ರಾಜ್ಯದ ಮಂತ್ರಿಗಳಿಗೆ ಕೈತುಂಬಾ ಕೆಲಸ

Advertisement

ಮಂತ್ರಿ ಮಂಡಲ ಸದಸ್ಯರಿಗೆ ಖಾತೆ ನಿಯೋಜಿಸುವುದು ಎಂತಹ ಚಾಣಾಕ್ಷ ಪ್ರಧಾನಿಗೂ ಒಂದು ದೊಡ್ಡ ಸವಾಲು. ಏಕೆಂದರೆ, ಭೌಗೋಳಿಕ ಪ್ರಾತಿನಿಧ್ಯದ ಜೊತೆಗೆ ವರ್ಗ ಆಧರಿತ ಪ್ರಾತಿನಿಧ್ಯವನ್ನೂ ಕಲ್ಪಿಸಿ ದಕ್ಷತೆ ಹಾಗೂ ಪ್ರತಿಭೆಗೆ ಅವಕಾಶ ಕಲ್ಪಿಸುವ ಮೂಲಕ ಸರ್ಕಾರದ ಆಡಳಿತಕ್ಕೆ ಹೊಸ ರೂಪವನ್ನು ನೀಡುವ ಮಹಾತ್ವಾಕಾಂಕ್ಷಿ ಕಾಯಕ ಅಂದುಕೊಂಡಷ್ಟು ಸುಲಭವಲ್ಲ. ಅದರಲ್ಲೂ ಭಾರತದಂತಹ ವೈವಿಧ್ಯಮಯ ಹಾಗೂ ಬಹುತ್ವದ ವಿವಿಧ ನೆಲೆಗಳ ದೇಶದಲ್ಲಿ ಒಮ್ಮತದ ಭಾವವನ್ನು ಮೂಡಿಸುವ ಖಾತೆಗಳ ಹಂಚಿಕೆ ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ನಿಸೂರಾಗಿ ಮುಗಿದಿರುವುದು ಒಳ್ಳೆಯ ಬೆಳವಣಿಗೆ. ಹಾಗೆಂದಾಕ್ಷಣ, ಖಾತೆಗಳ ಹಂಚಿಕೆಯಿಂದ ಸಚಿವರೆಲ್ಲರಿಗೂ ಸಂತೃಪ್ತಿಯಾಗಿದೆ ಎಂದೇನೂ ಅಲ್ಲ. ಸಂತೃಪ್ತಗೊಳಿಸುವುದು ಪ್ರಧಾನಿಯ ಕೆಲಸವೂ ಅಲ್ಲ. ಒಂದರ್ಥದಲ್ಲಿ ಸಂತೃಪ್ತದ ಭಾವ ಯಥಾಸ್ಥಿತಿಯ ಭಾವ. ಹೊಸತನ ತರಬೇಕಾದರೆ ಅತೃಪ್ತಿಯ ನೆರಳು ಇರಲೇಬೇಕು. ಈ ದೃಷ್ಟಿಕೋನದಿಂದ ನೋಡಿದಾಗ ಸಂಪುಟ ಸದಸ್ಯರಿಗೆ ಕರ್ತವ್ಯ ನಿಯೋಜಿಸಿರುವ ಪ್ರಧಾನಿಯವರ ವಿವೇಚನಾತ್ಮಕ ಕ್ರಮದಲ್ಲಿ ಜಾಣತನದ ಜೊತೆಗೆ ದೂರದೃಷ್ಟಿಯೂ ಎದ್ದು ಕಾಣುತ್ತದೆ.
