ರಾಹುಲ್ ಗಾಂಧಿ ಸಂಸತ್ ಸದಸ್ಯತ್ವ ಅನರ್ಹ: ನೀಚ, ಹೇಡಿತನದ ಕೆಲಸ: ಸಿದ್ದರಾಮಯ್ಯ ವಾಗ್ದಾಳಿ

ಸಿದ್ದರಾಮಯ್ಯ
Advertisement

ಹುಬ್ಬಳ್ಳಿ: ಲೋಕಸಭೆಯಿಂದ ರಾಹುಲ್ ಗಾಂಧಿಯವರನ್ನು ಅಮಾನತ್ತು ಮಾಡಿರುವುದು ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಕರಾಳ ದಿನ. ಇದೊಂದು ನೀಚ ಹಾಗೂ ಹೇಡಿತನದ ಕೆಲಸ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ನಗರದಲ್ಲಿ ಶುಕ್ರವಾರ ಸಂಜೆ ಬೆಂಗಳೂರಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ನಾಯಕರನ್ನು ಎದುರಿಸಲಾಗದೇ ಈ ಷಡ್ಯಂತ್ರ ಮಾಡಿದ್ದಾರೆ. ದೇಶವನ್ನು ಈಗಾಗಲೇ ಬಹಳಷ್ಟು ಜನ ಕೊಳ್ಳೆ ಹೊಡೆದು ವಿದೇಶಕ್ಕೆ ಓಡಿ ಹೋಗಿದ್ದಾರೆ. ಬ್ಯಾಂಕ್‌ಗಳನ್ನು ಲೂಟಿ ಮಾಡಿದ್ದಾರೆ. ಸಾರ್ವಜನಿಕರ ಹಣವನ್ನು ಲೂಟಿ ಹೊಡೆದು ಓಡಿ ಹೋದವರನ್ನು ಏನೆಂದು ಕರೆಯಬೇಕು? ರಾಹುಲ್ ಗಾಂಧಿ ಅವರು ಲೂಟಿ ಮಾಡಿ ಹೋದವರನ್ನು ಕರೆದಿದ್ದು ತಪ್ಪಾ ಎಂದು ಪ್ರಶ್ನಿಸಿದರು.
ಪ್ರಜಾಪ್ರಭುತ್ವದಲ್ಲಿ ವಾಕ್ ಸ್ವಾತಂತ್ರ‍್ಯ ಇಲ್ಲವೇ, ಸತ್ಯ ಹೇಳುವ ವ್ಯಕ್ತಿಗಳು ಸತ್ಯವನ್ನು ಹೇಳಿದರೆ ಅದನ್ನು ಬಿಜೆಪಿಯವರಿಗೆ ತಡೆದುಕೊಳ್ಳಲು ಆಗುವುದಿಲ್ಲ. ಹೀಗಾಗಿ, ಬಿಜೆಪಿಯವರು ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವ ಅನರ್ಹ ಮಾಡಿದ್ದಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಮಾನನಷ್ಟ ಮೊಕದ್ದಮೆಯಲ್ಲಿ ಕೋರ್ಟ್ ಎರಡು ವರ್ಷ ರಾಹುಲ್ ಗಾಂಧಿ ಅವರಿಗೆ ಶಿಕ್ಷೆ ಕೊಟ್ಟಿದ್ದು ಇದೇ ಮೊದಲ ಇತಿಹಾಸವಾಗಿದೆ. ಆದರೆ, ಅದೇ ಕೋರ್ಟ್ನ ತಿರ್ಮಾನ ಪ್ರಶ್ನಿಸಿ ಹೈಕೋರ್ಟ್ಗೆ ಅಪೀಲು ಹೋಗಲು ಅವಕಾಶವಿದೆ. ಹೀಗಾಗಿ, ಯಾವ ಕೋರ್ಟ್ ಶಿಕ್ಷೆ ಕೊಟ್ಟಿದೆಯೋ ಅದೇ ಕೋರ್ಟ್ ಜಾಮೀನು ಕೊಟ್ಟಿದೆ ಎಂದು ಹೇಳಿದರು. ಹೀಗಿರುವಾಗ ರಾಹುಲ್ ಗಾಂಧಿ ಅವರ ಲೋಕಸಭೆ ಸದಸ್ಯತ್ವ ಅನರ್ಹಗೊಳಿಸಿದ್ದು ಖಂಡನೀಯ. ಇದು ಪ್ರಜಾಪ್ರಭುತ್ವದ ವಿಪರ್ಯಾಸವಾಗಿದೆ. ಅಷ್ಟೇ ಅಲ್ಲದೇ ಮಾರಕವೂ ಕೂಡ. ಇದನ್ನು ನಾವು ಬ್ಲಾಕ್ ಡೇ ಎಂದು ಕರೆಯುತ್ತೇವೆ ಎಂದರು. ದೇಶವನ್ನು ಲೂಟಿ ಮಾಡಿದವರಿಗೆ ಶಿಕ್ಷೆ ಕೊಡುವ ಬದಲು ಅವರಿಗೆ ರಕ್ಷಣೆಗೆ ಬಿಜೆಪಿ ನಿಂತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ನಾನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕೆಂಬುದನ್ನು ನಮ್ಮ ಹೈಕಮಾಂಡ್ ತಿರ್ಮಾನ ಮಾಡುತ್ತದೆ. ಈಗಾಗಲೇ ೨೦ ರಿಂದ ೨೫ ಕ್ಷೇತ್ರದ ಜನರು ನನ್ನ ಮೇಲಿನ ಅಭಿಮಾನದಿಂದ ಸ್ಪರ್ಧೆ ಮಾಡಲು ಆಹ್ವಾನ ನೀಡಿದ್ದಾರೆ. ಹೀಗಿರುವಾಗ ಬಿಜೆಪಿಯವರು ನನಗೆ ಸ್ಪರ್ಧೆಗೆ ಕ್ಷೇತ್ರವಿಲ್ಲ ಎಂಬುದು ಹಾಸ್ಯಾಸ್ಪದ ಎಂದು ಹೇಳಿದರು.