ರಾಣೆಬೆನ್ನೂರು ಡಿಪೋ ಆವರಣದಲ್ಲಿ ನೌಕರ ಆತ್ಮಹತ್ಯೆ ಪ್ರಕರಣ: ಇಲಾಖಾ ತನಿಖೆಗೆ ಆದೇಶ

Advertisement

ಹುಬ್ಬಳ್ಳಿ: ರಾಣಿಬೆನ್ನೂರು ಸಾರಿಗೆ ಸಂಸ್ಥೆ ಬಸ್ ಡಿಪೋ ಆವರಣದಲ್ಲಿ ನೌಕರನ ಆತ್ಮಹತ್ಯೆ ಘಟನೆಗೆ ಸಂಬಂಧಿಸಿದಂತೆ ಇಲಾಖಾ ತನಿಖೆಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ಅದೇಶಿಸಿದ್ದಾರೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹಾವೇರಿ ವಿಭಾಗದ ರಾಣಿಬೆನ್ನೂರು ಬಸ್ ಡಿಪೋ ಆವರಣದಲ್ಲಿ ಚಾಲಕ ಕಂ ನಿರ್ವಾಹಕ ಮಲ್ಲಿಕಾರ್ಜುನ ಎಸ್. ಬಡಿಗೇರ (48) ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ಬೆಳಗಿನ ಜಾವ ಸಂಭವಿಸಿದೆ.
ಮೂಲತಃ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಡವಳಗಿ ಗ್ರಾಮದ ನಿವಾಸಿಯಾಗಿದ್ದ ಮಲ್ಲಿಕಾರ್ಜುನರವರು ಕಳೆದ ಹತ್ತು ವರ್ಷಗಳಿಂದ ರಾಣೆಬೆನ್ನೂರು ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಜೂನ್ 25 ರಂದು ಕರ್ತವ್ಯ ಮುಗಿಸಿಕೊಂಡು ಹೋಗಿದ್ದಾರೆ. ಜು.2 ರಂದು ಡಿಪೋ ಮೇಲಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಜು.3 ರಂದು ಕರ್ತವ್ಯಕ್ಕೆ ಬರುವುದಾಗಿ ತಿಳಿಸಿದ್ದರು. ಜು. 3 ರಂದು ಬೆಳಿಗ್ಗೆ 3-15ರ ಸಮಯದಲ್ಲಿ ಡಿಪೊಗೆ ಬಂದಿದ್ದು, ನಂತರ ಡಿಪೋ ಆವರಣದಲ್ಲಿನ ಬೇವಿನ ಮರಕ್ಕೆ ನೇಣು ಹಾಕಿಕೊಂಡಿರುವುದಾಗಿ ತಿಳಿದು ಬಂದಿದೆ. ಮಾಹಿತಿ ತಿಳಿದ ಕೂಡಲೆ ಹಾವೇರಿ ವಿಭಾಗೀಯ ಕಚೇರಿ ಹಾಗೂ ಹುಬ್ಬಳ್ಳಿ ಕೇಂದ್ರ ಕಚೇರಿಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ನಡಸಿ ತ್ವರಿತವಾಗಿ ವರದಿ ಸಲ್ಲಿಸುವಂತೆ ಹಿರಿಯ ಅಧಿಕಾರಿಗಳಿಗೆ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ಆದೇಶಿಸಿದ್ದಾರೆ