ರಾಷ್ಟ್ರೀಯ ಹೆದ್ದಾರಿ ಸುಂಕ ಪಾರದರ್ಶಕತೆ ಅಗತ್ಯ

ಸಂಪಾದಕೀಯ
Advertisement

ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಂಕವನ್ನು ಪಾವತಿ ಮಾಡುವುದಕ್ಕೆ ಜನ ಸಿದ್ಧರಿದ್ದಾರೆ. ಆದರೆ ಸುಂಕದ ಪ್ರಮಾಣ ಪ್ರತಿಯೊಂದು ಹೆದ್ದಾರಿಗೂ ಭಿನ್ನವಾಗಿದೆ. ಇದಕ್ಕೆ ಕಾರಣವೇನು ಎಂಬುದು ಸ್ಪಷ್ಟಗೊಂಡಿಲ್ಲ. ಸುಂಕವನ್ನು ಪ್ರತಿ ಕಿಮೀಗೆ ಲೆಕ್ಕ ಹಾಕುತ್ತಾರೋ ಅಥವಾ ಆ ಹೆದ್ದಾರಿ ನಿರ್ಮಾಣಕ್ಕೆ ಆದ ವೆಚ್ಚವನ್ನು ಪರಿಗಣಿಸಲಾಗುವುದೋ ಎಂಬುದು ಸ್ಪಷ್ಟಗೊಂಡಿಲ್ಲ. ೧೯೮೮ ರಲ್ಲಿ ಆರಂಭಗೊಂಡ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ೨೦೦೮ಕ್ಕೆ ಮುನ್ನ ನಿರ್ಮಾಣಗೊಂಡ ರಸ್ತೆಗಳಿಗೆ ಒಂದು ದರ ನಂತರದ ರಸ್ತೆಗಳಿಗೆ ಮತ್ತೊಂದು ಮಾನದಂಡ ಎಂದು ಹೇಳಿದೆ. ಪ್ರತಿ ರಸ್ತೆಯ ಸುಂಕದ ಕಟ್ಟೆಯ ಬಳಿ ಈ ವಿವರ ಬಹಿರಂಗಪಡಿಸುವುದು ಸೂಕ್ತ.
ರಾಷ್ಟ್ರೀಯ ಹೆದ್ದಾರಿ ಕಲ್ಪನೆ ಅಟಲ್ ಬಿಹಾರಿ ವಾಜಪೇಯಿ ಕಾಲದಲ್ಲಿ ಪೂರ್ಣ ಸ್ವರೂಪ ಪಡೆಯಿತು. ಇದರಿಂದ ಜನರಿಗೆ ಬಹುದೂರದ ಪ್ರಯಾಣ ಮಾಡುವುದಕ್ಕೆ ಸುಲಭವಾಯಿತು. ನಂತರದ ದಿನಗಳಲ್ಲಿ ಇದಕ್ಕೆ ಹೆಚ್ಚು ಮಹತ್ವ ಸಿಗಲಿಲ್ಲ. ಈಗ ಇದಕ್ಕೆ ಮತ್ತೆ ಮಹತ್ವ ಬಂದಿದೆ. ಪೆಟ್ರೋಲ್ ಮತ್ತು ಡೀಸೆಲ್ ದರ ಗಗನಕ್ಕೇರಿದ ಮೇಲೆ ಹೆದ್ದಾರಿ ಅಗತ್ಯ ಎಂಬುದು ಎಲ್ಲರ ಅರಿವಿಗೆ ಬಂದಿದೆ. ರಾಷ್ಟ್ರೀಯ ಹೆದ್ದಾರಿಯನ್ನು ಒಂದು ಪ್ರಮುಖ ನಗರದಿಂದ ಮತ್ತೊಂದು ಪ್ರಮುಖ ನಗರಕ್ಕೆ ನೇರ ಕಲ್ಪಿಸಲು ಮಾತ್ರ ನಿರ್ಮಿಸಬೇಕು. ಪ್ರತಿದಿನ ಲಕ್ಷಾಂತರ ಜನ ಸಂಚರಿಸುವ ಸ್ಥಳದಲ್ಲಿ ಹೆದ್ದಾರಿ ನಿರ್ಮಿಸುವುದು ಅಗತ್ಯ. ಅದರಿಂದ ಜನರಿಗೆ ಸಮಯ ಹಾಗೂ ಹಣ ಉಳಿತಾಯವಾಗುತ್ತದೆ. ಅಲ್ಲದೆ ಪರಿಸರ ಮಾಲಿನ್ಯವೂ ಇಳಿಮುಖಗೊಳ್ಳುತ್ತದೆ. ಸಾಮಾನ್ಯವಾಗಿ ಹೆದ್ದಾರಿಗಳು ಎಲ್ಲ ಊರುಗಳ ಹೊರಭಾಗದಲ್ಲಿ ಹೋಗುವುದರಿಂದ ಸಮೀಪದ ಪಟ್ಟಣಗಳಿಗೆ ಮೋಟಾರು ವಾಹನಗಳಿಂದ ಆಗುವ ಮಾಲಿನ್ಯ ತಪ್ಪುತ್ತದೆ. ಅಲ್ಲದೆ ದೂರದ ನಗರಗಳಿಗೆ ಹೋಗುವ ಜನರಿಗೆ ತಮ್ಮ ವಾಹನದ ವೇಗವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ರಸ್ತೆಯ ಮಧ್ಯೆ ವಿಭಜಕ ಇರುತ್ತದೆ. ಎಡಬದಿಯಲ್ಲಿ ೩ ವಾಹನ ಬಲಬದಿಯಲ್ಲಿ ೩ ವಾಹನ ಸುಲಭವಾಗಿ ಚಲಿಸಬಹುದು. ಅಲ್ಲದೆ ಇಕ್ಕೆಲಗಳಲ್ಲಿ ಸರ್ವೀಸ್ ರಸ್ತೆ ಇರುತ್ತದೆ. ಅದು ಸಮೀಪದ ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಎಲ್ಲೆಲ್ಲಿ ಹೆದ್ದಾರಿ ಇರುತ್ತದೋ ಅಲ್ಲೆಲ್ಲ ಸರ್ವಿಸ್ ರಸ್ತೆ ನಿರ್ಮಾಣ ಅಗತ್ಯ. ಆ ರಸ್ತೆಗಳನ್ನು ಕೂಡ ಉತ್ತಮವಾಗಿ ನಿರ್ವಹಿಸುವುದು ಅಗತ್ಯ. ಬಹುತೇಕ ಕಡೆ ಸರ್ವೀಸ್ ರಸ್ತೆಯನ್ನು ಕಡೆಗಣಿಸಲಾಗುತ್ತದೆ. ಇದರಿಂದ ಸ್ಥಳೀಯರು ಹೆದ್ದಾರಿ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುವುದು ಸಹಜ. ಅಲ್ಲದೆ ಹೆದ್ದಾರಿಯನ್ನು ದಾಟಲು ಅಲ್ಲಲ್ಲಿ ಮೇಲು ಸೇತುವೆ ಮತ್ತು ಕೆಳಸೇತುವೆ ನಿರ್ಮಿಸಬೇಕು. ಮಳೆಗಾಲದಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಮಳೆ ನೀರು ಹರಿದು ಹೋಗಲು ವ್ಯವಸ್ಥೆ ಇರಬೇಕು.
ಈ ರಸ್ತೆಗಳ ಇಕ್ಕೆಲಗಳಲ್ಲಿ ವಿರಾಮ ತಾಣ ನಿರ್ಮಿಸಬೇಕೆಂಬ ಬೇಡಿಕೆ ಇದೆ. ಆದರೆ ಹೆದ್ದಾರಿ ಪ್ರಾಧಿಕಾರ ಕ್ರಮ ಕೈಗೊಂಡಿಲ್ಲ. ಮಾರ್ಗದ ಮಧ್ಯದಲ್ಲಿ ಯಾವುದಾದರೂ ವಾಹನ ಕೆಟ್ಟಲ್ಲಿ ಯಾವುದೇ ಸಹಾಯ ದೊರಕುತ್ತಿಲ್ಲ. ಅದರೊಂದಿಗೆ ವೇಗದಲ್ಲಿರುವ ವಾಹನಗಳ ನಡುವೆ ಅಪಘಾತ ಸಂಭವಿಸಿದರೆ ತುರ್ತು ಚಿಕಿತ್ಸೆಗೆ ವ್ಯವಸ್ಥೆ ಇಲ್ಲ. ಇವುಗಳನ್ನು ಕಲ್ಪಿಸಿಕೊಡುವುದು ಪ್ರಾಧಿಕಾರದ ಕರ್ತವ್ಯ. ಹೆದ್ದಾರಿಯ ಇಕ್ಕೆಲಗಳಲ್ಲಿ ತಂತಿ ಬೇಲಿ ನಿರ್ಮಿಸಿ ಬೇರೆ ವಾಹನಗಳು ಬಾರದಂತೆ ಕ್ರಮ ಕೈಗೊಳ್ಳುವುದು ಅಗತ್ಯ. ಒಮ್ಮೆ ಸುಂಕವನ್ನು ಪಾವತಿಸಿದ ವಾಹನಕ್ಕೆ ಕೊನೆಯವರೆಗೂ ಯಾವುದೇ ರೀತಿಯಲ್ಲಿ ಅಡ್ಡಿ ಆತಂಕ ಇರಬಾರದು. ಕೆಲವು ಕಡೆ ದ್ವಿಚಕ್ರವಾಹನಗಳಿಗೆ ಅವಕಾಶ ನೀಡಲಾಗಿದೆ. ಇದೂ ಅಪಾಯಕಾರಿ. ಎಲ್ಲ ವಾಹನಗಳು ೧೦೦ ಕಿ.ಮೀ ವೇಗದಲ್ಲಿರುತ್ತವೆ. ಅವುಗಳ ನಡುವೆ ದ್ವಿಚಕ್ರ ವಾಹನ ಬಂದಲ್ಲಿ ಇತರ ವಾಹನಗಳು ವೇಗ ತಗ್ಗಿಸುವುದು ಅನಿವಾರ್ಯ. ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಹೆಚ್ಚಿನ ಉತ್ತೇಜನ ನೀಡುವುದು ಅಗತ್ಯ. ಅದರಿಂದ ಪರಿಸರ ಮಾಲಿನ್ಯವನ್ನು ಮತ್ತಷ್ಟು ಕಡಿಮೆ ಮಾಡಬಹುದು.
