ರೀಲ್ಸ್‌ ಮಾಡಿ ಸಸ್ಪೆಂಡ್‌ ಆದ ಡ್ರೈವರ್-ಕಂಡೆಕ್ಟರ್

Advertisement

ಧಾರವಾಡ: ಹಿಂಗೂ ಉಂಟಾ… ಛತ್ರಿ ಹಿಡಕೊಂಡ ಗಾಡಿ ಹೊಡಿಯೋದು… ಮುಂದ ಗಾಡಿ ಬರಾಕತ್ತಾವ್ ನೋಡಿ ಹೊಡಿ….
ಕರ್ನಾಟಕ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಮತ್ತು ನಿರ್ವಾಹಕರ ರೀಲ್ಸ್ ಹುಚ್ಚು ಸದ್ಯ ಅವರ ನೌಕರಿಗೆ ಕುತ್ತು ತಂದಿದೆ. ಧಾರವಾಡ ಉಪ್ಪಿನಬೆಟಗೇರಿ ಮಾರ್ಗವಾಗಿ ಚಲಿಸುತ್ತಿದ್ದ ಬಸ್ ಚಾಲಕ ಹನುಮಂತಪ್ಪ ಕಿಲ್ಲೇದಾರ ಮತ್ತು ನಿರ್ವಾಹಕಿ ಅನಿತಾ ಎಚ್ ಅವರ ರೀಲ್ಸ್ ಹುಚ್ಚಿಗೆ ಅಮಾನತ್ತು ಆಗಿದ್ದು, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ಶುಕ್ರವಾರ ಸಂಜೆ ಅಮಾನತ್ತು ಆದೇಶ ಹೊರಡಿಸಿದ್ದಾರೆ.
ನಿರ್ವಾಹಕಿ: ಮುಂದೆ ಗಾಡಿ ಬರಾಕತ್ತಾವ್ ನೋಡಿ ಹೊಡಿ…
ಚಾಲಕ: ನೀ ಮೊಬೈಲ್ ಕರೆಕ್ಟ್ ಹಿಡಕೋ…
ನಿರ್ವಾಹಕಿ: ಎಲ್ಲಾ ವಿಡಿಯೋ ಮಾಡಿ ಎಲ್ಲಾರಿಗೂ ಬಿಟ್ಟ ಬಿಡೋದ್.. ಹಿಂಗೂ ಉಂಟಾ ಛತ್ರಿ ಹಿಡಕೊಂಡ ಗಾಡಿ ಹೊಡಿಯೋದು…
ಗುರುವಾರ ಸಂಜೆ ೪.೩೦ರ ಸುಮಾರಿಗೆ ಜಿಲ್ಲೆಯಲ್ಲಿ ಗಾಳಿ ಸಮೇತ ಮಳೆ ಸುರಿಯುತ್ತಿದ್ದ ಸಂದರ್ಭದಲ್ಲಿ ಹನುಮಂತಪ್ಪ ಮತ್ತು ಅನಿತಾ ಅವರು ರೀಲ್ಸ್ ಮಾಡುವ ಉದ್ದೇಶದಿಂದ ವಿಡಿಯೋ ಮಾಡಿದ್ದು, ಇದು ಎಲ್ಲೆಡೆ ವೈರಲ್ ಆಗಿತ್ತು. ಆದರೆ, ಆ ಸಂದರ್ಭದಲ್ಲಿ ಪ್ರಯಾಣಿಕರು ಇದ್ದಿಲ್ಲ ಎನ್ನುವುದು ಅವರ ವಾದ.
ಏನೇ ಆಗಲಿ ಹುಚ್ಚುಚ್ಚಾಗಿ ಮಾಡುವ ರೀಲ್ಸ್‌ಗೆ ಸಾರಿಗೆ ಸಂಸ್ಥೆಯ ಆಸ್ತಿಗೆ ಹಾನಿ ಮಾಡುವುದಾಗಲಿ ಅಥವಾ ತಮ್ಮ ಪ್ರಾಣಕ್ಕೂ ಸಂಕಷ್ಟ ತಂದುಕೊಳ್ಳುವುದಾಗಲಿ ಮಾಡುವುದು ಸರಿಯಾದ ಕ್ರಮವಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಾಹನದ ತಪಾಸಣೆ ಮಾಡಿದ್ದು, ಅದರ ಮೇಲ್ಛಾವಣಿ ಸೋರಿಕೆ ಕಂಡುಬಂದಿಲ್ಲ. ಅಲ್ಲದೇ ಈ ಕುರಿತು ಯಾವುದೇ ದೂರುಗಳೂ ಬಂದಿಲ್ಲ. ಆದರೆ, ಚಾಲಕ ಮತ್ತು ನಿರ್ವಾಹಕರು ಮನೋರಂಜನೆಗಾಗಿ ವಿಡಿಯೋ ಚಿತ್ರೀಕರಣ ಮಾಡಿದ್ದು, ಇದಕ್ಕೆ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ಸ್ಪಷ್ಟೀಕರಣ ನೀಡಿದ್ದಾರೆ.