ರಾಜ್ಯ ನೇಮಕಾತಿಗಳಲ್ಲಿ ಮೋಸ, ವಂಚನೆ: ಶಂಕರ್ ಬಿದರಿ

ಶಂಕರ್ ಬಿದರಿ
Advertisement

ಕೊಪ್ಪಳ: 30 ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಶಿಕ್ಷಕ, ಪೊಲೀಸ್ ಸೇರಿದಂತೆ ಬಹುತೇಕ ಎಲ್ಲ ಹುದ್ದೆ ನೇಮಕಾತಿಯಲ್ಲಿ ಮೋಸ, ವಂಚನೆ ನಡೆಯುತ್ತಿದೆ ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಆರೋಪಿಸಿದರು.
ನಗರದ ಸಾಹಿತ್ಯ ಭವನದಲ್ಲಿ ಮಂಗಳವಾರ ಸಿವಿಸಿ ಫೌಂಡೇಶನ್ ಹಾಗೂ ಭೂಮಿ ಎಜ್ಯುಕೇಶನ್ ಸೊಸೈಟಿ ಆಶ್ರಯದಲ್ಲಿ ಆಯೋಜಿಸಿದ್ದ, ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ಕಾರ್ಯಾಗಾರ ಹಾಗೂ ಉಚಿತ ಬ್ಯಾಚ್ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ನಡೆಯುತ್ತಿರುವ ವಿವಿಧ ಹುದ್ದೆ ನೇಮಕಾತಿಯಲ್ಲಿನ ಮೋಸ, ವಂಚನೆಗೆ ನೀವು ಜವಾಬ್ದಾರರಲ್ಲ. ಬದಲಿಗೆ ಕರ್ನಾಟಕದ ಜನ ನಾವು ಜವಾಬ್ದಾರರಾಗಿದ್ದೇವೆ. ಏಕೆಂದರೆ ಅಪ್ರಮಾಣಿಕ, ಭ್ರಷ್ಟಾಚಾರದ ಆಟವಾಡುವ ವ್ಯಕ್ತಿಗಳಿಗೆ ಅಧಿಕಾರ ಕೊಟ್ಟಿದ್ದೇವೆ. ಒಬ್ಬೊರಿಗಿಂತಲೂ ಒಬ್ಬ ಭ್ರಷ್ಟ, ಡಕಾಯತರನ್ನು ಆಯ್ಕೆ ಮಾಡಿ, ಅಧಿಕಾರಿ ಕೊಟ್ಟಿದ್ದೇವೆ. ಇದರಿಂದಾಗಿ ನಮ್ಮ ಜೊತೆಗೆ ನಿಮ್ಮ ಮೇಲೂ ದುಷ್ಪರಿಣಾಮ ಬೀರಿದೆ. ಸಾಧ್ಯವಾದರೆ ಮುಂದಿನ ಚುನಾವಣೆಯಲ್ಲಿ ಇರುವವರಲ್ಲಿ ಒಳ್ಳೆಯವರನ್ನು, ಕಡಿಮೆ ಭ್ರಷ್ಟರನ್ನು ಆಯ್ಕೆ ಮಾಡುತ್ತಾರೆ ಎಂಬ ಆಶಾಭಾವನೆ ಇಟ್ಟುಕೊಂಡಿದ್ದೇನೆ ಎಂದರು.