ರಾಜ್ಯದ ಸ್ವಾಯತ್ತತೆಯನ್ನು ಒಸಕಿ ಹಾಕುವ ಕೆಲಸ ಮಾಡಲು ಹೊರಟಿದ್ದಾರೆ

Advertisement

ಚಿತ್ರದುರ್ಗ: ಒಂದು ರಾಷ್ಟ್ರ, ಒಂದು ಚುನಾವಣೆ ಎಂದು ಮಾಡಲು ಹೊರಟಿರುವ ದೇಶದ ಪ್ರಧಾನಿ ನರೇಂದ್ರ ಮೋದಿ ಅವರದು ಸರ್ವಾಧಿಕಾರದ ಹಾಗೂ ಹಿಟ್ಲರ್ ಸಂಸ್ಕೃತಿ ಎಂದು ಸಮಾಜ ಕಲ್ಯಾಣ ಸಚಿವ ಹೆಚ್.ಸಿ ಮಹದೇವಪ್ಪ ವಾಗ್ದಾಳಿ ನಡೆಸಿದ್ದಾರೆ.
ಚಿತ್ರದುರ್ಗದ ಕವಾಡಿಗರಹಟ್ಟಿ ಬಡಾವಣೆಗೆ ಸೋಮವಾರ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ, ಭಾರತ ಗಣತಂತ್ರ ಆಧಾರಿತ ದೇಶ. ಗಣತಂತ್ರ ವ್ಯವಸ್ಥೆಯಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ. ಒಂದು ರಾಜ್ಯದ ಅಧಿಕಾರ, ಸ್ವಾಯತ್ತತೆಗೆ ಕೇಂದ್ರ ಸರ್ಕಾರ ಕೈ ಹಾಕಲು ಬರುವುದಿಲ್ಲ. ಈಗ ನಮ್ಮಲ್ಲಿ ಇರುವುದು ಪ್ರಜಾಪ್ರಭುತ್ವ. ಮೊನ್ನೆ ತಾನೇ ರಾಜ್ಯದಲ್ಲಿ ಚುನಾವಣೆ ನಡೆದಿದ್ದು, ಬರುವ ಚುನಾವಣೆಯಲ್ಲಿ ನಮ್ಮೊಂದಿಗೆ ಬನ್ನಿ ಅಂದರೆ ಹೇಗೆ? ಮೋದಿ ಅವರು ಒಂದು ರಾಜ್ಯದ ಸ್ವಾಯತ್ತತೆಯನ್ನು ಒಸಕಿ ಹಾಕುವ ಕೆಲಸ ಮಾಡಲು ಹೊರಟಿದ್ದಾರೆ. ಇದು ಸರ್ವಾಧಿಕಾರದ ಹಾಗೂ ಹಿಟ್ಲರ್ ಸಂಸ್ಕೃತಿಯಾಗಿದೆ. ನಮ್ಮ ದೇಶದ ಸಂವಿಧಾನದಲ್ಲಿ ಇದಕ್ಕೆ ಅವಕಾಶವಿಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಲಾಟರಿ ಸಿಎಂ ಎಂಬ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿದ ಸಚಿವ ಮಹದೇವಪ್ಪ, ಸಿದ್ದರಾಮಯ್ಯ ಓರ್ವ ಸ್ವಾಭಾವಿಕ ನಾಯಕ. ಮಾಸ್ ಲೀಡರ್ ಎಂದು ರಾಜ್ಯಕ್ಕೆ ಗೊತ್ತಿರುವ ವಿಚಾರ. ನುಡಿದಂತೆ ನಡೆಯುವುದು, ಉತ್ತಮ ಆಡಳಿತ ಅವರ ಸಾಮರ್ಥ್ಯವಾಗಿದೆ. ಇಡೀ ರಾಜ್ಯದ ಜನರು ಅವರ ನಾಯಕತ್ವದಲ್ಲಿ ನಂಬಿಕೆ ಇಟ್ಟಿದ್ದಾರೆ. ಸಿದ್ದರಾಮಯ್ಯ ಈಸ್ ಎ ಗೆಸ್ಟೆಡ್ ಅಂಡ್ ಟ್ರಸ್ಟೆಡ್ ಲೀಡರ್. ಅಲ್ಲದೆ ಈಶ್ವರಪ್ಪ ಅವರಿಗೆ ಮೆದುಳು, ನಾಲಿಗೆಗೆ ಕನೆಕ್ಷನ್ ಇಲ್ಲ ಎಂದು ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಮತ್ತು ಅವರ ಪಾರ್ಟಿಯವರೇ ಈಶ್ವರಪ್ಪರನ್ನು ಕ್ಯಾರೇ ಅನ್ನುತ್ತಿಲ್ಲ. ಅಧಿಕಾರ ಇಲ್ಲದೆ ರಾಜಕೀಯ ಹತಾಶರಾಗಿರುವ ಈಶ್ವರಪ್ಪ ಅವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಈಶ್ವರಪ್ಪಗೆ ಟಾಂಗ್ ನೀಡಿದರು.
ಕೊಪ್ಪಳದ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿಯ ವರ್ಗಾವಣೆ ವಿಚಾರ ನನಗೆ ತಿಳಿದಿಲ್ಲ. ಹಾಗಾಗಿ ಸಚಿವ ಶಿವರಾಜ್ ತಂಗಡಗಿ, ಮಹದೇವಪ್ಪ ಮಧ್ಯೆ ಸಮನ್ವಯ ಕೊರತೆ ಎನ್ನುವುದು ತಪ್ಪು. ನಮ್ಮಲ್ಲಿ ಯಾವುದೇ ಸಮನ್ವಯದ ಕೊರತೆ ಇಲ್ಲ. ಅವರಿಗೆ ಬೇಕು ಅಂದರೆ ಆಡಳಿತಾತ್ಮಕ ದೃಷ್ಟಿಯಿಂದ ಏನು ಬೇಕೋ ಅದನ್ನು ಮಾಡುತ್ತೇವೆ ಎಂದು ತಿಳಿಸಿದರು.