ರಾಯಲ್ ಚಾಲೆಂಜರ್ಸ್‌ಗೆ ರೈಡರ್ ಸವಾಲು ಇಂದು

Advertisement

ಬೆಂಗಳೂರು: ಮೊನ್ನೆಯಷ್ಟೇ ರಾಜಸ್ಥಾನ ರಾಯಲ್ಸ್ ಎದುರು ಗೆದ್ದು ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಗೆ `ತವರು ಅಂಕಣ’ದ ಮೇಲೆ ಸವಾಲೆಸೆಯಲು ಕೊಲ್ಕತ್ತಾ ನೈಟ್ ರೈಡರ್ಸ್ ಸಜ್ಜಾಗಿದೆ.

ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಸಂಜೆ ಆರ್‌ಸಿಬಿ-ಕೆಕೆಆರ್‌ಗಳ ನಡುವೆ ನಡೆಯಲಿರುವ ಪಂದ್ಯ ಪ್ರಸಕ್ತ ಐಪಿಎಲ್ ಟೂರ್ನಿಯ ೩೬ನೇ `ಸೆಣಸಾಟ’ವಾಗಿದ್ದು, ಇಲ್ಲಿ ಗೆದ್ದರೆ ತಮ್ಮ ಪಾಲಿಗೆ ಹೆಚ್ಚಾಗಬಹುದಾದ ಅವಕಾಶಗಳ ಕುರಿತು ಎರಡೂ ತಂಡಗಳಿಗೆ ಖಂಡಿತವಾಗಿಯೂ ಗೊತ್ತಿದೆ.

ಆರ್‌ಸಿಬಿ ಹಾಗೂ ಕೆಕೆಆರ್‌ಗಳು ಐಪಿಎಲ್‌ನಲ್ಲಿ ಇದುವರೆಗೆ ೩೧ ಸಲ ಪರಸ್ಪರರನ್ನು ಎದುರಿಸಿದ್ದು, ೧೭ ಸಲ ಕೊಲ್ಕತ್ತಾ ಗೆದ್ದಿದ್ದರೆ, ೧೪ ಬಾರಿ ಮಾತ್ರ ವಿಜಯಲಕ್ಷ್ಮಿ ಬೆಂಗಳೂರಿನದಾಗಿದೆ.

ಐಪಿಎಲ್‌ನ ಈ ೧೬ನೇ ಆವೃತ್ತಿಯಲ್ಲಿ ಆರ್‌ಸಿಬಿ-ಕೆಕೆಆರ್‌ಗಳೆರಡೂ ಇದುವರೆಗೆ ತಲಾ ಏಳು ಪಂದ್ಯಗಳನ್ನಾಡಿದ್ದು, ಆರ್‌ಸಿಬಿ ನಾಲ್ಕನ್ನು ಜಯಿಸಿದ್ದರೆ, ಕೆಕೆಆರ್ ಎರಡನ್ನು ಮಾತ್ರ ಗೆದ್ದಿದೆ. ರಾಯಲ್ ಚಾಲೆಂಜರ್ಸ್ ಇದುವರೆಗೆ ರಾಜಸ್ಥಾನ ರಾಯಲ್ಸ್, ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ಎದುರು ತಲಾ ಒಂದೊಂದು ಸಲ ಜಯಿಸಿದ್ದರೆ, ನೈಟ್ ರೈಡರ್ಸ್ ಮೊದಲಿನ ಸತತ ನಾಲ್ಕು ಸೋಲುಗಳ ನಂತರ ಗುಜರಾತ ಟೈಟನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಎದುರು ಗೆದ್ದಿತಾದರೂ ಮಳೆಯಿಂದಾಗಿ `ಡಿಎಲ್‌ಎಸ್’ ಆಧಾರದ ಮೇಲೆ ನಿರ್ಣಯಿಸಲ್ಪಟ್ಟ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರು ೭ ಓಟಗಳಿಂದ ಸೋತು ಹಿನ್ನಡೆ ಅನುಭವಿಸಿದೆ.

ಆರ್‌ಸಿಬಿಗೆ ಅಗ್ರ ಕ್ರಮಾಂಕದ ಬ್ಯಾಟಿಂಗ್‌ನಲ್ಲಿ ಚಿಂತೆಯಿಲ್ಲ. ನಾಯಕ ಫಾಫ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸವೆಲ್ ಮೂವರೂ ಭರ್ಜರಿ `ಫಾರಂ’ನಲ್ಲಿದ್ದಾರೆ. ಆದರೆ ಮಧ್ಯಮ ಕ್ರಮಾಂಕದಲ್ಲಿ ನಿರೀಕ್ಷಿತ ಬೆಂಬಲ ಸಿಗುತ್ತಿಲ್ಲ. ಅಗ್ರ ಕ್ರಮಾಂಕ `ಕ್ಲಿಕ್’ ಆಗುವಲ್ಲಿ ವೈಫಲ್ಯ ಕಂಡಿದ್ದೇ ಆದರೆ, ಅದಕ್ಕೆ ಬೃಹತ್ ಮೊತ್ತ ಗಗನ ಕುಸುಮವಾಗುತ್ತದೆ.

ಬೌಲಿಂಗ್‌ನಲ್ಲೂ ಆರ್‌ಸಿಬಿ ಪರವಾಗಿಲ್ಲ ಎನ್ನುವಂತಿದೆ. ವೇಗಿ ಮೊಹಮ್ಮದ್ ಸಿರಾಜ್ ಉತ್ಕೃಷ್ಟ ಪ್ರದರ್ಶನ ನೀಡುತ್ತಿದ್ದಾರೆ. ಒಂದೊಮ್ಮೆ `ಪ್ಲೇ-ಆಫ್’ ಪ್ರವೇಶಿಸಬೇಕಿದ್ದರೆ, ಈ ನಾಲ್ವರನ್ನು ಬಿಟ್ಟು ಉಳಿದವರು ಕೈ ಚಳಕ ತೋರಲೇ ಬೇಕಿದೆ.

ಇನ್ನೊಂದೆಡೆ ನಿತಿಶ್ ರಾಣಾ ನಾಯಕತ್ವದ ಕೊಲ್ಕತ್ತಾ ತಂಡ ಹೇಳಿಕೊಳ್ಳುವ ಪ್ರದರ್ಶನವನ್ನೇನೂ ನೀಡುತ್ತಿಲ್ಲ. ಸತತ ನಾಲ್ಕು ಸೋಲುಗಳಿಂದ ಹೊರ ಬರಬೇಕಾದರೆ ಅದು ಪಟ್ಟ ಪಾಡು ಅಷ್ಟಿಷ್ಟಲ್ಲ. ಅಲ್ಲೊಂದು-ಇಲ್ಲೊಂದು ವೈಯಕ್ತಿಕ ಪ್ರದರ್ಶನಗಳು ಬರುತ್ತಿವೆಯಾದರೂ, ತಂಡವಾಗಿ ಅದು ಯಶ ಕಾಣುತ್ತಿಲ್ಲ. ಈ ಹಿನ್ನೆಲೆಯಲ್ಲಿ, ಗೆಲುವಿನ ಲಯಕ್ಕೆ ಮರಳಲು ಆರ್‌ಸಿಬಿ ಎದುರಿನ ಪಂದ್ಯ ಅದಕ್ಕೊಂದು ಸುವರ್ಣಾವಕಾಶ ಕಲ್ಪಿಸಿದೆ.

ಪಂದ್ಯ: ಸಂಜೆ ೭.೩೦ಕ್ಕೆ ಪ್ರಾರಂಭ.