗಳು ಮಂಜೂರಾಗಿವೆ. ಸದ್ಯ ಇಷ್ಟು ಕಾಲೇಜುಗಳಲ್ಲಿ ೮೯೧೭ ಉಪನ್ಯಾಸಕರು ಪಾಠ ಹೇಳುತ್ತಿದ್ದಾರೆ.

ಸಿಎಂ ತವರು ಜಿಲ್ಲೆಯಲ್ಲಿ ೧೨೧ ಹುದ್ದೆ ಖಾಲಿ
ಸಿಎಂ ಅವರ ತವರು ಜಿಲ್ಲೆ ಮೈಸೂರಿನಲ್ಲಿ ೧೨೧ ಉಪನ್ಯಾಸಕರ ಹುದ್ದೆಗಳು ಖಾಲಿ ಇವೆ. ಜಿಲ್ಲೆಯಲ್ಲಿ ೭೪ ಸರ್ಕಾರಿ ಪದವಿಪೂರ್ವ ಕಾಲೇಜುಗಳಿವೆ. ಮಂಜೂರಾದ ೭೯೮ ಹುದ್ದೆಗಳ ಪೈಕಿ ೬೭೭ ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಉಳಿದ ಹುದ್ದೆಗಳು ಖಾಲಿ ಇವೆ.

೪೬೮೯ ಅತಿಥಿ ಉಪನ್ಯಾಸಕರ ನೇಮಕ
ಸರ್ಕಾರ ೨೦೨೪-೨೫ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿಯಿರುವ ಉಪನ್ಯಾಸಕರ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಆದೇಶ ಹೊರಡಿಸಿದೆ. ಒಟ್ಟು ೪೬೮೯ ಉಪನ್ಯಾಸಕರ ಹುದ್ದೆಗಳಿಗೆ ಮಾಸಿಕ ರೂ. ೧೨,೦೦೦ ಗೌರವಧನದ ಆಧಾರದಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಕಾತಿ ಮಾಡಿಕೊಳ್ಳಲು ಆದೇಶಿಸಿದೆ.