ರಾಷ್ಟ್ರೀಯ ಹೆದ್ದಾರಿಯಿಂದ ಅನುಕೂಲ ಮತ್ತು ಅನಾನುಕೂಲ ಎರಡೂ ಇದೆ. ಎರಡು ಪ್ರಮುಖ ನಗರಗಳ ನಡುವೆ ಸಂಚರಿಸುವ ಜನರಿಗೆ ಹಣ ಮತ್ತು ಸಮಯ ಉಳಿಸುವುದು ಮುಖ್ಯ. ಆದರೆ ಎರಡು ಪ್ರಮುಖ ನಗರಗಳ ನಡುವೆ ಇರುವ ಹಲವು ಪಟ್ಟಣಗಳ ಸಂಪರ್ಕ ತಪ್ಪಿಹೋಗುತ್ತದೆ. ಸಾಂಸ್ಕೃತಿಕ ಸಂಬಂಧಗಳಿಗೆ ಹೆದ್ದಾರಿ ಅಡ್ಡಿ ಎಂಬುದೂ ನಿಜ. ಆದರೆ ಸರ್ವೀಸ್ ರಸ್ತೆ ಉಳಿಸಿಕೊಳ್ಳುವ ಮೂಲಕ ಸಾಂಸ್ಕೃತಿಕ ಸಂಬಂಧಕ್ಕೆ ಇಂಬು ಕೊಡಬಹುದು. ಹೆದ್ದಾರಿಯಷ್ಟೇ ಸರ್ವೀಸ್ ರಸ್ತೆಗಳಿಗೂ ಮಹತ್ವ ನೀಡಬೇಕು.
ಹೆದ್ದಾರಿಯಲ್ಲಿ ಸಂಗ್ರಹವಾಗುವ ಸುಂಕ ಪ್ರಯಾಣಿಕರ ಸುರಕ್ಷತೆಗೂ ಬಳಕೆಯಾಗಬೇಕು. ಅಲ್ಲದೆ ಸರ್ವೀಸ್ ರಸ್ತೆ ನಿರ್ವಹಣೆಗೂ ಒಂದಿಷ್ಟು ಅನುದಾನ ನೀಡಬೇಕು. ಇದರ ಬಗ್ಗೆ ಸಂಪೂರ್ಣ ಅವಲೋಕನ ಅಗತ್ಯ. ಹೆದ್ದಾರಿ ನಿರ್ಮಾಣ ಮತ್ತು ನಿರ್ವಹಣೆ ಕೇಂದ್ರದ ಹೊಣೆ ಎನ್ನುವ ಮನೋಭಾವ ಬೆಳೆಯಬಾರದು. ಹೆದ್ದಾರಿಯಲ್ಲಿ ಪ್ರಯಾಣ ಮಾಡುವವರಿಗೆ ಕುಡಿಯುವ ನೀರಿನಿಂದ ಹಿಡಿದು ಆಹಾರವೂ ದೊರಕುವಂತೆ ವ್ಯವಸ್ಥೆ ಮಾಡಬೇಕು. ಅದರಲ್ಲೂ ರಾತ್ರಿವೇಳೆ ಈ ಹೆದ್ದಾರಿಗಳಲ್ಲಿ ಪ್ರಯಾಣ ಮಾಡುವುದು ಅಪಾಯಕಾರಿ. ರಾತ್ರಿ ವೇಳೆ ವಿಭಜಕದ ಆಕಡೆ ಬರುವ ವಾಹನಗಳ ಬೆಳಕು ಎಷ್ಟು ತೊಂದರೆ ಕೊಡುತ್ತದೆ ಎಂಬುದು ಚಾಲಕರಿಗೆ ಮಾತ್ರ ಗೊತ್ತಿರುತ್ತದೆ. ಪಾರ್ಕಿಂಗ್ ಲೈಟ್‌ನಲ್ಲೇ ಹೋಗಬಹುದು. ಇದೆಲ್ಲದರ ಬಗ್ಗೆ ವಾಹನ ಚಾಲಕರಲ್ಲಿ ಜಾಗೃತಿ ಮೂಡಿಸುವುದು ಮುಖ್ಯ. ಹೆದ್ದಾರಿ ಸುಂಕದ ವಸೂಲಿ ಸಾರ್ಥಕ ಎನಿಸಬೇಕು ಎಂದರೆ ಎಲ್ಲ ಸವಲತ್ತುಗಳನ್ನು ಕಲ್ಪಿಸಿಕೊಡಬೇಕು.