ಮಂತ್ರಿ ಮಂಡಲದ ಸೇರ್ಪಡೆಗೆ ಸಂಬಂಧಿಸಿದಂತೆ ಇನ್ನೂ ಚೌಕಾಶಿ ಮಾತುಕತೆಗಳು ನಡೆದಂತೆ ಕಾಣುತ್ತಿದೆ. ಮಹಾರಾಷ್ಟ್ರದ ಶಿವಸೇನೆ ಹಾಗೂ ಎನ್‌ಸಿಪಿ ಸಂಸದರಿಗೆ ಸಚಿವ ಸ್ಥಾನ ಕೊಡುವ ಬಗ್ಗೆ ಬಹುಶಃ ಯಾರ ತಕರಾರೂ ಇಲ್ಲ. ಎದ್ದಿರುವ ತಕರಾರೆಂದರೆ ಸಚಿವ ಸ್ಥಾನದ ಸ್ವರೂಪದ ಬಗ್ಗೆ. ಸಂಪುಟ ದರ್ಜೆ ಬೇಕೆಂಬುದು ಶಿವಸೇನೆ ಮತ್ತು ಎನ್‌ಸಿಪಿ ಪಟ್ಟು. ಪ್ರಧಾನಿ ನಿಷ್ಠರ ದೃಷ್ಟಿಯಲ್ಲಿ ಸಹಾಯಕ ದರ್ಜೆ ಸ್ಥಾನ ಸಾಕು ಎಂಬುದು. ಇದರಿಂದಾಗಿ ಎನ್‌ಡಿಎ ಮಿತ್ರಪಕ್ಷಗಳಾಗಿರುವ ಇವೆರಡೂ ಪಕ್ಷಗಳಿಗೆ ಸಂಪುಟದಲ್ಲಿ ಇನ್ನೂ ಪ್ರಾತಿನಿಧ್ಯ ಸಿಕ್ಕಿಲ್ಲ. ಹಾಗೆ ನೋಡಿದರೆ ಇದೊಂದು ಕೊರತೆಯೇ. ಉಳಿದಂತೆ ಹೊಸ ಚಿಗುರು ಹಳೆ ಬೇರು ಎಂಬಂತೆ ಹಳೆ ಹುಲಿಗಳು ಹಾಗೂ ಹೊಸ ಮುಖಗಳಿಗೆ ಸಂಪುಟದಲ್ಲಿ ಅರ್ಹತೆಯನ್ನು ಗುರುತಿಸಿ ಖಾತೆಗಳನ್ನು ನೀಡಲಾಗಿದೆ. ಬಿಹಾರದ ಮಾಜಿ ಮುಖ್ಯಮಂತ್ರಿ ಹಾಜಿರಾಂ ಸಂಪುಟದ ಅತ್ಯಂತ ಹಿರಿಯ ಸದಸ್ಯ. ಆಂಧ್ರ ಪ್ರದೇಶದ ರಾಮ್ ಮೋಹ್ನ ನಾಯ್ಡು ಅತ್ಯಂತ ಕಿರಿಯ ಸದಸ್ಯ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ಜೆಪಿ. ನಡ್ಡಾ ಅವರಿಗೂ ಕೂಡಾ ಸಂಪುಟದಲ್ಲಿ ಆರೋಗ್ಯ ಖಾತೆಯನ್ನು ಮತ್ತೆ ನೀಡಿರುವುದರಿಂದ ಹೊಸಬರಿಗೆ ಪಕ್ಷದ ಅಧ್ಯಕ್ಷ ಸ್ಥಾನ ನೀಡಬೇಕಾಗಿದೆ.
ಇನ್ನು ಕರ್ನಾಟಕಕ್ಕೆ ಸಂಬಂಧಿಸಿದಂತೆ ಒಟ್ಟು ಐವರಿಗೆ ಪ್ರಾತಿನಿಧ್ಯ ಸಿಕ್ಕಿದೆ. ಈ ಪೈಕಿ ಕರ್ನಾಟಕವನ್ನು ರಾಜ್ಯಸಭೆಯಲ್ಲಿ ಪ್ರತಿನಿಧಿಸುವ ನಿರ್ಮಲಾ ಸೀತಾರಾಮನ್ ಅವರಿಗೆ ಮತ್ತೆ ಹಣಕಾಸು ಖಾತೆಯ ನಿರ್ವಹಣೆ ಒದಗಿಬಂದಿದೆ. ಸಂಸದೀಯ ಖಾತೆ ಜೊತೆ ಪೆಟ್ರೋಲಿಯಂ ಖಾತೆ ನಿರ್ವಹಿಸುತ್ತಿದ್ದ ಪ್ರಹ್ಲಾದ್ ಜೋಶಿಯವರಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ, ನವೀಕರಿಸಬಹುದಾದ ಇಂಧನ ಇಲಾಖೆಯ ನಿರ್ವಹಣೆಯನ್ನು ವಹಿಸಲಾಗಿದೆ. ಅಚ್ಚರಿಯ ಬೆಳವಣಿಗೆಯಲ್ಲಿ ಕೃಷಿ ಖಾತೆಯ ಮೇಲೆ ಆಸಕ್ತಿ ವಹಿಸಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ ನಿರ್ವಹಣೆಯ ಜವಾಬ್ದಾರಿ ಸಿಕ್ಕಿರುವುದು ರಾಜ್ಯದ ಔದ್ಯಮಿಕ ಪ್ರಗತಿಗೆ ಅನುಕೂಲ ಒದಗಿಸಿದೆ. ಇದಕ್ಕೆ ಪೂರಕವಾಗಿ ಸಹಾಯಕ ದರ್ಜೆ ಮಂತ್ರಿಯಾಗಿರುವ ಶೋಭಾ ಕರಂದ್ಲಾಜೆ ಅವರಿಗೆ ಸೂಕ್ಷö್ಮ ಮತ್ತು ಸಣ್ಣ, ಮಧ್ಯಮ ಕೈಗಾರಿಕೆ (ಎಂಎಸ್‌ಎಂ) ಖಾತೆ ನಿರ್ವಹಣೆ ಹೊಣೆ ಬಂದಿರುವುದರಿಂದ ಇವರಿಬ್ಬರ ಹೊಂದಾಣಿಕೆಯಿಂದ ಕೈಗಾರಿಕಾ ಕ್ಷೇತ್ರ ಪ್ರಗತಿಯತ್ತ ದಾಪುಗಾಲು ಹಾಕಲು ಅವಕಾಶವಾಗಿದೆ. ಇದೇ ಮೊದಲ ಬಾರಿಗೆ ಸಂಸದರಾಗಿರುವ ವಿ. ಸೋಮಣ್ಣ ಅವರು ಜಲಶಕ್ತಿ ಹಾಗೂ ರೈಲ್ವೆ ಖಾತೆ ಸಹಾಯಕ ಮಂತ್ರಿಯಾಗಿರುವುದರಿಂದ ಕಾವೇರಿ ಹಾಗೂ ಕೃಷ್ಣಾ ನದಿ ನೀರಿನ ವಿವಾದಗಳಲ್ಲಿ ಕರ್ನಾಟಕದ ಧ್ವನಿ ಕೇಳಿಸುವಂತಹ ವಾತಾವರಣ ಸೃಷ್ಟಿಯಾಗಬಹುದು. ಹಾಗೆಯೇ ರೈಲ್ವೆ ಸೌಲಭ್ಯಗಳ ಸುಧಾರಣೆ ಹಾಗೂ ಮತ್ತಷ್ಟು ಯೋಜನೆಗಳ ಮಂಜೂರಾತಿ ವಿಚಾರದಲ್ಲಿ ರಾಜ್ಯದ ನಿಲುವಿಗೆ ಹೆಚ್ಚಿನ ಬೆಂಬಲ ದೊರಕಬಹುದು. ರಾಜ್ಯದ ಮಂತ್ರಿಗಳಿಗೆ ಒದಗಿಬಂದಿರುವ ಖಾತೆಗಳ ನಿರ್ವಹಿಸುವ ಅವಕಾಶವನ್ನು ಗಮನಿಸುವುದಾದರೆ ಎಲ್ಲಾ ಮಂತ್ರಿಗಳಿಗೂ ಕೈತುಂಬಾ ಕೆಲಸ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಕೆಲಸ ಮಾಡಿ ತೋರಿಸುವುದು ಮಂತ್ರಿಗಳ ಹೊಣೆಗಾರಿಕೆ. ಕರ್ನಾಟಕದಿಂದ ಐವರು ಮಂತ್ರಿಗಳು ಈ ಹಿಂದೆಯೂ ಕೇಂದ್ರ ಸಂಪುಟದಲ್ಲಿ ಮಂತ್ರಿಯಾಗಿ ಕಾರ್ಯ ನಿರ್ವಹಿಸುವ ನಿದರ್ಶನಗಳಿವೆ. ಆದರೆ, ಇಂತಹ ಅವಧಿ ತೀರಾ ಕಡಿಮೆ. ಈ ಬಾರಿ ಹಾಗೆ ಆಗಲಾರದು ಎಂಬುದು ಎಲ್ಲರ ತಿಳಿವಳಿಕೆ.
ಇದು ದೇಶದ ಸಂಪುಟ. ರಾಜ್ಯಕ್ಕೆ ಸೀಮಿತವಾಗುವ ಸಂಪುಟವಾದರೆ ಲೆಕ್ಕಾಚಾರ ಬೇರೆ. ಯಾವುದೇ ಕಾರಣದಿಂದ ಜಾತಿ, ಮತ, ಭಾಷೆಗಳ ದೃಷ್ಟಿಯಿಂದ ಈ ಸಂಪುಟ ರಚನೆಯನ್ನು ನೋಡುವುದು ಸರಿಯಲ್ಲ. ಇಡೀ ದೇಶವನ್ನು ಪ್ರತಿನಿಧಿಸುವಂತಹ ಸಂಪುಟ ರಚನೆಯಾಗುವುದಷ್ಟೆ ಬೇಕಾಗಿರುವ ಅಂಶ. ಈ ಲೆಕ್ಕಾಚಾರದ ಆಧಾರದ ಮೇಲೆ ಹೇಳುವುದಾದರೆ ಎಲ್ಲ ಟೀಕೆ ಟಿಪ್ಪಣಿಗಳ ನಡುವೆಯೂ ದೇಶವನ್ನು ಪ್ರತಿನಿಧಿಸುವ ಸಂಪುಟ ರಚನೆ ಇದಾಗಿದೆ.