ನವದೆಹಲಿ: ದಾರಿತಪ್ಪಿಸುವ ಜಾಹೀರಾತು ಪ್ರಕರಣದಲ್ಲಿ ಯೋಗಗುರು ರಾಮದೇವ್ ಮತ್ತವರ ಸಹವರ್ತಿ ಬಾಲಕೃಷ್ಣ ಹಾಗೂ ಪತಂಜಲಿ ಆಯುರ್ವೇದ ಸಂಸ್ಥೆ ಬಹಿರಂಗವಾಗಿ ಕ್ಷಮೆಯಾಚಿಸಲು ಸುಪ್ರೀಂಕೋರ್ಟ್ ಈಗ ಒಂದು ವಾರದ ಕಾಲಾವಕಾಶ ನೀಡಿದೆ.
ಮಂಗಳವಾರ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಹಾಗೂ ಅಹ್ಸಾನುದ್ದೀನ್ ಅಮಾನುಲ್ಲಾ ಪೀಠದೆದುರು ರಾಮದೇವ್ ಹಾಗೂ ಬಾಲಕೃಷ್ಣ ಮಂಗಳವಾರ ಹಾಜರಾಗಿ ಕ್ಷಮೆಯಾಚಿಸಿದರೂ ಈ ಹಂತದಲ್ಲಿ ಯಾವುದೇ ರೀತಿಯ ರಿಯಾಯಿತಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
“ನೀವು ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಆದರೆ ಅಲೋಪತಿಯ ಮಹತ್ವ ಕುಗ್ಗಿಸಲು ಸಾಧ್ಯವಿಲ್ಲ” ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ರಾಮದೇವ್ ನ್ಯಾಯಪೀಠದ ಜೊತೆ ಮಾತನಾಡುವಾಗ ನ್ಯಾಯಾಲಯಕ್ಕೆ ಅಗೌರವ ತೋರಿಸುವ ಉದ್ದೇಶ ನನಗಿಲ್ಲ ಎಂದು ಹೇಳಿದರು.
ಈ ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ ೨೩ರಂದು ನಡೆಯಲಿದೆ. ಅಂದು ಕೂಡಾ ರಾಮದೇವ್ ಹಾಗೂ ಬಾಲಕೃಷ್ಣ ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ನ್ಯಾಯಪೀಠ ತಾಕೀತು ಮಾಡಿದೆ.
ಪತಂಜಲಿಯ ಈ ಇಬ್ಬರು ಮುಖ್ಯಸ್ಥರು ಈಗಾಗಲೇ ಎರಡು ಪ್ರತ್ಯೇಕ ಅಫಿಡವಿಟ್‌ಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಕಳೆದ ನವೆಂಬರ್ ೨೧ರಂದು ನ್ಯಾಯಾಲಯ ನೀಡಿದ ಆದೇಶದಲ್ಲಿ ದಾಖಲಿಸಲಾದ ಹೇಳಿಕೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಈ ಅಫಿಡವಿಟ್‌ಗಳಲ್ಲಿ ಕ್ಷಮೆಯಾಚಿಸಿದ್ದಾರೆ. ಪತಂಜಲಿ ತಯಾರಿಸಿದ ಉತ್ಪನ್ನಗಳು ಮತ್ತು ಅವುಗಳ ಮಾರಾಟಕ್ಕೆ ಸಂಬಂಧಿಸಿದಂತೆ ಇನ್ನು ಮುಂದೆ ಯಾವುದೇ ಕಾನೂನುಗಳನ್ನು ಉಲ್ಲಂಘಿಸುವುದಿಲ್ಲ ಎಂದು ಪತಂಜಲಿ ಪರ ವಕೀಲರು ಭರವಸೆ ನೀಡಿದ್ದನ್ನು ನ.೨೧ರ ಆದೇಶದಲ್ಲಿ ದಾಖಲಿಸಲಾಗಿದೆ. ಆದರೆ ಈ ಭರವಸೆ ಪಾಲಿಸದೇ ಮಾಧ್ಯಮಗಳ ಮುಂದೆ ಹೇಳಿಕೆ ನೀಡುವ ಪತಂಜಲಿ ಕ್ರಮ ನ್ಯಾಯಾಲಯದ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.