ರಾಷ್ಟ್ರಪತಿಗೆ ಪೌರ ಸನ್ಮಾನ ಕಾರ್ಯಕ್ರಮ: ಶಾಸಕರಿಗೆ ಕೊನೆಗೂ ವೇದಿಕೆಯಲ್ಲಿ ಲಭಿಸಿತು ಸ್ಥಾನ

ಜಗದೀಶ ಶೆಟ್ಟರ
Advertisement


ಹುಬ್ಬಳ್ಳಿ : ರಾಷ್ಡ್ರಪತಿ ದ್ರೌಪದಿ ಮುರ್ಮು ಅವರ ಪೌರ ಸನ್ಮಾನ ಕಾರ್ಯಕ್ರಮದ ವೇದಿಕೆಯಲ್ಲಿ ನಾಲ್ವರು ಶಾಸಕರಿಗೂ ಆಸೀನರಾಗಲು ಅವಕಾಶ ಲಭಿಸಿದೆ.
ಪೂರ್ವ ಘೋಷಣೆಯಂತೆ ಶಾಸಕರಿಗೆ, ವಿಧಾನ ಪರಿಷತ್ ಸದಸ್ಯರಿಗೆ ವೇದಿಕೆಯಲ್ಲಿ ಸ್ಥಾನ ಲಭಿಸಿರಲಿಲ್ಲ.
ಇದು ಶಾಸಕರು ಮತ್ತು ಅವರ ಬೆಂಬಲಿಗರಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು. ಅದರಲ್ಲೂ ಕಾರ್ಯಕ್ ನಡೆಯುವ ಸ್ಥಳ ಜಿಮ್ ಖಾನ್ ಮೈದಾನ ಮಾಜಿ ಸಿಎಂ ಮತ್ತು ಸೆಂಟ್ರಲ್ ಕ್ಷೇತ್ರದ ಶಾಸಕ ಜಗದೀಶ ಶೆಟ್ಟರ ಕ್ಷೇತ್ರ ವ್ಯಾಪ್ತಿಯಲ್ಲೇ ಬರುವುದರಿಂದ ಅವರ ಆಪ್ತರು, ಬೆಂಬಗಲಿಗರಿಗೆ ಹೆಚ್ಚಿನ ಅಸಮಾಧಾನವನ್ನುಂಟು ಮಾಡಿತ್ತು.
ಕಳೆದ ಎರಡು ದಿನಗಳಿಂದ ಬಿಜೆಪಿ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿ ಉದ್ದೇಶ ಪೂರ್ವಕವಾಗಿಯೇ ಶೆಟ್ಟರ ಅವರಿಗೆ ವೇದಿಕೆಯಲ್ಲಿ ಆಸೀನರಾಗುವ ಅವಕಾಶ ಸಿಗದಂತೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಮೇಲೆ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದ್ದರು.
ಆದರೆ, ರವಿವಾರ ಸಂಜೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ರಾಷ್ಟ್ರಪತಿಗಳ ಕಚೇರಿ ಶಿಷ್ಟಾಚಾರ ವಿಭಾಗದ ಅಧಿಕಾರಿಗಳನ್ನು ಸಂಪರ್ಕಿಸಿ ವೇದಿಕೆಯಲ್ಲಿ ಚುನಾಯಿತ ನಾಲ್ವರು ಶಾಸಕರಿಗೆ ಅವಕಾಶ ಕೊಡಲೇಬೇಕು ಎಂದು ಮಾಡಿದ್ದರು.
ಈ ಮನವಿ ಪುರಸ್ಕರಿಸಿದ ರಾಷ್ಡ್ರಪತಿ ಕಚೇರಿ ಅಧಿಕಾರಿಗಳು ವೇದಿಕೆಯಲ್ಲಿ ನಾಲ್ವರು ಶಾಸಕರಾದ ಜಗದೀಶ ಶೆಟ್ಟರ, ಅರವಿಂದ ಬೆಲ್ಲದ, ಅಮೃತ ದೇಸಾಯಿ ಮತ್ತು ಪ್ರಸಾದ ಅಬ್ಬಯ್ಯ ಅವರಿಗೆ ಅಸೀನರಾಗಲು ಅವಕಾಶ ಕಲ್ಪಿಸಿ ಪರಿಷ್ಕೃತ ಆದೇಶ ಹೊರಡಿಸಿದ್ದಾರೆ.
ಆದರೆ, ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಪ್ರದೀಪ ಶೆಟ್ಟರ, ಸಲೀಂ ಅಹ್ಮದ್, ಎಸ್.ವಿ.ಸಂಕನೂರ ಅವರಿಗೆ ವೇದಿಕೆಯಲ್ಲಿ ಸ್ಥಾನ ಲಭಿಸಿಲ್ಲ.

ವೇದಿಕೆಯಲ್ಲಿ ಇರುವ ಗಣ್ಯರು
1- ರಾಷ್ಟ್ರಪತಿ
2- ಮುಖ್ಯಮಂತ್ರಿ
3- ರಾಜ್ಯಪಾಲರು
4- ಕೇಂದ್ರ ಸಚಿವ ಪ್ರಲ್ಹಾದ ಜೋಶಿ
5- ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಅಚಾರ
6- ಸಚಿವ ಶಂಕರ ಪಾಟೀಲ ಮುನೇನಕೊಪ್ಪ
7- ಸಚಿವ ಡಾ.ಅಶ್ವತ್ಥನಾರಾಯಣ
8- ಸಚಿವ ಬೈರತಿ ಬಸವರಾಜ
9- ಮೇಯರ್ ಈರೇಶ ಅಂಚಟಗೇರಿ
10- ಶಾಸಕ ಜಗದೀಶ ಶೆಟ್ಟರ
11- ಶಾಸಕ ಅರವಿಂದ ಬೆಲ್ಲದ
12- ಶಾಸಕ ಅಮೃತ ದೇಸಾಯಿ
13- ಶಾಸಕ ಪ್ರಸಾದ ಅಬ್ಬಯ್ಯ