ರಾಜ್ಯ ಸರಕಾರ ರೈತರನ್ನು ಸಂಕಷ್ಟಕ್ಕೆ ದೂಡುವ ಕೆಲಸ ಮಾಡುತ್ತಿದೆ

Advertisement

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ೨೦೨೩ನೇ ಸಾಲಿನ ಮುಂಗಾರು ಹಂಗಾಮಿನ ಬಹುಮುಖ್ಯ ಬೆಳೆಗಳಾದ ಶೇಂಗಾ ಮತ್ತು ಸೋಯಾಬಿನ್ ಬೆಳೆಗಳು ಬರಗಾಲದಿಂದ ಬೆಳೆ ಬಾರದಿದ್ದರೂ ಈವರೆಗೆ ಮಧ್ಯಂತರ ವಿಮಾ ಪರಿಹಾರ ಬಿಡುಗಡೆಯಾಗಿರುವುದಿಲ್ಲ. ರೈತರನ್ನು ಸಂಕಷ್ಟಕ್ಕೆ ದೂಡುವ ಕೆಲಸ ರಾಜ್ಯ ಸರಕಾರ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೃಷಿ ಸಚಿವ ಎನ್. ಚಲುವರಾಯ ಸ್ವಾಮಿ ಅವರಿಗೆ ಪತ್ರ ಬರೆದಿರುವ ಅವರು, ಧಾರವಾಡ ಜಿಲ್ಲಾ ಮಟ್ಟದ ಬೆಳೆ ವಿಮೆಯ ಜಂಟಿ ಸಮಿತಿ ಮಧ್ಯಂತರ ಬೆಳೆ ವಿಮಾ ಪರಿಹಾರ ಬಿಡುಗಡೆ ಮಾಡಲು ತಾಂತ್ರಿಕ ಕಾರಣಗಳೊಂದಿಗೆ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿತ್ತು. ಇದೇ ವರದಿಯನ್ನು ರಾಜ್ಯ ಸರ್ಕಾರವೂ ಅನುಮೋದಿಸಿ ಸಂಬಂಧಿಸಿದ ವಿಮಾ ಕಂಪನಿಗಳಿಗೆ ಮಧ್ಯಂತರ ಪರಿಹಾರ ಬಿಡುಗಡೆ ಮಾಡುವಂತೆ ಸೂಚಿಸಿತ್ತು.
ಆದರೆ, ರಾಜ್ಯ ಸರ್ಕಾರವು ನೀಡಿದ ವರದಿಯನ್ನು ವಿಮಾ ಕಂಪನಿಯು ಮಾನ್ಯ ಮಾಡದೇ ರೈತರಿಗೆ ಮಧ್ಯಂತರ ವಿಮಾ ಪರಿಹಾರ ನೀಡಲು ನಿರಾಕರಿಸಿರುವುದು ದುರಾದೃಷ್ಟಕರ. ತಮಗೆ ತಿಳಿದಿರುವಂತೆ ನಮ್ಮ ಜಿಲ್ಲೆಯ ರೈತರು ಬರಗಾಲದಿಂದ ತತ್ತರಿಸಿದ್ದು ಜಿಲ್ಲಾಡಳಿತವೇ ನೀಡಿದ ವರದಿಯಂತೆ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಾಗಿದ್ದು ಅಕ್ಟೋಬರ್ ತಿಂಗಳು ಒಂದದರಲ್ಲಿಯೇ ಶೇ. ೮೪ ಮಳೆ ಕೊರತೆಯಾಗಿದೆ.