ರಾಮಕೃಷ್ಣಮಠ, ಮಿಷನ್ ಅಧ್ಯಕ್ಷ ಸ್ವಾಮಿ ಸ್ಮರಣಾನಂದ ಮಹಾರಾಜ್ ಇನ್ನಿಲ್ಲ

Advertisement

ಕೊಲ್ಕತಾ: ಬೇಲೂರು ರಾಮಕೃಷ್ಣಮಠ ಮತ್ತು ಮಿಷನ್ ಅಧ್ಯಕ್ಷರಾದ ಸ್ವಾಮಿ ಸ್ಮರಣಾನಂದ ಮಹಾರಾಜ್(೯೫) ಇಂದು ದೇಹತ್ಯಾಗ ಮಾಡಿದರು.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ೮ ಗಂಟೆಯ ಸುಮಾರಿಗೆ ಅಗಲಿದರು.
ಅವರ ದೈಹಿಕ ಸ್ಥಿತಿ ಹದಗೆಟ್ಟಾಗ ಪ್ರಧಾನಿ ನರೇಂದ್ರ ಮೋದಿ ಅವರು ಕೋಲ್ಕತ್ತಾದಲ್ಲಿರುವ ರಾಮಕೃಷ್ಣ ಮಠದ ಅಧ್ಯಕ್ಷ ಮಹಾರಾಜರನ್ನು ಭೇಟಿ ಮಾಡಿದ್ದರು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಆಸ್ಪತ್ರೆಗೆ ತೆರಳಿದ್ದರು.
ಸ್ವಾಮಿ ಆತ್ಮಸ್ಥಾನಂದರ ನಿಧನದ ನಂತರ ಜುಲೈ ೧೭, ೨೦೧೭ ರಂದು ಸ್ವಾಮಿ ಸ್ಮರಣಾನಂದ ಮಹಾರಾಜ್ ಅವರು ರಾಮಕೃಷ್ಣ ಮಠ ಮತ್ತು ಮಿಷನ್‌ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.
ತಮಿಳುನಾಡಿನ ತಂಜಾವೂರು ಜಿಲ್ಲೆ ಅಂದಾಮಿಯಲ್ಲಿ ೧೯೨೯ರಲ್ಲಿ ಜನಿಸಿದ್ದ ಸ್ಮರಣಾನಂದರು ೧೯೫೮ರಲ್ಲಿ ಕೋಲ್ಕತಾದ ಅದ್ವೈತ ಆಶ್ರಮಕ್ಕೆ ನಿಯೋಜಿತಗೊಂಡಿದ್ದರು. ೧೯೮೩ರಲ್ಲಿ ರಾಮಕೃಷ್ಣಮಠದ ಟ್ರಸ್ಟಿಯಾಗಿ ನೇಮಕಗೊಂಡಿದ್ದರು. ೧೯೯೭ರಲ್ಲಿ ಸಂಸ್ಥೆ ಪ್ರಧಾನ ಕಾರ್ಯದರ್ಶಿ, ೨೦೦೭ರಲ್ಲಿ ಉಪಾಧ್ಯಕ್ಷರಾಗಿದ್ದರು.

ಡಿ.ಆರ್. ಪಾಟೀಲ ಸಂತಾಪ
ಸ್ವಾಮಿ ಸ್ಮರಣಾನಂದರ ಅಗಲಿಕೆಗೆ ಲೋಕ ಶಿಕ್ಷಣ ಟ್ರಸ್ಟ್ ಧರ್ಮದರ್ಶಿ ಡಿ.ಆರ್. ಪಾಟೀಲ್ ಅವರು ಸಂತಾಪ ತೀವ್ರ ವ್ಯಕ್ತಪಡಿಸಿದ್ದಾರೆ.